ಬಾಳಿಗೊಂದು ಚಿಂತನೆ (11) - ದೈವತ್ವ

ಬಾಳಿಗೊಂದು ಚಿಂತನೆ (11) - ದೈವತ್ವ

ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವುಗಳು. ಆದರೆ ಒಮ್ಮೊಮ್ಮೆ ಈ ಪ್ರಕೃತಿ ಇರುವುದೇ ನಮಗಾಗಿ ಎಂಬ ಭ್ರಮೆಯಿಂದ, ಅದರ ನಾಶಕ್ಕೆ ಹೆಜ್ಜೆಯಿಟ್ಟುಬಿಡುತ್ತೇವೆ. ಹೀಗೆ ಒಬ್ಬೊಬ್ಬರಾಗಿ ಅಧಿಕಾರ ಚಲಾಯಿಸಿ *ದೈವತ್ವ* ಹೋಗಿ ಇಂದು ವಿನಾಶದತ್ತ ಬಂದು ನಿಂತಿದೆ. ಗಾಳಿ ನಮ್ಮ ಉಸಿರು, ಉಸಿರೇ ದೇವರು, ಉಸಿರು ನಿಂತಾಗ ಏನಿದೆ, ಏನಾಗುತ್ತದೆ, ಎಲ್ಲವನ್ನೂ ಬಲ್ಲವರು ನಾವು.ಆದರು ಗೊತ್ತಿದ್ದು ಗೊತ್ತಿದ್ದೂ ಉಸಿರಿಗೆ ಸಂಚಕಾರ ತರುವ ಕೆಲಸಕ್ಕೆ ಕೈ ಹಾಕಿದ್ದೇವೆ. ನೀರು, ಆಕಾಶ, ಭೂಮಿ ಎಲ್ಲವೂ ನಮಗೆ ಬೇಕು, ಎಲ್ಲದರಲ್ಲಿಯೂ ಆ ಭಗವಂತನನ್ನು ಕಾಣುವವರು ನಾವು.

ಮುಗ್ಧ ಮಗುವಿನಲ್ಲಿಯೂ ದೈವತ್ವವನ್ನು ಕಾಣುತ್ತೇವೆ. *ಇತರರು ಸರಿ ಇಲ್ಲ, ನಾನು ಸರಿ ಇದ್ದೇನೆ* ಹೇಳುವ ಧರ್ಮ ಪ್ರಚಾರಕರಿಂದಲೇ ಇಂದು ಸತ್ಯದ ಸಾಕ್ಷಾತ್ಕಾರದ ಕಗ್ಗೊಲೆ ಆಗುತ್ತಿದೆ. ನಾನು ಹೇಳಿದ್ದೇ ಸರಿ ಎಂಬ ವಾದ ಯಾಕೆ? ಇನ್ನೊಬ್ಬ ಹೇಳಿದ್ದರಲ್ಲಿಯೂ ಹುರುಳಿರಬಹುದಲ್ಲವೇ?

ಮನಸ್ಸಿನಲ್ಲಿ, ಗೊಂದಲ, ಅಹಂಭಾವ, ದ್ವೇಷ, ಅಸೂಯೆ, ಸ್ವಾರ್ಥ ಇವುಗಳಲ್ಲಿ ಒಂದು ಬಂದರೂ ಸಾಕು, ನಾವು ಕಳಂಕಿತರಾಗಲು. ನಮ್ಮ ಮನಸ್ಸನ್ನು ಆಕಾಶದಷ್ಟು ತೆರೆದಿಟ್ಟಾಗ *ದೈವತ್ವ* ಗೋಚರಿಸಬಹುದು. ಈ ಪ್ರಕೃತಿಯಲ್ಲಿ ನಮ್ಮಿಂದಲೂ ಚೆನ್ನಾಗಿ ಪ್ರಾಣಿ ಪಕ್ಷಿಗಳು ಬದುಕುತ್ತವೆ. ಅವುಗಳಿಗೆ ಪ್ರಕೃತಿಯೇ ಭಗವಂತ. ಯಾವುದೇ ಸಿಟ್ಟು, ಸೆಡವುಗಳಿಲ್ಲದ ಪಕ್ಷಿಗಳು ಸೂರ್ಯೋದಯಕ್ಕೆ ಮೊದಲೇ ಹಾರಾಡಲು ಆರಂಭಿಸುತ್ತವೆ. ನಾಳಿನ ಚಿಂತೆಗಳಿಲ್ಲದ ಹಕ್ಕಿಗಳು ಸಂಜೆಯವರೆಗೂ ಸ್ವಚ್ಛಂದವಾಗಿ ಹಾರಾಡುತ್ತವೆ. ಅವುಗಳು ಪ್ರಕೃತಿಯಲ್ಲಿಯೇ ದೈವತ್ವವನ್ನು ಕಾಣುತ್ತವೆ.

ಬುದ್ಧಿಜೀವಿಗಳಾದ ನಾವುಗಳು *ಅಹಂ*ನಿಂದ ಬೀಗಿ ಎಲ್ಲವನ್ನೂ ಕಡೆಗಣಿಸಿ ಅಧೋಪತನಕ್ಕೆ (ಪಾತಾಳಕ್ಕೆ) ಇಂಚು ಇಂಚಾಗಿ ಕುಸಿಯುತ್ತಿದ್ದೇವೆ. ಇದನ್ನು ಸರಿಪಡಿಸದೆ ಹೋದರೆ ನಮ್ಮ ಮುಂದಿನ ಭವಿಷ್ಯ ಏನಾದೀತೆಂದು ಊಹಿಸುವುದೂ ಕಷ್ಟ.ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡೋಣ, ಪ್ರಪಂಚದ ಆಗು ಹೋಗುಗಳ ಪರಿಚಯ ಮಾಡಿಸೋಣ, ಗುರು ಹಿರಿಯರಲ್ಲಿ,ಹೆತ್ತವರಲ್ಲಿ, ಪ್ರಕೃತಿಯಲ್ಲಿ ದೈವತ್ವವನ್ನು ಕಾಣುವಂತೆ ಬೆಳೆಸೋಣ. *ದೇವರ ಭಯವೇ ಜ್ಞಾನದ ಆರಂಭ*ಎಂಬುದನ್ನು ತಿಳಿಯ ಪಡಿಸೋಣ.

-ರತ್ನಾಭಟ್ ತಲಂಜೇರಿ

ಚಿತ್ರ : ಶ್ರೇಯಸ್ ಕಾಮತ್, ಬೆಂಗಳೂರು