ಬಾಳಿಗೊಂದು ಚಿಂತನೆ (135) - ಕನ್ನಡಿ

ಬಾಳಿಗೊಂದು ಚಿಂತನೆ (135) - ಕನ್ನಡಿ

‘ಕನ್ನಡಿ’ ಯ ಹಾಗಿರಬೇಕಂತೆ ನಾವುಗಳು. ಯಾವತ್ತಾದರೂ ಕನ್ನಡಿ ಹೇಳಿದ್ದುಂಟೇ? 'ನನ್ನನ್ನು ನೀನು ಬಂದು ನೋಡೆಂದು' ಇಲ್ಲ. ನಾವೇ ಕನ್ನಡಿಗೆ ಅಂಟಿಕೊಂಡವರು. ಊಟ ನಿದ್ರೆ ಬೇಕಾದರೂ ಬಿಡಬಲ್ಲೆವು, ಆದರೆ ಕನ್ನಡಿಯ ಬಿಡಲಾರೆವು. ಅವಿನಾಭಾವ ಸಂಬಂಧ ನಮಗೂ ಕನ್ನಡಿಗೂ ಅಲ್ಲವೇ? ಸರ್ವಜ್ಞನ ವಚನವೊಂದರಲ್ಲಿ ಕನ್ನಡಿಯ ಬಗ್ಗೆ ಹೇಳಿದ ಮಾತೊಂದು ನೆನಪಿಗೆ ಬಂತು.

*ತನ್ನ ನೋಡಲಿ ಎಂದು ಕನ್ನಡಿಯು ಕರೆಯುವುದೆ*

*ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು*

*ಕನ್ನಡಿಯು ಜಗಕೆ ಸರ್ವಜ್ಞ//*

ಕನ್ನಡಿಯ ಹಾಗೆ ಮಹಾತ್ಮರ ಬಗ್ಗೆ ಹೇಳುತ್ತಾ, ಅವರಾಗಿಯೇ ಹೊಳೆಯುವರು, ಬೆಳಗುವರು. ಅವರ ಬಳಿಗೆ ನಾವೇ ಹೋಗಬೇಕು. ಅವರ ಗುಣ ಸಂಪನ್ನತೆ ನಮ್ಮನ್ನು ಅವರಲ್ಲಿಗೆ ಒಯ್ಯುವುದು. ಒಬ್ಬರ ಜ್ಞಾನವೆಂದರೆ ನಾವೇ ಅವರಲ್ಲಿಗೆ ಹೋಗುವಂತಿರಬೇಕೆಂಬ ನುಡಿ, ಅದನ್ನು ಕನ್ನಡಿಗೆ ಹೋಲಿಸಿದ ಪರಿ ಅದ್ಭುತ.

ಮಾತಿಗೆ ಹೇಳುವುದಿದೆ *ನೀನು ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೊಂಡಿದ್ದೀಯಾ?* ಹೌದಲ್ವಾ? ಸರಿಯಾಗಿಯೇ ಹೇಳಿದ್ದಾರೆ. ಮದುವೆಗೆ ಹೊರಟ ಯುವಕನೊಬ್ಬನ ಬೇಡಿಕೆ ವಿಪರೀತ. ನಯಾಪೈಸೆ ಸಂಪಾದನೆಯಿಲ್ಲ. ಶುದ್ಧ ಸೋಮಾರಿ. ಎಲ್ಲರಲ್ಲೂ ಛೀಮಾರಿ ಹಾಕಿಸಿಕೊಳ್ಳುತ್ತಿದ್ದ. ಆದರೆ ಮದುವೆಗೆ ಹೊರಟಾಗ ಹುಡುಗಿ ಹಾಗಿರಬೇಕು, ಹೀಗಿರಬೇಕೆಂಬ ಹಲವಾರು ಬೇಡಿಕೆಗಳು. ಮತ್ತೆ ಹೇಳಿದ್ದರಲ್ಲಿ ತಪ್ಪೇನಿದೆ? ‘ಮುಖ ಮನಸ್ಸಿನ ಕನ್ನಡಿ’ ಯಂತೆ. ನಮ್ಮ ಮನಸ್ಸಿನಲ್ಲಿ ಆಗುವ ಎಲ್ಲಾ ಹೊಯ್ದಾಟಗಳೂ ನಮ್ಮ ಮುಖದಲ್ಲಿ ಎದ್ದು ಕಾಣುತ್ತದೆ.

ಒಮ್ಮೆ ನಾನು ಕರ್ತವ್ಯದಲ್ಲಿದ್ದ ಶಾಲೆಯಲ್ಲಿ ತರಗತಿಯಲ್ಲಿ ಹಣ ಕಳ್ಳತನವಾಯಿತು. ಆ ಹುಡುಗನ ತಂದೆ ಅಂಗಡಿಗೆ ಕೊಡಲು ಕೊಟ್ಟ ಹಣ. ಸಂಜೆ ನನ್ನಲ್ಲಿಗೆ ದೂರು ಬಂತು. ತರಗತಿಯ ಎಲ್ಲಾ ಮಕ್ಕಳ ವಿಚಾರಣೆಯಾದರೂ ಹಣದ ಸುಳಿವಿಲ್ಲ. ನನಗೋ ಓರ್ವ ಹುಡುಗನ ಮೇಲೆ ಸಂಶಯ. ಆದರೆ ಎಲ್ಲರೆದುರು ಹೇಗೆ ಹೇಳಲಿ ಎಂದು ಒಂದು ಸಣ್ಣ ಕಥೆಯನ್ನು ಹೇಳಿದೆ. ‘ಪ್ರಾಮಾಣಿಕ ಸತ್ಯವಂತ ಮಾದನ ಕಥೆ’. ಒಂದಷ್ಟು ಹಿಂದೆ ಮುಂದೆ ಮಸಾಲೆ ಸೇರಿಸಿದೆ. 'ಯಾರೇ ಆಗಲಿ ಹಣ ಸಿಕ್ಕಿದವರು ತಂದುಕೊಡಿ, ಯಾರಲ್ಲೂ ಹೇಳುವುದಿಲ್ಲ, ಬಯ್ಯುವುದಿಲ್ಲ' ಆಶ್ವಾಸನೆ ನೀಡಿದೆ. ನಾನು ಆ ಹುಡುಗನ ಮುಖವನ್ನೇ ಆಗಾಗ ನೋಡುತ್ತಿದ್ದೆ. ಸಂಶಯವೇ ಇಲ್ಲ ಅನ್ನಿಸಿತು. ಸಂಜೆ ಶಾಲೆಯ ಆಟದ ಅವಧಿಯಾಗುವಾಗ ಶಾಲಾ ಮೈದಾನಕ್ಕೆ ಹೋಗಿ ಬಂದು ನನ್ನ ಮೇಜಿನ ಡ್ರಾವರನ್ನು ಎಳೆದು ನೋಡಿದರೆ ಕಳೆದುಕೊಂಡ ಹಣ ಅಲ್ಲಿದೆ. ಅಂತೂ ಹುಡುಗನ ಹಣ ಸಿಕ್ಕಿತು. ಮರುದಿನ ಅವನು ದಾರಿಯಲ್ಲಿ ಸಿಕ್ಕಿ 'ಇನ್ನು ಮುಂದೆ ಹೀಗೆ ಮಾಡಲಾರೆ' ಎಂದು ಕಣ್ಣೀರು ಹಾಕುತ್ತಾ ಪಶ್ಚಾತ್ತಾಪ ಪಟ್ಟ. ಶ್ರೀಮಂತರ ಮಗ. ಆದರೆ ಹಣ ಎನ್ನುವುದು ಏನನ್ನೂ ಮಾಡಿಸಬಹುದು. ಮನೆಯಲ್ಲಿ ತುಂಬಾ ಶಿಸ್ತು ಹಣದ ವಿಚಾರದಲ್ಲಿ. ಇಂದು ಆ ಹುಡುಗ ಒಂದು ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾನೆ. ಅರಿಯದ ವಯಸ್ಸದು. ಮುಖವು ನಮ್ಮ ಮನಸ್ಸಿನ ತಳಮಳಗಳನ್ನೆಲ್ಲ ಹೇಳುವುದರಲ್ಲಿ ಎತ್ತಿದ ಕೈ. ಗಾದೆ ಮಾತಿದೆಯಲ್ಲ ‘ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?’ ಅಂಗೈ ನೋಡಲು ಸಾಧ್ಯ. ಹಾಗೆಯೇ ಬದುಕಿನ ಹಾದಿಯ ಹಲವಾರು ಘಟನೆಗಳು, ನಮ್ಮ ಕಣ್ಣೆದುರೇ ಇರುವಾಗ, ಅದಕ್ಕೆ ಬೇರೆ ಸಾಕ್ಷಿ ಯಾಕೆ? ಕನ್ನಡಿಯಂತಿರಲಿ ನಮ್ಮೆಲ್ಲರ ಬದುಕು ಸ್ವಚ್ಛ, ಸರಳ, ಸುಂದರವಾಗಿ. ಒಡೆದ ಕನ್ನಡಿಯಾಗದೆ ಶುಭ್ರ ಕನ್ನಡಿಗಳಾಗಿ ಪ್ರತಿಬಿಂಬಿಸೋಣ ಬಂಧುಗಳೇ…

-ರತ್ನಾ ಕೆ.ಭಟ್ ತಲಂಜೇರಿ

(ವಚನ:ಅನುಭವದ ಬುತ್ತಿಯಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ