ಬಾಳಿಗೊಂದು ಚಿಂತನೆ - 116

ಸಾಮಾನ್ಯವಾಗಿ ಭಗವದ್ಗೀತೆ ಓದದವರು ಯಾರೂ ಇರಲಾರರು ಅನ್ನಿಸುತ್ತದೆ. ಇದು ಆ ಪರಮಾತ್ಮನು ನಮಗೆ ನೀಡಿರುವ ದೊಡ್ಡ ಸಾಕ್ಷಾತ್ಕಾರವೇ ಸರಿ. ಧರ್ಮಯುದ್ಧದ ಕಾಲವದು. ಒಟ್ಟಾರೆ ಯುದ್ಧ ಮಾಡುವುದು ಕೂಡದು. ಶೋಕದಿಂದ ಭ್ರಾಂತಿಗೊಳಗಾದ ಪಾರ್ಥನಿಗೆ ಏನು ಮಾಡಬೇಕೆಂದು ತೋಚದಿರುವ ಸಂದರ್ಭ. ಯಾರನ್ನು ಏನು ಮಾಡಬೇಕೆಂದು ಅರಿಯದೆ ಸೋತಾಗ, ಬುದ್ಧಿ ಹೊಳೆಯದೇ ಇದ್ದಾಗ ಭಗವಂತನ ಉಪದೇಶಾಮೃತ ಫಲವಾಗಿ ಶ್ರೀಕೃಷ್ಣನಿಂದ ಅರ್ಜುನನಿಗೆ ಹೇಳಲ್ಪಟ್ಟ ಸಾರವೇ ಭಗವದ್ಗೀತೆ.
ಏನೂ ತೋಚದ ಸಂದರ್ಭ ಭಗವದ್ಗೀತೆ ಸಹಾಯಕ್ಕೆ ಒದಗಿ ಬಂದು, ಏನು ಮಾಡಬೇಕೆಂದು ಸೂಚನೆ ನೀಡಬಹುದು. ನಮ್ಮ ಕಷ್ಟವನ್ನು ಒಬ್ಬರ ಹತ್ತಿರ ಹೇಳುವಾಗ 'ಅಯ್ಯೋ ಮಹರಾಯ, ನನ್ನ ಅವಸ್ಥೆಯೂ ಅಷ್ಟೆ" ಎಂಬುವರ ಬಳಿ ಕಷ್ಟ ಹೇಳಬೇಡಿ. ಅವರಿಗೆ ಅವರದೇ ಹೊರೆ ಇರುವಾಗ,ನಮ್ಮ ಮಾತಿಗೆ ಕಿವಿಕೊಡರು.
"ಎಲ್ಲಾ ಯುದ್ಧ ತಯಾರಿ ಮಾಡಿಕೊಂಡು ಬಂದವ ಹೀಗೆ ತಲೆಕೆಳಗೆ ಹಾಕಿ, ಶಸ್ತ್ರವನ್ನು ಕೆಳಗಿಳಿಸಿದರೆ ಹೇಗೆ? ಇದು ಹುಚ್ಚುತನವಲ್ಲವೇ?"ಎಂದು ಭಗವಂತನ ಪ್ರಶ್ನೆ.
ಈ ಶರೀರ ನಾಶವಾಗಿ ಹೋಗುವುದು. ಮೂಢರು ಪಾಪಗಳನ್ನು ಮಾಡುತ್ತಾ ಹೋಗುವರು. ನಾಶವಾಗುವ ಈ ಶರೀರಕ್ಕೆ ತಿಳುವಳಿಕೆಯ ಕೊರತೆಯಿಂದಾಗಿ ಮಾಡಬಾರದ್ದನ್ನೆಲ್ಲ ಮಾಡ್ತೇವೆ.
*ಅಂತವಂತ ಇಮೇ ದೇಹಾ: ನಿತ್ಯಸ್ಯೋಕ್ತಾ ಶರೀರಿಣ:/*
*ಅನಾಶಿನೋ ಪ್ರಮೇಯಾತ್ಮಾ ತಸ್ಮಾದ್ಯುಧ್ಯಸ್ವ ಭಾರತ//*
ನಮ್ಮ ದೇಹಗಳು ಶಾಶ್ವತವಲ್ಲ. ಒಂದಲ್ಲ ಒಂದು ದಿನ ನಾಶವಾಗಲೇ ಬೇಕು. ಆದರೆ ಚೈತನ್ಯ ಶಕ್ತಿ ನಿತ್ಯ ನೂತನವಾದದ್ದು, ನಾಶವಿಲ್ಲದ್ದು, ಅಳತೆ, ತೂಕಕ್ಕೆ ಸಿಗಲಾರದು. ನಿನ್ನ ಬಾಣವಾಗಲಿ, ಖಡ್ಗವಾಗಲಿ ಅದನ್ನು ನಾಶ ಮಾಡದು ಆದ ಕಾರಣ ಏಳು, ಯುದ್ಧಮಾಡು, ಭಗವಂತನ ಉಪದೇಶವಿದು. ಕ್ಷತ್ರಿಯ ಕುಲದವ ಯುದ್ಧ ಬೇಡ ಎಂದರೆ ಹೇಗೆ? ಹಿಂದಿನ ಕರ್ಮಗಳ ಫಲ ಈ ಜನ್ಮ. ಕರ್ತವ್ಯ ಮಾಡು ಎದ್ದೇಳು. ಹುಟ್ಟಿದವನಿಗೆ ಸಾವು ನಿಶ್ಚಿತ, ಸತ್ತವನಿಗೆ ಹುಟ್ಟು ಖಂಡಿತ. ಇದು ಅಪರಿಹಾರ್ಯ. ನೀನ್ಯಾಕೆ ಚಿಂತಿಸುವೆ? ಭಗವಂತನ ನುಡಿಗಳು ಚೈತನ್ಯದಾಯಕ. ನಮಗೆ ಎಷ್ಟೇ ಕಷ್ಟ ಬರಲಿ, ಸಮಯ ಮಾಡಿಕೊಂಡು ಭಗವದ್ಗೀತೆ ಓದೋಣ. ನಮ್ಮ ಮನೆಯ ಪುಟ್ಟ ಮಕ್ಕಳಿಗೂ ಕಲಿಸೋಣ. ಜೀವನಸಾರವಿದೆ, ತಿರುಳಿದೆ. ಅರ್ಥೈಸಿಕೊಂಡು ಓದಿದಾಗ ಮನಕೂ ನೆಮ್ಮದಿ, ತಿಳುವಳಿಕೆ, ಜೀವನ ದರ್ಶನವಿದೆ. ನಾವು ಬೇರೆಯವರಿಗೆ ತೊಂದರೆ ಕೊಡಬಾರದು. ಏನೇ ಆದರೂ ಸಹಿಸುವ ಗುಣವಿರಬೇಕು. ತಿಳುವಳಿಕೆ ನೀಡಲು ಪ್ರಯತ್ನಿಸೋಣ. ಮಾನವನಿಗೆ ವಿಚಾರಶಕ್ತಿ ಎಂಬ ಅದ್ಭುತ ಕೊಡುಗೆ ದೇವನಿತ್ತಿದ್ದಾನೆ. ಇದನ್ನು ಸರಿಯಾದ ರೀತಿಯಲ್ಲಿ ಯಾವಾಗ ಎಲ್ಲಿ ಬಳಸಬೇಕೆಂಬ ಜ್ಞಾನ ನಮಗಿರಬೇಕು. ಅದಕ್ಕೆ ಭಗವದ್ಗೀತೆ ಸಹಕಾರಿ. ಒಳ್ಳೆಯದನ್ನು ಮನನ ಮತ್ತು ಅನ್ವಯ ಮಾಡಿಕೊಂಡು ಬದುಕನ್ನು ಹಸನು ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ಸಂಗ್ರಹ: ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಉಪದೇಶಸುಧಾ)
ಚಿತ್ರ ಕೃಪೆ: ಇಂಟರ್ನೆಟ್ ತಾಣ