ಬಾಳಿಗೊಂದು ಚಿಂತನೆ - 127

ಬಾಳಿಗೊಂದು ಚಿಂತನೆ - 127

ನೂತನ ಕ್ಯಾಲೆಂಡರ್ ವರುಷ ಕಾಲಿಟ್ಟಾಯಿತು. ವ್ಯವಹಾರಕ್ಕೊಂದು ತಾರೀಕು, ದಿನ ವರುಷ ಬೇಕಲ್ಲವೇ? ಏನೇನು ಕನಸುಗಳಿವೆ, ಯೋಜನೆಗಳಿವೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಮಸ್ತಕದೊಳಗಿಟ್ಟು, ಸಮಯ ಸಂದರ್ಭ ಎರಡೂ ನೋಡಿಕೊಂಡು ಮಾಡಬೇಕಷ್ಟೆ. ಏನು ಮಾಡಬೇಕಾದರೂ ನಾವು ಆರೋಗ್ಯವಾಗಿರಬೇಕು. ಶರೀರದ ಸೌಖ್ಯಕ್ಕೆ ಮೊದಲ ಆದ್ಯತೆ. ಎಷ್ಟು ಸಂಪಾದನೆ ಇದ್ದರೇನು? ಹಣದ ಕಟ್ಟುಗಳ ಮೇಲೆಯೇ ಕುಳಿತರೇನು? ಆರೋಗ್ಯ ಇಲ್ಲವಾದೊಡೆ ಉಳಿದವುಗಳೆಲ್ಲ ನಗಣ್ಯ. ಹಾಗಾಗಿ ಸಂಪಾದನೆಯ ಜೊತೆಗೆ ದೇಹವನ್ನು ಜೋಪಾನ ಮಾಡಲೇಬೇಕು. ದೇಹ ಸೌಖ್ಯವಿರಲು ಮನ ಉಲ್ಲಾಸದಲ್ಲಿರಬೇಕು. ಅರಿಷಡ್ವರ್ಗಗಳನ್ನು ಆದಷ್ಟೂ ದೂರ ತಳ್ಳಬೇಕು. ಆ ವೈರಿಗಳು ತಲೆಯಲ್ಲಿ ಮನಸ್ಸಿನಲ್ಲಿ ಮನೆ ಮಾಡಿದಷ್ಟೂ ನಮಗೆ ಅಪಾಯ. ‘ಹೇಗೆ ಮರದ ಹುಳ ಮರವನ್ನೇ ನಾಶ ಮಾಡುವುದೋ ಹಾಗೆ’ ನಿಧಾನವಾಗಿ ಇಲ್ಲವಾಗಿಸುವುದು. ಅದು ಬೇಡ.

ಏನು ಎಷ್ಟು ನಮ್ಮ ಬದುಕಲ್ಲಿದೆಯೋ ಅದನ್ನೇ ಅನುಭವಿಸುತ್ತ ಸುಖವಾಗಿರಲು ಪ್ರಯತ್ನಿಸೋಣ. ಹಳತಿನ ನೋವುಗಳ ತೊಡೆದು, ನಲಿವಿನ ಸವಿನಿಮಿಷಗಳ ನೆನಪಿನೊಂದಿಗೆ, ಹೊಸ ಉಲ್ಲಾಸ ಉತ್ಸಾಹದೊಂದಿಗೆ, ದೃಢ ಮನಸ್ಸಿನ ಸಂಕಲ್ಪ ಹೊಸ ಆಯಾಮ ನೀಡಲಿ. ಮನೆಯ ಸದಸ್ಯರೊಂದಿಗೆ ಹೊಂದಾಣಿಕೆ, ಪ್ರೀತಿ, ವಾತ್ಸಲ್ಯದಿಂದ ಕಲೆತು ಬೆರೆತು, ಎಲ್ಲಾ ಚಿಂತೆಗಳ ಮರೆತು ಬಾಳೋಣ. ಆಶಾವಾದಿಗಳಾಗೋಣ. ಭಗವಂತನ ಅನುಗ್ರಹ ಸದಾ ಬೆನ್ನ ಹಿಂದೆ ಇದೆಯೆಂಬ ನಂಬಿಕೆಯೇ ನಮ್ಮ ತಳಪಾಯ. ನಮ್ಮ ದುಡಿಮೆ ಸೇರಿದಾಗ, ಬೆವರಿಳಿಸಿದಾಗ ಖಂಡಿತಾ ಆ ನಿರಾಕಾರ ಶಕ್ತಿ ಕೈಬಿಡನು. ಕಳೆದುದು ಹೋಗಲಿ, ಹೊಸತರ ಆಗಮನ ಹೊಸ ನಿರೀಕ್ಷೆಗಳೊಂದಿಗೆ ಬರಲಿ. ‘ಪ್ರಯತ್ನ ನಮ್ಮದು ಫಲ ಅವನಿಚ್ಛೆ’ ಭರವಸೆಯ ಹೂರಣಗಳೊಂದಿಗೆ ಸಿಹಿ ಹೋಳಿಗೆಯೂಟದ ಸವಿಕನಸನ್ನು ನನಸಾಗಿಸಲು ನಮ್ಮೆಲ್ಲರ ಶ್ರಮವಿರಲಿ.

 *ಹೊಸ ಕ್ಯಾಲೆಂಡರ್ ಗೋಡೆಯಲ್ಲಿ*

*ಇಂದು ಬೆಳಿಗ್ಗೆ ಕಿಸಕ್ಕನೆ ನಕ್ಕಿತು*

*ನನ್ನ ಮೊಗವ ನೋಡುತ*

*ಬೆಪ್ಪೇ ಆಯುಷ್ಯದಲಿ ಒಂದು ವರುಷ*

*ಕಡಿತವಾಯಿತು ಇನ್ನಾದರೂ ಎಚ್ಚೆತ್ತುಕೊ ಮನುಜನೇ*

*ರಾಗ ಕೋಪ ತಾಪ ದ್ವೇಷಗಳ ಸುಟ್ಟು*

*ಮೂಡಿಸುತ ಮನುಜರಲಿ ಒಗ್ಗಟ್ಟು*

*ಹೆಜ್ಜೆಯೂರುತ ಸಾಗು ದುಡಿ ಶ್ರಮಪಟ್ಟು*

*ಒಕ್ಕೊರಲಲಿ ಕೂಗಿ ಹೇಳು ನಾವೆಲ್ಲ* 

*ಮನುಕುಲವ ಒಂದೇ  ನಾವೆಯಲಿ ನಡೆಸುವೆವೆಂದು*

 *ಎಲ್ಲರಿಗೂ ಶುಭವಾಗಲಿ*

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ