ಬಾಳಿಗೊಂದು ಚಿಂತನೆ - 111
ಈಶಾವಾಸ್ಯಂಮಿದಂ ಸರ್ವಂ* *ಯತ್ಕಿಂಚ ಜಗತ್ಯಾಂ ಜಗತ್/*
ತೇನ ತ್ಯಕ್ತೇನ ಭುಂಜೀಥಾ ಮಾ* *ಗೃಧಃ ಕಸ್ಯಸ್ವಿದ್ಧನಮ್//*
ಪರಿವರ್ತನ ಶೀಲವಾದ ಎಲ್ಲವೂ ಆ ಈಶನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ನಮಗೇನು ದಕ್ಕಿದೆಯೋ ಅದೇ ಸಿಗುವುದು, ಅದರ ಮೇಲೆಯೇ ನಮಗೆ ಹಕ್ಕಿರುವುದು. ಇರುವುದರಲ್ಲಿಯೇ ತೃಪ್ತಿ ಹೊಂದುತ್ತ ಮೂರು ದಿನದ ಜೀವನವನ್ನು ಒಪ್ಪಿ ಅಪ್ಪಿ, ಅದನ್ನೇ ಮನಸಾರೆ ಅನುಭವಿಸೋಣ. ‘ಮೋಹ ರಹಿತ ಜೀವನ ಸುಖಕ್ಕೆ ರಹದಾರಿ’..ಇನ್ನೂ ಬೇಕು, ಮತ್ತಷ್ಟೂ ಬೇಕು ಎಂದು ಅಡ್ಡದಾರಿ ಹಿಡಿದರೆ ನಮ್ಮ ಜೀವನ ಹೇಸಿಗೆಯ ಕೂಪಕ್ಕೆ ಬೀಳಬಹುದು. ಅದರಿಂದ ಮೇಲೆ ಬರಲಾಗದು. ಈ ಬಗ್ಗೆ ಈಗಾಗಲೇ ಸಾಕಷ್ಟು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದುತ್ತಾ, ನೋಡುತ್ತಾ ಇದ್ದೇವೆ. ಇದೂ ಒಂದು ಬದುಕೇ ಅನ್ನಿಸ್ತದೆ. ಇಲ್ಲಿ ಪತಿ ಪತ್ನಿ ಇಬ್ಬರದೂ ತಪ್ಪಿದೆ. ಗಂಡ ಅಡ್ಡದಾರಿಯಲ್ಲಿ ಸಂಪಾದಿಸಿ ತಂದಾಗ ಹೆಂಡತಿಯಾದವಳು ಅದನ್ನು ತಡೆಯಬೇಕು. ಇರುವುದರಲ್ಲಿ ಬದುಕು ನಡೆಸುವುದೂ ಒಂದು ಜಾಣ್ಮೆ ಅಲ್ಲವೇ? ಪತ್ನಿ ಅಡ್ಡದಾರಿ ಹಿಡಿದರೆ ಪತಿ ತಡೆಯಬೇಕು. ಇಲ್ಲದಿದ್ದರೆ ಹೀಗೆ ಆಗುವುದು. ಅಂಥವರು ದಾನಧರ್ಮ ಆದರೂ ಇದೆಯೇ, ಅದೂ ಇಲ್ಲ.ಆ ದಾನದ ಹಣ ಪ್ರಯೋಜನಕ್ಕೆ ಬಾರದು ಸಹ. ಅಬ್ಬಾ! ಹಣವನ್ನು ಎಲ್ಲೆಲ್ಲಾ ಅಡಗಿಸಿಡಬಹುದು ಎಂಬ ಕಲ್ಪನೆ ಸಹ ಇಲ್ಲದಲ್ಲಿ ಇಟ್ಟ ವಿಚಾರ ನೋಡಿದಾಗ ಆಶ್ಚರ್ಯವೇ ಸರಿ. ನ್ಯಾಯದ ಗಳಿಕೆಯಲ್ಲಿ ಸ್ವಲ್ಪ ತ್ಯಾಗವೂ ಇರಲಿ. ನಮ್ಮ ಗಳಿಕೆಯ ಒಂದಂಶ ಸಮಾಜಕ್ಕೆ ಮೀಸಲಿಡೋಣ. ಬೇರೆಯವರ ಸಂಪತ್ತು ತೃಣಕ್ಕೆ ಸಮ. ನಮಗೆ ಬೇಡ. ಎಲ್ಲ ವೂ ಶಿವನಿಗೆ ಅರ್ಪಿತ ಎಂಬ ಮನೋಭಾವ ನಮ್ಮದಾಗಲಿ.
ಕೊಡುವವನೂ ಅವನಲ್ಲವೇ? ಆ ಪರಮೇಶನ ಒಲುಮೆಯನ್ನು ಪಡೆದುಕೊಳ್ಳೋಣ. ಆತ ಮನಸ್ಸು ಮಾಡದಿದ್ದರೆ ನಮ್ಮದೇನೂ ಇಲ್ಲ. ಎಲ್ಲವೂ ಈಶಮಯ. ಈ ಜಗತ್ತಿನ ತಂದೆ ಆತ. ಶಿವ ಚೈತನ್ಯ ಸ್ವರೂಪನು. ಈ ವಿಶ್ವ ಒಂದು ಮಾಯೆ, ಅದನ್ನು ನಿಯಂತ್ರಿಸುವವ ಈಶ್ವರ. ಆತನಿಗೆ ಉತ್ಪತ್ತಿ ಗೊತ್ತಿದೆ, ವಿನಾಶವೂ ಗೊತ್ತಿದೆ. ಆದ್ದರಿಂದ ಆತ ‘ಭಗವಾನ್’. ಇದನ್ನರಿತು ಬಾಳೋಣ.
(ಆಧಾರ: ಉಪದೇಶಾಮೃತ)
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ