ಬಾಳಿಗೊಂದು ಚಿಂತನೆ (13) - ಪರಿಶ್ರಮ

ಬಾಳಿಗೊಂದು ಚಿಂತನೆ (13) - ಪರಿಶ್ರಮ

ನಮ್ಮ ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳು, ನಾನಾರೀತಿಯ ಅಡಚಣೆಗಳು ಬರಬಹುದು. ಅದನ್ನೆಲ್ಲ ದಾಟಿಕೊಂಡು, ಮುಂದೆ ಮುಂದೆ ಸಾಗುವವನೇ ನಿಜವಾದ ಸಾಧಕ. ಹಾಗಾದರೆ ಸಾಗಲು ಸುಮ್ಮನೆ ಕೈಕಟ್ಟಿ ಕುಳಿತರೆ ಆಗುತ್ತದೆಯೇ? ಇಲ್ಲ.ಇದಕ್ಕೆ ಬೇಕು ಸತತ *ಪರಿಶ್ರಮ*. ತೆಂಗಿನ ಕಾಯಿ ಎಲ್ಲಿಂದ  ಸಿಗುತ್ತದೆ? ತಕ್ಷಣ *ಮರದಿಂದ* ಹೇಳ್ತೇವೆ. ಮರಕ್ಕೆ ಎಲ್ಲಿಂದ ಬರುತ್ತದೆ? ಆಲೋಚನೆ ಮಾಡುತ್ತೇವೆ. ಸಾಕಷ್ಟು ನೀರು, ಗೊಬ್ಬರ ಹಾಕಿದಾಗ, ಸರಿಯಾಗಿ ಆ ಗಿಡವನ್ನು ಸಾಕಿದಾಗ ಫಲ ಬಂದೇ ಬರುತ್ತದೆ. ಹಾಗಾದರೆ ಇಲ್ಲಿ *ಕಠಿಣ ಪರಿಶ್ರಮ* ಅಗತ್ಯವೆಂದಾಯಿತು.

'ಮೊಟ್ಟೆ ಮೊದಲೋ ಕೋಳಿ ಮೊದಲೋ'ನಮ್ಮಲ್ಲಿ ಸಮರ್ಪಕ ಉತ್ತರವಿಲ್ಲ. ಆಗ ಹಿರಿಯರು ಮೊರೆ ಹೋದ್ದು ಭಗವಂತನಿಗೆ, ಅದೆಲ್ಲ ಅವನ ಆಟ, ಅಂದರೆ ವಿಧಿಯಾಟ ಎಂಬುದಾಗಿ ಹೇಳಿಬಿಟ್ಟರು. ನಮ್ಮ ಜೀವಿತಾವಧಿಯಲ್ಲಿ ಆಗುವ ಎಲ್ಲಾ ಆಗುಹೋಗುಗಳ ಸೂತ್ರಧಾರ *ವಿಧಿಲಿಖಿತ*. ಸರಿ ಒಪ್ಪಿಕೊಳ್ಳೋಣ, ನಾವೇನೂ ಶ್ರಮ ಪಡದೆ ಕುಳಿತರೆ, ವಿಧಿಯಲ್ಲ, ಯಾರೂ ನಮ್ಮತ್ತ ತಿರುಗಿ ನೋಡದೆ ಹೋದಾರು. ಹಾಗಾದರೆ ಶ್ರಮದ ದುಡಿಮೆ ಅಗತ್ಯವಾಗಿ ಮಾಡಿದ್ದೇ ಆದರೆ, ದೇವರು ಸಹ ಮೆಚ್ಚಿ ಅನುಗ್ರಹಿಸುವನು ಅಲ್ಲವೇ?

ಜೀವನದಲ್ಲಿ ಕಷ್ಟ-ನಷ್ಟಗಳು ಬಂದಾಗ, ಕೈಸೋತಾಗ, ಹಣೆಬರಹ ಹೇಳದೆ, ಯಾವುದಾದರೂ ಒಂದು ದಾರಿ ಹುಡುಕುವ ಸ್ವಭಾವ ನಮ್ಮದಾಗಬೇಕು. ಯಶಸ್ಸಿನ ಹಿಂದೆ ಹಠ, ಛಲ, ಸಾಧಿಸಲೇಬೇಕೆಂಬ ಮನೋಭಾವ ಇದ್ದಾಗ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹೇಗೆ ಕೃಶವಾದ ಶರೀರಕ್ಕೆ, ಎಲ್ಲಾ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವಿಸಿ, ದೇಹದ ಸಮತೋಲನ ಕಾಪಾಡುತ್ತೇವೆಯೋ ಹಾಗೆ. ಏನೂ ತಿನ್ನದೆ ಇದ್ದಲ್ಲಿ ಮುಂದೊಂದು ದಿನ ಏನಾದೀತು ಎಂಬ ಪ್ರಜ್ಞೆ ಬೇಕು. ಮಹಾನ್ ಸಾಧಕರಿಗೆ ಯಶಸ್ಸು ಹಾಗೆಯೇ ಕಾಲಬುಡಕ್ಕೆ ಬಂದಿಲ್ಲ, ಅವರು ಹಗಲು-ರಾತ್ರಿ ಪಟ್ಟ ಪರಿಶ್ರಮ ಲೆಕ್ಕ ಹಾಕಲು ಸಾಧ್ಯವಿಲ್ಲ. ನಮ್ಮ*ಗುರಿ*ಯ ಕಲ್ಪನೆ ನಮಗಿದ್ದರೆ ಎಲ್ಲವೂ ಸಾಕಾರಗೊಳ್ಳುತ್ತದೆ. ಈ ಪ್ರಕೃತಿಯಲ್ಲಿ *ಶ್ರಮ*ಪಡದೆ ಫಲವನ್ನು ನಿರೀಕ್ಷೆ ಮಾಡುವುದು ತಪ್ಪು. ನಮ್ಮ ಶರೀರಕ್ಕೆ ಯಾವುದೇ ರೀತಿಯ ರೋಗಾಣುಗಳು ಪ್ರವೇಶ ಮಾಡದ ಹಾಗೆ , ದೇಹದೊಳಗೆ ಸತತ ಹೋರಾಟ ನಡೆಯುತ್ತಿರುತ್ತದೆ. ಇದೂ ಸಹ ಒಂದು ರೀತಿಯ ಶರೀರದೊಳಗಿನ *ಸತತ ಪರಿಶ್ರಮ*ವೇ ಆಗಿದೆ. ಕಷ್ಟಪಟ್ಟು ದುಡಿಯೋಣ, ಹೊಟ್ಟೆ ತುಂಬಾ ಉಣ್ಣೋಣ.

ಶ್ರೀಕೃಷ್ಣ ಪರಮಾತ್ಮ ಹೇಳಿದ ಹಾಗೆ 'ನಮ್ಮ ಪ್ರತಿಯೊಂದು ಯಶಸ್ಸಿನ ಹಿಂದೆಯೂ , ಒಂದು ಕಠಿಣ ನಿರ್ಧಾರವಿದೆ, ಪರಿಶ್ರಮವಿದೆ.*ಕರ್ಮ ಮಾಡು,ಫಲ ಭಗವಂತನ ಇಚ್ಛೆ*.ಒಳ್ಳೆಯ ಕೆಲಸಕ್ಕೆ ದೇವರ ಕೃಪೆ ಇದ್ದೇ ಇದೆ ಎಂಬ ನಂಬಿಕೆ ನಮಗಿದ್ದರೆ, ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

-ರತ್ನಾಭಟ್ ತಲಂಜೇರಿ

ಪೆನ್ಸಿಲ್ ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು