ಬಾಳಿಗೊಂದು ಚಿಂತನೆ - 120
*ಧಾರಣಾದ್ಧರ್ಮವಿತ್ಯಾಹುಃ* *ಧರ್ಮೋ ಧಾರಯತೇ ಪ್ರಜಾಃ/*
*ತಸ್ಮಾದ್ಧರ್ಮ ಪ್ರಶಂಸನ್ತಿ ಧರ್ಮೋ ರಕ್ಷತಿ ರಕ್ಷಿತಃ//*
ಈ ಪ್ರಪಂಚದ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುವ ಕಾರಣ ಅದಕ್ಕೆ ‘ಧರ್ಮ’ ಹೇಳಿದರು. ಧರ್ಮವು ಸದಾ ಮನುಷ್ಯರನ್ನು ಧಾರಣ ಮಾಡುತ್ತದೆ, ಸಲಹುತ್ತದೆ. ಯಾವಾಗಲೂ ಕಾಪಾಡುತ್ತದೆ. ಧರ್ಮ ಹೇಳುವದು ಕಷ್ಟ ಕಾಲದಲ್ಲಿ ನಮ್ಮನ್ನು ಎತ್ತಿ ಹಿಡಿವ ಒಂದು ಸಾಧನ. ಆದರೆ ನಾವು ಧರ್ಮ ಮಾರ್ಗ ಬಿಟ್ಟು ಹೋಗಬಾರದು. ಆದ ಕಾರಣವೇ ಧರ್ಮವನ್ನು ಎಲ್ಲರೂ ಆಚರಿಸುತ್ತಾರೆ. ಪಾಲಿಸಲ್ಪಟ್ಟ ಧರ್ಮವು ನಮ್ಮನ್ನೇ ಕಾಪಾಡುತ್ತದೆ.
ನಾವು ಓದಿದ, ಕೇಳಿದ ಹಾಗೆ ಯುಧಿಷ್ಠಿರ ಧರ್ಮದ ಸಾಕಾರಮೂರ್ತಿ. ಸದಾಕಾಲ ಧರ್ಮ ಬಿಟ್ಟು ಹೋದವನಲ್ಲ, ಅದೇ ಅವನನ್ನು ಕೊನೇವರೆಗೆ ರಕ್ಷಣೆ ಮಾಡಿತ್ತು. ಹಸಿದವಗೆ ಒಂದು ತುತ್ತು ಅನ್ನ ನೀಡುವುದು ಧರ್ಮ. ಗುರುಹಿರಿಯರಿಗೆ ತಲೆಬಾಗುವುದು ಧರ್ಮ. ಕಷ್ಷಕ್ಕೆ ಕನಿಕರಿಸುವುದು ಧರ್ಮ. ಮಹಿಳೆಯರ, ಬಾಲರ, ವೃದ್ಧರ ರಕ್ಷಣೆ ಮಾಡುವುದು ಧರ್ಮ.ಹಾಗಾದರೆ ಧರ್ಮ ಎನ್ನುವುದು ಒಂದು ಸನಾತನ ಸಂಸ್ಕಾರ. ಮೂಲ ಬೇರದು ನಮ್ಮ ಬದುಕಿನ ಹಾದಿಯಲಿ. ಮಾನವೀಯತೆಯ ತಳಪಾಯ.
ಮಾನ್ಯ ಡಿ.ವಿ.ಜಿ ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಒಂದೆಡೆ ಧರ್ಮದ ಬಗ್ಗೆ ಬಹಳ ಸೊಗಸಾಗಿ ಹೀಗೆ ಹೇಳಿದ್ದಾರೆ.
*ಧರ್ಮವೆಂಬುದದೇನು?ಕರ್ಮವೆಂಬುದದೇನು/*
*ಬ್ರಹ್ಮಾಂಡಕಥೆಯೇನು?ಜೀವಿತವಿದೇನು?//*
*ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕ್ರತಿಜಾಲ/*
*ಬ್ರಹ್ಮವೇ ಜೀವನವೊ--ಮಂಕುತಿಮ್ಮ//*
*ವಕ್ರ ಋಜುಮಿಶ್ರ ಜಗವದರ ಶೋಧನೆ ಧರ್ಮ/*
*ಪ್ರಾಕೃತಧ್ವನಿಮಿಶ್ರವದರಡುಗೆ ರಾಗ//*
*ವ್ಯಾಕೃತದದಿನವ್ಯಾಕೃತಾದಿಸತ್ತ್ವಕೆ ನಿನ್ನ/*
*ಜಾಗೃತಿಪ ಮತಿ ಧರ್ಮ--ಮಂಕುತಿಮ್ಮ//*
ಧರ್ಮ -ಕರ್ಮ ಎಂದರೇನು? ಈ ಬ್ರಹ್ಮ ರಚಿಸಿದ ಜಗತ್ತಿನ ಕಥೆಯೇನು? ಈ ಜೀವಿತದ ಅರ್ಥ, ಇವೆಲ್ಲದಕ್ಕೂ ಆ ಬ್ರಹ್ಮನೇ ಮೂಲ, ಮಾಯೆಯಾದ ಕೈಚಳಕ ಆತನದು. ನಮ್ಮ ಬದುಕೇ ಬ್ರಹ್ಮ. ಓರೆಕೋರೆಗಳ, ಸಟೆ ದಿಟಗಳ, ಕೇಡು ಕಷ್ಟಗಳ, ಉತ್ತಮ ಹಾಳುಗಳ ಮಿಶ್ರಣ ಈ ಪ್ರಪಂಚ. ಯಾರು ಈ ಮಿಶ್ರಣವನ್ನು ಶೋಧಿಸಿ ಜಯ ಪಡೆಯುತ್ತಾನೋ, ಏನಾದರೂ ತಿಳಿಯುವನೋ ಅದು ಧರ್ಮ. ಸಂಸ್ಕಾರದ ಅಂಶವನ್ನು, ಶುದ್ಧರೂಪದಲ್ಲಿ ಕಾಣುವುದೇ ಧರ್ಮ. ಪರಮ ಸತ್ಯದ ಗೋಚರವೇ ಧರ್ಮ. ನಮ್ಮನ್ನು ಜಾಗೃತಿಗೊಳಿಸುವುದೇ ಧರ್ಮ.
ನಾವು ಈ ಸತ್ವವನ್ನು, ಸತ್ಯವನ್ನು ಅರಿತರೆ, ಸಂಸ್ಕಾರದ ತಳಹದಿಯಲ್ಲಿ ನಡೆದರೆ ಬೇರಾವುದು ಬೇಡ ನಮಗೆ. ನಾವು ಏನು ಮಾಡಿದ್ದೇವೆ ಅದರ ಫಲವನ್ನು ಉಣ್ಣುವವರು, ಅನುಭವಿಸುವವರು, ಎಲ್ಲವನ್ನು ಈ ಬದುಕಿನ ಆಡೊಂಬಲದಲ್ಲಿ ನೋಡುತ್ತಿದ್ದೇವೆ. ಎಲ್ಲರೂ ಧರ್ಮವಂತರಾಗಿ ಇದ್ದರೆ ನೆಮ್ಮದಿ ಎಂಬ ಚಾಪೆಯ ಮೇಲೆ ಆರೋಗ್ಯವಾಗಿ ಮಲಗಿ ನಿದ್ರಿಸಬಹುದು.
ಶ್ಲೋಕ: ಋಷಿವಾಣಿ ; ಕಗ್ಗ: ಮಂಕುತಿಮ್ಮನ ಕಗ್ಗ
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ