ಬಾಳಿಗೊಂದು ಚಿಂತನೆ (12) - ದೋಷ

*ದೋಷ*ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸಂದರ್ಭಕ್ಕೆ ಸರಿಯಾಗಿ ನಾವು ಅದನ್ನು ಬಳಸಲು, ಅರ್ಥ ಮಾಡಿಕೊಳ್ಳಲು ಕಲಿಯುವುದೇ ಜಾಣತನ. 'ಆ ಹುಡುಗ ಅಥವಾ ಹುಡುಗಿಯ ಜಾತಕದಲ್ಲಿ ದೋಷವಿದೆ' ಹೇಳುವುದು ಕೇಳಿದ್ದೇವೆ. ರಾಹು, ಕೇತು, ಕುಜ ದೋಷಗಳು ಅಥವಾ ಇನ್ನಾವುದೋ. ನಂತರ ಅದಕ್ಕೆ ಪರಿಹಾರ ಮಾಡುವುದರಲ್ಲಿಯೇ ನಮ್ಮ ಅರ್ಧ ಆಯುಷ್ಯ ಕಳೆದು ಹೋಗುವುದು ಅರಿವಿಗೆ ಬರುವುದೇ ಇಲ್ಲ.
*ಮಾತಿನಲ್ಲಿ ದೋಷ*ಒಬ್ಬೊಬ್ಬರ ಮಾತಿನ ಧಾಟಿ ಯೂ ಭಿನ್ನವಾಗಿರುವುದು ಸಹಜ. ಉಚ್ಛಾರದಲ್ಲಿ, ಮಾತನಾಡುವ ರೀತಿ-ನೀತಿಯಲ್ಲಿ, ಸ್ವರಭಾರದಲ್ಲಿ, ಕುಹಕ, ವ್ಯಂಗ್ಯ, ಸೀದಾ ಹೀಗೆ ದೋಷಗಳಿರಬಹುದು. ನಮಗೆ ಬೇಕಾದ್ದನ್ನು ಸ್ವೀಕರಿಸಿ, ಬೇಡದ ಮಾತುಗಳನ್ನು ಮರೆತು ಬಿಡೋಣ.
ಒಂದು ಹೊಸಮನೆ ಕಟ್ಟಿ, ವಿಜೃಂಭಣೆಯಿಂದ ಸಮಾರಂಭವೇರ್ಪಡಿಸಿ, ಸಂತಸದಲ್ಲಿರುವಾಗ, ಥಟ್ ಅಂಥ ಯಾವುದೋ ಕಾಯಿಲೆ ಮನೆಯ ಸದಸ್ಯರಿಗೆ ಬರುತ್ತದೆ. ಹಲವು ಜನ ಹಲವು ರೀತಿಯಲ್ಲಿ ಮಾತನಾಡುತ್ತಾರೆ. *ವಾಸ್ತುದೋಷ*, ಆಯ ಸರಿ ಇಲ್ಲ, ಸರಿಯಾಗಿ ವಿಚಾರಿಸಿಲ್ಲ ಹೀಗೆ ಹತ್ತು ಹಲವಾರು ರೀತಿಯಲ್ಲಿ, ಪಾಪ, ಮನೆಯ ಯಜಮಾನ ಏನು ಮಾಡುವುದೆಂದು ಚಿಂತಿಸಿಯೇ ಅರ್ಧ ಹಣ್ಣಾಗುತ್ತಾನೆ. ಕಾಯಿಲೆ ಈ ಮೊದಲೇ ಶರೀರಕ್ಕೆ ಪ್ರವೇಶ ಆಗಿರುತ್ತದೆ. ಉಲ್ಬಣ ಆದ್ದು ಮತ್ತೆ.
ಒಂದು ಮಗು *ಕಲಿಕೆ*ಯಲ್ಲಿ ಹಿಂದೆ ಬಿದ್ದಾಗ, ಇಲಾಖೆಯ ಅಧಿಕಾರಿಗಳು ಬಂದು ನೋಡುವ ಪರಿಪಾಠವಿದೆ. ಬೊಟ್ಟು ಮಾಡಿ ತೋರಿಸುವುದು ಆ ಮಗುವಿಗೆ ಬೋಧನೆ ಮಾಡುತ್ತಿರುವ*ಅಧ್ಯಾಪಕರನ್ನು*. ಆದರೆ ಬೇರೆ ಬೇರೆ ಚಟುವಟಿಕೆಗಳನ್ನು ರೂಪಿಸಿ ಕಲಿಸಿದರೂ ಆ ಮಗುವಿಗೆ ತಲೆಗೆ ಹತ್ತುವುದಿಲ್ಲ ಎಂದಾದರೆ, ಅದು ಜನ್ಮತಃ ಬಂದ *ದೋಷ*. ಆದರೆ ಹೇಳುವವರು ಯಾರು? ಸಮಾಜದ ದೃಷ್ಟಿ ಅಧ್ಯಾಪಕನ ಮೇಲೆ.
ನಾವು ಈ ಪ್ರಪಂಚದ ಬೆಳಕನ್ನು ಕಂಡ ಮೇಲೆ, ಒಬ್ಬರಿಗೊಬ್ಬರು *ದೋಷಾರೋಪಣೆ*ಮಾಡುವುದನ್ನು ಬಿಟ್ಟು, ನಮ್ಮಲ್ಲಿಯ ದೋಷವನ್ನು ತಿದ್ದಿ, ಹೊಂದಾಣಿಕೆಯಿಂದ ಎಲ್ಲರೊಳಗೊಂದಾಗಿ ಬದುಕೋಣ ಆಗದೇ? ಅದೇ ಕ್ಷೇಮ, ನೆಮ್ಮದಿ.
-ರತ್ನಾಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ