ಬಾಳಿಗೊಂದು ಚಿಂತನೆ - 130

ಬಾಳಿಗೊಂದು ಚಿಂತನೆ - 130

ರತ್ನೈಃ ಮಹಾರ್ಹೈಃ ತುತುಷುರ್ನದೇವಾಃ ನ ಭೇಜಿರೇ ಭೀಮವಿಷೇಣ ಭೀತಿಂ/

ಸುಧಾಂ ವಿನಾ ನ ಪ್ರಯಯುರ್ವಿರಾಮಂ ನ ನಿಶ್ಚಿತಾರ್ಥಾತ್ವಿರಮಂತಿ ಧೀರಾಃ//

ದೇವತೆಗಳೂ ರಾಕ್ಷಸರೂ ಸೇರಿ ಸಮುದ್ರಮಥನವನ್ನು ಮಾಡಿದ ವಿಚಾರ ಓದಿದವರು ಕೇಳಿದವರು, ಯಕ್ಷಗಾನ ಬಯಲಾಟಗಳಲ್ಲೂ ನೋಡಿದವರು ನಾವುಗಳು. ಈ ಸಂದರ್ಭದಲ್ಲಿ ವಾಸುಕಿಯೇ ಹಗ್ಗವಾಗಿದ್ದು, ಮಂದರ ಪರ್ವತವೇ ಕಡೆಗೋಲಾಯಿತು. ಮಥಿಸಿದ ಸಮಯಲ್ಲಿ ಅಸಂಖ್ಯಾತ ರತ್ನಗಳು ಸಮುದ್ರದಿಂದ ಮೇಲೆ ಬಂತಂತೆ. ಅಷ್ಟು ಸಿಕ್ಕಿದರೂ ಸುರರಿಗೆ ತೃಪ್ತಿ ಆಗಲಿಲ್ಲವಂತೆ. ಕಾಲಕೂಟ ವಿಷ ಬಂತು. ಆದರೂ ಹೆದರಲಿಲ್ಲ. ಅಮೃತ ಸಿಕ್ಕುವಲ್ಲಿವರೆಗೆ ಮಥಿಸಿದರಂತೆ. ಹಿಡಿದ ಕೆಲಸವನ್ನು ಸಾಧಿಸುವ ಗುಣ ಯಾವತ್ತೂ ಸಜ್ಜನರ ಹತ್ತಿರ ಮಾತ್ರ ಇರಲು ಸಾಧ್ಯ. ದೇವತೆಗಳ ಈ ಸಾಹಸವೇ ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡರೆ, ಕಷ್ಟ ಖಂಡಿತಾ ಇಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಫಲಿತಾಂಶ ಬರುವಲ್ಲಿವರೆಗೆ ನ್ಯಾಯಸಮ್ಮತವಾಗಿ ಮಾಡಿದರೆ ಒಳ್ಳೆಯ ಫಲ ಪಡೆಯಬಹುದು ಹೇಳುವುದಕ್ಕೆ ಇದುವೇ ‘ದಾರಿದೀಪ’ ನಮಗೆಲ್ಲ.

ಆದರೆ ನಾವೇನು ಮಾಡುತ್ತೇವೆ. ‘ಏಳು ತಿಂಗಳಿನಲ್ಲಿ ಹುಟ್ಟಿದ ಹಾಗೆ’ ಒಂದು ಗಾದೆ ಮಾತೇ ಇದೆಯಲ್ಲ? ಎಲ್ಲದರಲ್ಲೂ ಅವಸರ ನಮಗೆ. ತಾಳ್ಮೆ ಮೊದಲೇ ಇಲ್ಲ. ಪ್ರತಿಯೊಂದಕ್ಕು ಒಂದು ಕಾಲ ಎಂದಿದೆ. ಆಗ ಬೇಡ ಎಂದರೂ ಆಗಿಯೇ ಆಗುತ್ತದೆ. ನಮ್ಮ ಕರ್ತವ್ಯ ಮಾಡೋಣ. ಫಲ ಆತನಿಚ್ಛೆ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ನೀತಿಶತಕದಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ