ಬಾಳಿಗೊಂದು ಚಿಂತನೆ - 110

ಬಾಳಿಗೊಂದು ಚಿಂತನೆ - 110

*ದಾನೇ ಸರ್ವಂ ಪ್ರತಿಷ್ಠಿತ |*

*ತಸ್ಮಾದ್ದಾನಂ ಪರಮಂ ವದಂತಿ|*|ಉಪನಿಷತ್ತಿನಲ್ಲಿ ಉಲ್ಲೇಖಿಸಿದ ಅನ್ನದಾನದ ಒಂದು ಮಾತು.

ಹಸಿದು ಬಂದವಗೆ ಒಂದು ತುತ್ತು ಅನ್ನ ನೀಡಿದರೆ ಕೋಟಿ ಪುಣ್ಯವಂತೆ. ಅನ್ನದಾನ ಮಾಡಿದರೆ ಪ್ರಾಣದಾನ ಮಾಡಿದಷ್ಟೇ ಫಲವಂತೆ. ನಾವು ತಿನ್ನುವ ಅನ್ನ (ಆಹಾರ)ವೇ ಬುದ್ಧಿಯಾಗಿ ಪರಿವರ್ತನೆಯಾಗುವುದು. ಪೋಷಕಾಂಶಗಳಿಂದ ಕೂಡಿದ ಆಹಾರದಿಂದಲೇ ಬುದ್ಧಿ, ತೇಜಸ್ಸು, ಆಯುಷ್ಯ, ಬಲ, ಸತ್ತ್ವ, ವೀರ್ಯ, ಧೈರ್ಯ, ಜ್ಞಾನ, ಕಾಂತಿ ಎಲ್ಲವೂ ಶರೀರದಲ್ಲಿ ವೃದ್ಧಿಯಾಗುತ್ತದೆ, ಆರೋಗ್ಯ ಲಭಿಸುತ್ತದೆ. ಸುಖವಾಗಿರಬೇಕೆಂಬ ಆಶಯ ಪ್ರತಿಯೊಬ್ಬನಿಗೂ ಇರುವುದು ಸಹಜ. ಗೋದಾನ, ಭೂದಾನ, ಸುವರ್ಣದಾನದಲ್ಲಿ ತೃಪ್ತಿಯೆಂಬುದಿಲ್ಲ. ಆದರೆ ಅನ್ನ ಉಂಡವ ಸಾಕು ಎಂದು ತೃಪ್ತಿಯಿಂದ ಆತ್ಮಸಾಕ್ಷಿಯಾಗಿ ಹೇಳುತ್ತಾನೆ. ಅನ್ನದಾನದ ಬಗ್ಗೆ ಆಚಾರ್ಯರು, ದಾಸವರೇಣ್ಯರು, ತತ್ವಜ್ಞಾನಿಗಳು, ದಾರ್ಶನಿಕರು ಬಹಳಷ್ಟು ಮಂದಿ ನೀಡಿ ಸಹಕರಿಸಿ, ಪುಣ್ಯಫಲ ಖಂಡಿತವಾಗಿಯೂ ಇದೆ ಎಂದು ಹೇಳಿದ್ದಾರೆ. ಓರ್ವ ಹಸಿವಿನಿಂದ ಬಳಲಿದವನಿಗೆ ನಾವು ಕರೆದು ಊಟ ನೀಡಿದಾಗ, ಅವನು ಗಬಗಬನೆ ತಿನ್ನುವುದನ್ನು ಕಂಡಾಗ ನಮ್ಮ ಕರುಳು ಚುರುಕ್ ಹೇಳುತ್ತದೆ. ಹಸಿವೆ ಅನ್ನುವುದು ಅಗ್ನಿದೇವನಿದ್ದಂತೆ. ಅದು ಭಗವಂತನಿಗೆ ಸಮರ್ಪಿತ. ಶಿವಪುರಾಣದಲ್ಲಿ ಸಹ ಅನ್ನದಾನದ ಬಗ್ಗೆ ಮಾಹಿತಿಯಿದೆ. ಭಗವಾನ್ ಶ್ರೀ ಕೃಷ್ಣ ಅನ್ನದಾನದ ಬಗ್ಗೆ ಭೀಷ್ಮ ಪಿತಾಮಹರಲ್ಲಿ ಹೇಳುತ್ತಾ "ಆಹಾರವನ್ನು ಬಿಸಾಡಬಾರದು, ನಮಗೆ ಎಷ್ಟು ಬೇಕೋ ಅಷ್ಟೇ ತೆಗೆದುಕೊಳ್ಳಬೇಕು. ನಮ್ಮ ದೇಹದಲ್ಲಿ ಪ್ರಾಣ ಇರುವುದೇ ಅನ್ನದ ಕಾರಣವಾಗಿ"ಎಂದು ಹೇಳಿದ ಉಲ್ಲೇಖವಿದೆ.

ಅನ್ನವನ್ನು ಯಾವತ್ತೂ ನಿಂದಿಸಬಾರದು.*ಅನ್ನವೇ ಪರಬ್ರಹ್ಮ* ಅನ್ನದಿಂದಲೇ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಂದ ನಮ್ಮ ದೇಹದ ಎಲ್ಲಾ ಕಾರ್ಯಗಳೂ ನಡೆಯುವುದು ತಿಳಿದೇ ಇದೆ. ನಮ್ಮ ಶತ್ರುಗಳೇ ಆದರೂ ತುತ್ತು ಅನ್ನ ಬಯಸಿ ಬಂದವರಿಗೆ ನೀಡಬೇಕು.

ವೇದಗಳಲ್ಲಿ ಹೇಳಿದಂತೆ *ಅನ್ನದಾನಂ ಸಮಂದಾನಂ ತ್ರಿಲೋಕೇಷು ನ ವಿಧತೇ* ಎಂಬುದು ವೇದೋಕ್ತಿ. *ಅನ್ನಸ್ಯಂ ಕ್ಷುಧಿತಂ ಪಾತ್ರಂ* ಹಸಿದವನಿಗೆ ಮಾತ್ರ ಆಹಾರದ ಅವಶ್ಯಕತೆ. ಹೊಟ್ಟೆ ತುಂಬಿದವನಿಗೆ ನೀಡಬಾರದು. ಊಟ ಕೊಡುವಾಗ ಜಾತಿ, ಮತ, ಪಂಥ, ಭೇದ, ಹೆಣ್ಣು- ಗಂಡು, ಪ್ರಾಯ, ವಿದ್ಯೆ, ಸ್ವಹಿತ ಯಾವುದೂ ನೋಡಬಾರದು.

ಆದಿಶಂಕರರು ಶಕ್ತಿ ಸ್ವರೂಪಿಣಿ ತಾಯಿ ಜಗನ್ಮಾತೆಯನ್ನು ಹಾಡಿ ಹೊಗಳಿದ ಸ್ತೋತ್ರ 

ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣ ವಲ್ಲಭೇ|

ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ||

ನಾವೆಲ್ಲರೂ ಪ್ರತಿನಿತ್ಯ ಸ್ತುತಿಸುವ ಸ್ತೋತ್ರ ವಾಗಿದೆ.

ನಮ್ಮ ಭಾರತೀಯ ಸಂಸ್ಕೃತಿ ಯಲ್ಲಿ  ಏನೇ ಸಮಾರಂಭವಿರಲಿ ಅತಿಥಿ ಸತ್ಕಾರಕ್ಕೆ ಆದ್ಯತೆ ಹೆಚ್ಚು. ಹಸಿವಿಗೆ ತುತ್ತನ್ನ ನೀಡಿ ಕೃತಾರ್ಥರಾಗೋಣ,ಧನ್ಯತೆಯ ಹೊಂದೋಣ.

(ಸ್ತೋತ್ರ: ಮಹಾಭಾರತ ಚಿಂತನಂ)

-ರತ್ನಾ ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ