ಬಾಳಿಗೊಂದು ಚಿಂತನೆ - 119

ದೇವರು ಒಲಿಯುತ್ತಾನೆಂದು, ಸಹಾಯ ಮಾಡುತ್ತಾನೆಂದು ಧ್ಯಾನ, ಪೂಜೆ, ಹೋಮ, ವ್ರತ, ಯಾತ್ರೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಾವು ಮಾಡುವ ಕರ್ಮಗಳನ್ನು, ಕ್ರಿಯೆಗಳನ್ನು, ಕೆಲಸಗಳನ್ನು, ವ್ಯಾಪಾರ, ಉದ್ಯೋಗ ಏನಾದರೂ ಮಾಡಿದರೆ ಭಗವಂತ ಕಣ್ಣು ಬಿಟ್ಟು ನೋಡಿಯಾನು. ನಮ್ಮ ವೃತ್ತಿ, ಉದ್ಯೋಗಗಳನ್ನು ಅಭಿವೃದ್ಧಿಪಡಿಸೋಣ. ಪ್ರಾಮಾಣಿಕತೆಯಿಂದ ದುಡಿದು ಸಂಪಾದಿಸಿದ ಗಳಿಕೆ ಮನಸ್ಸಿಗೆ ಹಿತವೆನಿಸುವುದು. ನಮ್ಮ ಕೆಲಸ, ನಮ್ಮ ಸಂಪಾದನೆ ಎಷ್ಟು ಆತ್ಮತೃಪ್ತಿ ಅಲ್ಲವೇ? ಇತರರ ಸಂಪಾದನೆ ನಮಗ್ಯಾಕೆ? ಅದರಿಂದ ಒಮ್ಮೆಗೆ ಲಾಭವಿದೆ ಎನಿಸಿದರೂ, ಮನದೊಳಗೆ ಭಯವಿದ್ದೇ ಇರುತ್ತದೆ. ಓರ್ವ ಏನೂ ಇಲ್ಲದವ, ಸಣ್ಣ ಸಂಬಳದ ಕೆಲಸವಿರುವವನು ಅಥವಾ ಇರುವವಳು ಐಷಾರಾಮಿ ಜೀವನ ದಿಢೀರ್ ಎಂದು ಸಾಗಿಸುವುದು ಕಂಡಾಗ ಅವರ ಮೇಲೆ ಸಂಶಯ ಬರುವುದು ಸಹಜವಲ್ಲವೇ? ನಾಲ್ಕು ಜನರ ಬಾಯಿಗೆ ಆಹಾರವಾದರೆ ಕಷ್ಟ. ನಿಧಾನದಲ್ಲಿ ಗಳಿಕೆಯ ಗುಟ್ಟು ಹೊರಬರಬಹುದು. ಇದರಿಂದ ಇದ್ದುದರಲ್ಲಿಯೇ ತೃಪ್ತಿ ಹೊಂದುವುದು ಆರೋಗ್ಯ, ನೆಮ್ಮದಿ, ಸಂತಸ ಎಲ್ಲವೂ ಇದೆ. ಒಮ್ಮೆ ನನಗೊಂದು ವಾಸ್ತವ ದೃಢೀಕರಣ (ನನ್ನ ವಿದ್ಯಾರ್ಥಿಯದು) ಬೇಕಿತ್ತು. ಹೋಗಿ ದಾಖಲೆಗಳನ್ನು ನೀಡಿ ಕೇಳಿದರೆ ಮೂರು ದಿನ ಸತಾಯಿಸಿದರು ನೀಡಲು. ಈಗ ಎಲ್ಲಾ ಸುಲಭವಿದೆ. ೨೦ ವರ್ಷಗಳ ಹಿಂದೆ. ಕಡೆಗೆ ಯಾಕೆ ನನ್ನನ್ನು ಸತಾಯಿಸ್ತೀರಿ? ಎಷ್ಟು ಸಲ ಬರುವುದು ಶಾಲಾ ಕೆಲಸ ಬಿಟ್ಟು ಹೇಳಿದ್ದಕ್ಕೆ, ಡ್ರಾವರ್ ತೆಗೆದು ೨೫ ರೂಪಾಯಿ ಇಲ್ಲಿ ಹಾಕಿ ಹೇಳಿದಾಗ ನಾನು ಸುಸ್ತು. ಕೊಡುವುದಿಲ್ಲ ನಿಮ್ಮ ಕರ್ತವ್ಯ ಕೇಳಿದ ದಾಖಲೆ ನೀಡುವುದು, ನನ್ನ ಕೆಲಸ ಶಾಲಾ ಪಠ್ಯ ಚಟುವಟಿಕೆ, ನಾನು ಸಹ ನಿಮ್ಮ ಹಾಗೆ ಸರಕಾರಿ ನೌಕರ ಎಂದೆ. ದುರುಗುಟ್ಟಿ ನೋಡಿದ್ದರಲ್ಲಿ ಮನ್ಮಥ ಶಿವನ ಮೂರನೇ ಕಣ್ಣಿಂದ ಆದ ಹಾಗೆ ಭಸ್ಮ ಆಗುವಹಾಗಿತ್ತು. ನಮ್ಮ ಕ್ಷೇತ್ರದ ಶಾಸಕರ ಪಿ.ಎ.ಅವರ ಹತ್ತಿರ ಹೋಗಿ ಹೇಳಿ ಅಂತೂ ೨೫ರೂ ಕೊಡದೆ ಸಿಕ್ಕಿತು. ಮುಂದೊಂದು ದಿನ ಭೃಷ್ಟಾಚಾರ ಕೇಸಲ್ಲಿ ದೂರದರ್ಶನದಲ್ಲಿ ಅದೇ ಮುಖ ಬೆಳಿಗ್ಗೆಯೇ ದರ್ಶನವಾಯಿತು. ಯಾಕೆ ಹೀಗೆ? ದುಡಿದು ಸಂಪಾದಿಸಿದ್ದು ಸಾಲದೇ? ಹೆಚ್ಚಿನ ಆಸೆ ಯಾಕೆ? ಇರುವುದರಲ್ಲಿ ಉಂಡುಟ್ಟರೆ ತೃಪ್ತಿಯೂ ಸಿಗಬಹುದು. ಶುದ್ಧಹಸ್ತ ಆಭರಣಕ್ಕಿಂತಲೂ ಮಿಗಿಲು. ಮಾನವೀಯತೆಯೆಂಬ ಆಭರಣವಿರಲಿ, ಅನುಕಂಪವಿರಲಿ, ದುಡಿಯೋಣ, ಗಳಿಸೋಣ, ನೆಮ್ಮದಿಯಲಿರೋಣ.
*ಜೀವನೋದ್ಯಮವೆಲ್ಲ ನಗುಮೊಗದಿ ನಡೆಸುತಿರೆ/*
*ಸೇವೆಯದು ಬೊಮ್ಮಂಗೆ---ಮಂಕುತಿಮ್ಮ//*
-ರತ್ನಾ ಕೆ.ಭಟ್, ತಲಂಜೇರಿ
(ಆಕರ: ಮಂಕುತಿಮ್ಮನ ಕಗ್ಗ)
ಚಿತ್ರ ಕೃಪೆ: ಇಂಟರ್ನೆಟ್ ತಾಣ