ಬಾಳಿಗೊಂದು ಚಿಂತನೆ - 123

ಬಾಳಿಗೊಂದು ಚಿಂತನೆ - 123

ನಮ್ಮ ದೇಶದಲ್ಲಿ ಅರಾಜಕತೆಯಿದ್ದ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿ (ವಿಶೇಷವಾಗಿ ಹಿಂದೂ ಧರ್ಮ, ಮತ ತತ್ವಗಳನ್ನು) ಮೈದಳೆಯುವಂತೆ ಮಾಡಿದವರು ಭಗವತ್ಪಾದರೆಂದು ಹಲವು ಪುಸ್ತಕಗಳಿಂದ ತಿಳಿದು ಬರುವ ವಿಷಯ. ಉಪನಿಷತ್ತಿನ ತಾತ್ವಿಕ ಮೌಲ್ಯಗಳನ್ನು, ವೈದಿಕ ಸಾಹಿತ್ಯದ ಔಚಿತ್ಯವನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಿದವರು. ವೈದಿಕ ಧರ್ಮ ತತ್ವಗಳ ಪ್ರಚಾರಕ್ಕಾಗಿ ಭಾರತದಲ್ಲಿ ಒಂದು ರೀತಿಯ  ದಿಗ್ವಿಜಯ ಯಾತ್ರೆ ಮಾಡಿದವರೆಂದೇ ಹೇಳಬಹುದು.

ಅದ್ವ್ಯೆತ ಸಿದ್ಧಾಂತದ ಪ್ರತಿಪಾದಕರು.’ಬ್ರಹ್ಮವೊಂದೇ ಸತ್ಯ’ ಅವರ ಹೇಳಿಕೆ, ತತ್ವ. ಎಲ್ಲೆಲ್ಲಿ ಆತ್ಮದ ಅವಲೋಕನ ಬೇಡ, ತನ್ನೊಳಗೆ ಅಡಕವಾಗಿರುವ ಆತ್ಮಾವಲೋಕನ ಮಾಡಿ ಮನುಜರೇ, ಸತ್ಯವನ್ನು ತಿಳಿಯಿರಿ ಪ್ರತಿಪಾದಿಸಿದ ಮಹಾ ಮೇಧಾವಿ. ಈ ಜೀವವೇ ಒಂದು ಬ್ರಹ್ಮ ಅರಿಯಿರೆಂದರು. ತನ್ನನ್ನು ಅರಿಯುವುದೇ ಸಾಧನೆ.

ಪಂಚಭೂತ, ಪಂಚಕೋಶ, ಪಂಚೇಂದ್ರಿಯಗಳಿಂದ ಕೂಡಿದ ಈ ದೇಹ ಕಾಲನ ಕರೆಗೆ ಓಗೊಡಲೇ ಬೇಕು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯೇತಿ ಬ್ರಹ್ಮ(ತೈ) ಹೇಳಿದವರು. ದೇಹ ನಾಶವಾದರೂ ಆತ್ಮ ಎಂದಿಗೂ ನಾಶವಾಗದು.

ಜ್ಞಾನವನ್ನು ಬೆಳಗುವಂತೆ ಮಾಡುವ ಕೆಲಸ ನಮ್ಮಿಂದಾಗಬೇಕು. ಸತ್ಕಾರ್ಯಗಳನ್ನು ಮಾಡುವುದರ ಮೂಲಕ. ಈ ಜ್ಞಾನವನ್ನು ಸರಿಯಾದ ಗುರುಗಳ ಮಾರ್ಗದರ್ಶನದಿಂದ ಪಡೆಯಿರೆಂದು ಕರೆಯಿತ್ತರು. ಆಚಾರ್ಯ ಉತ್ತಮೋತ್ತಮನಾಗಿರಬೇಕು. ಶಮದಯ ಅನುಗ್ರಹವಿದ್ದವನಾಗಿರಬೇಕು.

ಹೆತ್ತ ತಾಯಿಯನ್ನು ಪ್ರೀತಿಸಿ, ಆಕೆಯಷ್ಟು ವಾತ್ಸಲ್ಯ, ಮಮಕಾರ ಬೇರೊಬ್ಬರು ಕೊಡಲು ಸಾಧ್ಯವಿಲ್ಲವೆಂದವರು. ಸಮರ್ಪಣಾ ಭಾವಹೃದಯದಿಂದ ಉತ್ಪನ್ನವಾಗಬೇಕು. ಆಡಂಬರದ ಅಗತ್ಯವಿಲ್ಲ. ತನುವಿನಾಳದ ಆಡಂಬರ ಕೈಗೊಂಡ ಕಾರ್ಯದಲ್ಲಿರಲಿ. ನಿರಾಕಾರಿಯಾದ ಭಗವಂತ ಆತ್ಮದಲ್ಲೇ ನೆಲೆಯಿದ್ದರೂ, ಭಕ್ತಿ, ಸ್ತೋತ್ರ, ಶ್ರದ್ಧೆ, ಆಸಕ್ತಿ, ಏಕಾಗ್ರತೆಯಿಂದ ಆತನನ್ನು ಧ್ಯಾನಿಸಿ ಎಂದು ಕರೆಯಿತ್ತರು. ಹಲವಾರು ಶ್ಲೋಕಗಳನ್ನು ರಚಿಸಿದ ಮಹಾನುಭಾವರು. ಇವುಗಳಲ್ಲಿ ತಮ್ಮ ತತ್ವ ಸಿದ್ಧಾಂತಗಳನ್ನೆಲ್ಲ ಪ್ರತಿಪಾದಿಸಿದ್ದಾರೆ. ಭಕ್ತಿಯನ್ನೂ ಕಾಣಬಹುದು. ಸಂಸ್ಕೃತ ಭಾಷೆಯಲ್ಲಿ ರಚಿಸಿದ ಸ್ತೋತ್ರಗಳನ್ನು ಇಂದು ಕನ್ನಡ ಭಾಷೆಯಲ್ಲಿ ಅನುವಾದಿಸಿದ ಹಲವಾರು ಪುಸ್ತಕಗಳನ್ನು ಕಾಣಬಹುದು.

*ಶೃತಿಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ/*

*ನಮಾಮಿ ಭಗವತ್ಪಾದನಂ ಶಂಕರಂ ಲೋಕ ಶಂಕರಂ//*

-ಸಂಗ್ರಹ:ರತ್ನಾ ಕೆ.ಭಟ್ ತಲಂಜೇರಿ

 (ಆಕರ:ಶ್ರೀ ಶಂಕರರ ಸಮಗ್ರ ಸ್ತೋತ್ರ ಮಂಜರಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ