ಬಾಳಿಗೊಂದು ಚಿಂತನೆ - 122

ಬಾಳಿಗೊಂದು ಚಿಂತನೆ - 122

*ಅದ್ಭಿರ್ಗಾತ್ರಾಣಿ ಶುಧ್ಯಂತಿ ಮನಃ ಸತ್ಯೇನ ಶುಧ್ಯತಿ/*

*ವಿದ್ಯಾ ತಪೋಭ್ಯಾಂ ಭೂತಾತ್ಮಾ  ಬುದ್ಧಿರ್ಜ್ಞಾನೇನ ಶುಧ್ಯತಿ//*

ಶರೀರವನ್ನು, ದೇಹವನ್ನು ಯಾವಾಗಲೂ ನೀರಿನಿಂದ ಶುದ್ಧಮಾಡುತ್ತೇವೆ. ಮನಸ್ಸನ್ನು ಸತ್ಯದ ನಡತೆಯಿಂದ ಶುದ್ಧ ಮಾಡುತ್ತೇವೆ ಅಥವಾ ಮಾಡಬಹುದು. ವಿದ್ಯೆ ಮತ್ತು ತಪಸ್ಸು ಮನುಷ್ಯನನ್ನು ಶುದ್ಧ ಮಾಡುತ್ತದೆ. ಜ್ಞಾನದಿಂದ ಬುದ್ಧಿ, ವಿವೇಕ ಶುದ್ಧ ಆಗಬಹುದು. ತಪಸ್ಸು ಅಂದರೆ ಇಲ್ಲಿ ಕಾಡಿನಲ್ಲಿ ಕುಳಿತು ಮಾಡುವ ತಪಸ್ಸಲ್ಲ. ನಾವು ಕೈಗೊಳ್ಳುವ ಪ್ರತಿಯೊಂದು ಕೆಲಸಕಾರ್ಯಗಳು ತಪಸ್ಸಿನಂತಿರಬೇಕು. ಶ್ರದ್ಧೆ,ಏಕಾಗ್ರತೆ, ಛಲ, ಹಠ, ಸಾಧಿಸಿಯೇ ತೀರುವೆನೆಂಬ ಭಾವನೆಯಿರಬೇಕು. ನಮ್ಮ ಯೋಜನೆ ಯೋಚನೆಗಳು ಫಲಪ್ರದವಾಗಬೇಕಾದರೆ ಮನಸ್ಸು ಶುದ್ಧವಾಗಿದ್ದರೆ ಮಾತ್ರ ಸಾಧ್ಯ. ಜ್ಞಾನವನ್ನು ಸಂಪಾದಿಸಲು ಕಠಿಣ ತಪಸ್ಸು ಬೇಕೇಬೇಕು. ಸುಮ್ಮನೆ ಕುಳಿತಲ್ಲಿಗೆ, ನಾಲ್ಕಕ್ಷರ ಕಲಿತಲ್ಲಿಗೆ, ಒಂದಷ್ಟು ಬರೆದಲ್ಲಿಗೆ ಜ್ಞಾನ ಒಲಿಯದು. ವೈವಿಧ್ಯ ಪುಸ್ತಕಗಳನ್ನು, ಪುರಾಣ ಇತಿಹಾಸಗಳನ್ನು ವೇದೋಪನಿಷತ್ತುಗಳನ್ನು ಓದಿದಾಗ ಜ್ಞಾನ ಬರಬೇಡ ಅಂದರೂ ಬರಬಹುದು. ಜೊತೆಗೆ ನಯ ವಿನಯ ವಿವೇಕ ಅರ್ಥೈಸುವಿಕೆ, ಗ್ರಹಿಕೆ ಮುಂತಾದ ಆಭರಣಗಳನ್ನು ಮೈಗೂಡಿಸಿಕೊಂಡರೆ ಜ್ಞಾನಿಯಾಗುವನು. ಎಲ್ಲವೂ ಕಲಿತೇ ಬರುವುದಲ್ಲ. ಬೆಳೆಯುತ್ತಾ ಹೋದಂತೆ, ಸಮಾಜದಲ್ಲಿ ಎಲ್ಲರೊಂದಿಗೆ ವ್ಯವಹರಿಸುತ್ತ, ಒಡನಾಟ ಮಾಡುತ್ತ ಇರುವುದರಿಂದಲೂ ಅನುಭವವೆಂಬ ಹೂರಣ ಸಿಗುತ್ತದೆ. ಎಲ್ಲವನ್ನೂ ಗ್ರಹಿಸಿಕೊಂಡು ಉತ್ತಮ ಜೀವನ ನಡೆಸೋಣ.

(ಶ್ಲೋಕ: ಸರಳ ಸುಭಾಷಿತ)

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ