ಬಾಳಿಗೊಂದು ಚಿಂತನೆ - 124

ಬಾಳಿಗೊಂದು ಚಿಂತನೆ - 124

ನಾವು ಎಷ್ಟೋ ಸಲ ಹೇಳುವುದಿದೆ "ಆತನ ಸಜ್ಜನಿಕೆ ನೋಡು" ಎಂಬುದಾಗಿ. ಯಾರು ಏನೇ ಅಂದರೂ ಅವರು ತಮ್ಮ ಸ್ವಭಾವವನ್ನು ಬದಲಾವಣೆ ಮಾಡುವುದಿಲ್ಲ. ಉತ್ತಮರ ಸಹವಾಸ ಮನುಷ್ಯನನ್ನು ಸ್ವಲ್ಪವಾದರೂ ಬದಲಾಯಿಸಿದರೆ  ಆತನ ಬಾಳಿಗೊಂದು ಅರ್ಥ, ಅವನಿಗೂ ಕ್ಷೇಮ. ಆದರೆ ಅದು ಯಾರಿಗೂ ಬೇಡ. 'ನಾನು ಹೀಗೆಯೇ ಇರುವುದು, ನನಗಾರು ಬುದ್ಧಿ ಹೇಳುವ ಅಗತ್ಯವಿಲ್ಲ' ಎಂಬ ಧೋರಣೆ. ಎಲ್ಲಿಯಾದರೂ ಕಿವಿ ಕೊಟ್ಟರೂ ನಾಯಿ ಬಾಲ ನಳಿಕೆಯಲ್ಲಿ ಹಾಕಿದ ಕಥೆ ಇವರದು. ಬಹಳ ಪ್ರಯತ್ನಿಸಿ 'ಏನು ಬೇಕಾದರೂ ಮಾಡೆಂದು' ಬಿಟ್ಟು ಬಿಡುವರು. ಆಗ ಅವನು ಮತ್ತಷ್ಟೂ ಕೆಟ್ಟು ಹೋಗಿ ಸಮಾಜ ಕಂಟಕನಾಗುವನು.

ಸಜ್ಜನರ ಸಹವಾಸ ಹೂಮಾಲೆಯಂತೆ. ಸೊಗಸಾದ ಪರಿಮಳಯುಕ್ತ ಹೂವು ದಾರದಿಂದ ಪೋಣಿಸಿದಾಗ ಮತ್ತಷ್ಟೂ ಚಂದ. ಅದೇ ಪುಷ್ಪಮಾಲೆ ದೇವನ ಶಿರಸ್ಸಿಗೋ ಕೊರಳಿಗೋ ಹಾಕಲ್ಪಟ್ಟಾಗ ಇನ್ನೂ ಚಂದ. ಹೂಮಾಲೆ ಕಟ್ಟಿದವರಿಗೂ ಹೂವಿಗೂ ಸಾರ್ಥಕತೆ. ಅಲ್ಲಿ ಆ ದಾರಕ್ಕೆ (ನಾರಿಗೆ) ಸಹ ಪ್ರಾಮುಖ್ಯತೆ ಬಂತು. ದೇವನ ಪಾದ ಸೇರಿ ಧನ್ಯತಾಭಾವ. ನೀತಿ ಶತಕದ ಒಂದು ಶ್ಲೋಕದಲ್ಲಿ ಬಹಳ ಸೊಗಸಾದ ವರ್ಣನೆಯಿದೆ.

*ಗುಣವಜ್ಜ ನಸಂಪರ್ಕಾದ್ಯಾತಿ ನೀಚೋಪಿ  ಗೌರವಂ/*

*ಪುಷ್ಪಮಾಲಾ ಪ್ರಸಂಗೇನ ಸೂತ್ರಂ* *ಶಿರಸಿ* *ಧಾರ್ಯತೇ//*

ಚಾತಕಪಕ್ಷಿ ನೀರಿಗಾಗಿ ಹಾತೊರೆಯುವುದು ಸಾಮಾನ್ಯ. ಅದಕ್ಕೆ ನಾಲ್ಕಾರು ಹನಿ ಮಾತ್ರ ಸಾಕಾಗುತ್ತದೆ. ಆದರೆ ಕರಿಮುಗಿಲು ಕರಗಿ ಮಳೆಯನ್ನೇ ಸುರಿಸುವುದಲ್ಲವೇ? ಅದೇ ರೀತಿ ಸಜ್ಜನ ಬಂಧುಗಳ ಮನಸ್ಸು ಕೈ ಸಹ. ಮಹಾಪುರುಷರ ಔದಾರ್ಯಕ್ಕೆ ಬೆಲೆ ಕಟ್ಟಲಾಗದು.

ಉತ್ತಮರ ನುಡಿ, ಲೋಕೋಕ್ತಿಗಳು ಹೊಳೆವ ಬಂಗಾರದಂತೆ. ಅದಕ್ಕೆಂದೂ ಕಿಲುಬು ಬಾರದು. ಸಮಸ್ತ ಜಗತ್ತಿಗೆ ಬೆಳಕು ನೀಡುವ ಸೂರ್ಯ, ರಾತ್ರಿಯ ತಂಪಿನ ಚಂದ್ರ,ಮಳೆ ನೀಡುವ ಮೋಡವು ಪರರಿಗಾಗಿ ತಮ್ಮ ಕರ್ತವ್ಯ ಮಾಡುವಂತೆ, ನಾವು ಸಹ ಅಷ್ಟಲ್ಲದಿದ್ದರೂ ಕಿಂಚಿತ್ ಮಾಡಬಹುದಲ್ಲವೇ? ಸಜ್ಜನರು ನ್ಯಾಯ, ನೀತಿ, ಧರ್ಮಕರ್ಮಗಳ   ಆಗರ. ಶುನಕವು ಒಡೆಯನ ಮೊಗವನ್ನೇ ನೋಡುತ್ತಾ ಬಾಲ ಅಲ್ಲಾಡಿಸುತ್ತದೆ. ಏನಾದರೂ ತಿನ್ನುವ ವಸ್ತು ತೋರಿಸಿದಾಗ ಹಪಹಪಿಸುತ್ತದೆ. ಆದರೆ ಆನೆ ಯಾವತ್ತೂ ಹಾಗೆ ಮಾಡದು. ಗಂಭೀರ ಪ್ರಾಣಿ. ಅದರ ಗಾಂಭೀರ್ಯ ನೋಟವನ್ನು ಬಿಟ್ಟುಕೊಡದು. ಅದೇ ನೋಟದಿಂದಲೇ ಆಹಾರಕ್ಕಾಗಿ ಸಹ ಮಾವುತನೆಡೆಗೆ ನೋಡುವುದು. ನಾವು ಆದಷ್ಟು ಉತ್ತಮ ಕೆಲಸಕಾರ್ಯಗಳೊಂದಿಗೆ, ಸಜ್ಜನಿಕೆಯ ಹಾದಿಯಲ್ಲಿ ಸಾಗೋಣ. ಉತ್ತಮರ ಸಹವಾಸ ಮಾಡೋಣ.

-ರತ್ನಾ ಭಟ್ ತಲಂಜೇರಿ 

(ಶ್ಲೋಕ: ನೀತಿಶತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ