ಬಾಳಿಗೊಂದು ಚಿಂತನೆ - 113

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಲೋಪದೋಷಗಳಿದ್ದೇ ಇರುವುದು ಸಹಜ. ಯಾರೂ ಪರಿಪೂರ್ಣರಲ್ಲ. ತುಂಬಾ ಓದಿ ಜ್ಞಾನವಂತನಾದವನು ಸಹ ತಪ್ಪುಗಳನ್ನು ಮಾಡುತ್ತಾನೆ. ಮಹಾ ಪಂಡಿತರು ಎನಿಸಿಕೊಂಡವರು ಇನ್ನೊಬ್ಬರಲ್ಲಿರುವ ದೋಷವನ್ನು, ತಪ್ಪನ್ನೇ ಎತ್ತಿ ಹೇಳುವವರೂ ಇದ್ದಾರೆ. ನಾವು ಬೇರೆಯವರನ್ನು ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕು. ತಪ್ಪುಗಳನ್ನೇ ಹೇಳುತ್ತಾ ಹೋದರೆ ತಿದ್ದಿ ಬೆಳೆಯಲು ಅವಕಾಶ ಎಲ್ಲಿದೆ? ಎಲ್ಲೋ ಓದಿದ ನೆನಪು ‘ಕಾಳಿದಾಸನಂಥ ಮಹಾಕವಿಯ ಶ್ಲೋಕಗಳಲ್ಲಿ ದೋಷಗಳನ್ನು ಹುಡುಕಿದವರಿದ್ದಾರೆ’ ಜನಸಾಮಾನ್ಯರ ಅವಸ್ಥೆ ಏನೆಂದು ಹೇಳಬೇಕು ಹಾಗಾದರೆ? ಪ್ರತಿಯೊಂದು ವಸ್ತುವಾಗಲಿ, ಬರವಣಿಗೆಯಾಗಲಿ, ಮನುಷ್ಯನಾಗಲಿ ಎಲ್ಲದರಲ್ಲೂ ಗುಣದೋಷಗಳಿವೆ. ಪುರಾಣ ಕಾವ್ಯಗಳತ್ತ ನೋಡಿದರೆ ಶ್ರೀರಾಮಚಂದ್ರ ತಾಟಕಿ ಸಂಹಾರ ಮಾಡಿದ ಸನ್ನಿವೇಶ (ಸ್ತ್ರೀಹತ್ಯೆ), ಮರದಡ್ಡ ನಿಂತು ಶತ್ರು ಸಂಹಾರ (ವಾಲಿವಧೆ), ಪತ್ನಿ ಸೀತೆಯನ್ನೇ ಕಾಡಿಗೆ ಕಳುಹಿಸಿದ ಪ್ರಸಂಗ (ಸೀತಾಪರಿತ್ಯಾಗ)ಇತ್ಯಾದಿ ದೋಷಗಳನ್ನು ಹೇಳುತ್ತಾರೆ.
ವಿದ್ವಾಂಸರ ಪರಿಶ್ರಮ, ಕಷ್ಟ ಅವರಿಗೇ ಗೊತ್ತು. ಜನಸಾಮಾನ್ಯರು ವಿದ್ವಾಂಸರ ಬಗ್ಗೆ ಬಹಳ ಸುಲಭವಾಗಿ ಶಾಸ್ತ್ರಗ್ರಂಥಗಳನ್ನು ರಚಿಸುತ್ತಾರೆ ಎಂದು ತಿಳಿದಿದ್ದಾರೆ. ಆದರೆ ರಚನೆಗಾಗಿ ಅವರು ಆಳವಾದ ಅಧ್ಯಯನ, ಓದು ಕೈಗೊಳ್ಳಲು ಎಷ್ಟು ಕಷ್ಟ ಪಡುತ್ತಾರೆಂಬ ಕಲ್ಪನೆ ಸಹ ಇರುವುದಿಲ್ಲ.
*ವಿದ್ವಾನೇವ ವಿಜಾನಾತಿ*
*ವಿದ್ವಜ್ಜನಪರಿಶ್ರಮಮ್/ನಹಿವಂಧ್ಯಾವಿಜಾನಾತಿ*
*ಗುರ್ವೀಂ ಪ್ರಸವ ವೇದನಾಮ್*//
ಹೇಗೆ ವಿದ್ವಾಂಸರ ಶ್ರಮವನ್ನು ಅಳೆಯಲು ಸಾಧ್ಯವಿಲ್ಲ. ಒಂಬತ್ತು ತಿಂಗಳು ಹೊತ್ತು ಹೆರುವ ನೋವು ಹೆತ್ತ ತಾಯಿಗೆ ಹೊರತು ಬೇರೆಯವರಿಗೆ ಹೇಗೆ ಗೊತ್ತಾಗುವುದು ಹೇಳಿ? ತಪ್ಪುಗಳನ್ನು ಹೇಳುವಾಗ, ಲೋಪದೋಷಗಳನ್ನು ತಿಳಿಸುವಾಗ ಇತರರಿಗೆ ನೋವಾಗದಂತೆ ವ್ಯವಹರಿಸುವುದು ಜಾಣನಾದವನ ಲಕ್ಷಣ. ಕಲಿಯುವುದೇ ಬೇರೆ, ಅನುಭವವೇ ಬೇರೆ.ಆದಷ್ಟೂ ಅನ್ಯರು ನಮ್ಮತ್ತ ಬೊಟ್ಟು ಮಾಡದ ಹಾಗಿದ್ದರೆ ಚಂದ. ಮತ್ತೆ ಹೇಳುವ ಒಂದು ವರ್ಗ ಎಂದೇ ಇರುತ್ತದೆ. ಅವರು ಒಳ್ಳೆಯದಾದರೂ ಕೆಟ್ಟದಾದರೂ ಹೇಳುವುದೇ ಅವರ ಕೆಲಸ. ಅವರನ್ನು ಏನೂ ಮಾಡಲಾಗದು. ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಒಂದು ಮಾತಿದೆ ‘ಅಂಡೆ ಬಾಯಿ ಕಟ್ಟಬಹುದು, ದೊಂಡೆ ಬಾಯಿ ಕಟ್ಟಲಾಗದು’ ಎಂಬುದಾಗಿ.
ತಪ್ಪು ಸಹಜ ತಿದ್ದಿ ನಡೆಯೋಣ ಆಗದೇ? ಎಡವಿ ಬಿದ್ದಾಗ ಎದ್ದು ನಿಂತು ಮುಂದೆ ಎಡವದ ಹಾಗೆ ಜಾಗ್ರತೆ ಮಾಡುತ್ತೇವೆ. ಹಾಗೆಯೇ ನಮ್ಮ ಬದುಕು ಸಹ. ಪುಟ್ಟ ಮಗು ಅಂಬೆಗಾಲಿಡುತ್ತಿರುವ ಸಮಯದಲ್ಲಿ ಎಡವುದು ಸಹಜ. ಆದರೆ ಎಷ್ಟು ಜಾಗ್ರತೆ ಮಾಡುವುದನ್ನು ನಾವು ಗಮನಿಸುತ್ತೇವೆ. ಮತ್ತೂ ಬಿದ್ದರೆ ಹಿರಿಯರು ಸಹಕರಿಸುತ್ತಾರೆ. ಅದೇ ರೀತಿ ಪರಸ್ಪರ ಸಹಕಾರ ತತ್ವದ ಬಾಳು ನಮ್ಮಲ್ಲೂ ಇರಲಿ.
-ರತ್ನಾ ಭಟ್ ತಲಂಜೇರಿ
(ಶ್ಲೋಕ: ಸಂಸ್ಕೃತ ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ