ಬಾಳಿಗೊಂದು ಚಿಂತನೆ - 135
ಓರ್ವನಲ್ಲಿ ಹಣವಿದೆ ಎಂದಾದರೆ ಕೆಲವು ಜನ ಅವನ ಹಿಂದೆ-ಮುಂದೆ ಸುತ್ತುತ್ತಾ,ಅವನನ್ನು ಹೊಗಳಿ ಅಟ್ಟಕ್ಕೇರಿಸುತ್ತಾ ಇರುವುದನ್ನು ಸಮಾಜದಲ್ಲಿ ನೋಡುತ್ತೇವೆ. ಗುಣ ಬೇಡವೇ ಬೇಡ, ಹಣವೇ ಮುಖ್ಯ, ಹಣವಿದ್ದರೆ ಎಲ್ಲವೂ ಕಾಲಬುಡಕ್ಕೆ ಬರುತ್ತದೆ ಎನ್ನುವವರೂ ಇದ್ದಾರೆ. ಹಣದ ಹುಚ್ಚು ಹಿಡಿದವರಿಗೆ ಬೇರೆಲ್ಲ ನಗಣ್ಯ. ಕಾಮಾತುರನಿ/ಳಿಗೆ ಲಜ್ಜೆಯಿದೆಯೇ? ಹಾಗೆಯೇ ಇದು. ಹಳ್ಳಿಯಲ್ಲಿ ಒಂದು ಮಾತಿದೆ ‘ಮೂರೂ ಬಿಟ್ಟವನು , ಊರೂ ಬಿಟ್ಟವವಗೆ ಸಮ’ ಅಂಥ. ಅವನಿಗೆ ಬೇರೆಯವರ ಮಾತಿನ ಬಗ್ಗೆ ಅಂಜಿಕೆ ನಾಚಿಕೆ ಯಾವುದೂ ಇಲ್ಲ.
*ಅರ್ಥಾತುರಾಣಾಂ ನ ಗುರುರ್ನ ಬಂಧು:*/
*ಕಾಮಾತುರಾಣಾಂ ನ ಭಯಂ ನ ಲಜ್ಜಾ*//
*ಕ್ಷುಧಾತುರಾಣಾಂ ನ ರುಚಿರ್ನ ಪಕ್ವಂ/*
*ಚಿಂತಾತುರಾಣಾಂ ನ ಸುಖಂ ನ ನಿದ್ರಾಂ*//
ಹಣದ ವ್ಯಾಮೋಹ ಹಿಡಿದವನಿಗೆ ಹಿರಿಯರಿಲ್ಲ ಕಿರಿಯರಿಲ್ಲ. ಬಂಧು ಬಳಗವಿಲ್ಲ. ಅವನು ಕಣ್ಣಿದ್ದೂ ಕುರುಡ, ಕಿವಿಯಿದ್ದೂ ಕಿವುಡ. ಯಾರ ಮಾತೂ ಕೇಳದು, ಪಥ್ಯವಾಗದು ‘ಆನೆ ನಡೆದದ್ದೇ ದಾರಿ’ ಎಂಬ ಹಾಗೆ ಅವನ ನಡವಳಿಕೆ. ಯಾವಾಗ ಹೊಂಡಕ್ಕೆ ಬೀಳ್ತಾನೋ ಅದೂ ಅವನಿಗೆ ಗೊತ್ತಿಲ್ಲ. ಕಾಮದ ಬಯಕೆ ಜೀವವನ್ನೇ ತೆಗೆಯಬಹುದು, ಅವನಿಗೆ ನಾಚಿಕೆ, ಮಾನ ಮರ್ಯಾದೆಯ ಅರ್ಥವೇ ಗೊತ್ತಿಲ್ಲ. ಹೇಗಾದರೂ ಸರಿ ಆಸೆ ಈಡೇರಬೇಕು, ಇದೊಂದೇ ಅವನ ತಲೆಯಲ್ಲಿ. ಅಂಜಿಕೆ, ಹೆದರಿಕೆ ಮೊದಲೇ ಇಲ್ಲ. ಎಲ್ಲಾ ಗೊತ್ತಾಗುವಾಗ ಬೆಳಗಾಗಿರುತ್ತದೆ. ಹಸಿವೆಯಿಂದ ಇದ್ದಾಗ ಏನೋ ಒಂದು ತಿಂದರಾಯಿತು, ಅದರ ರುಚಿ ನೋಡುವವರು ಯಾರೂ ಇಲ್ಲ. ಹೊಟ್ಟೆ ತುಂಬುವುದು ಮುಖ್ಯ. ಚಿಂತೆ, ಯೋಚನೆಯಲ್ಲಿ ಮುಳುಗಿದವನಿಗೆ ನಿದ್ದೆಯಾದರೂ ಹೇಗೆ ಬರಬಹುದು? ಹಗಲಿರುಳು ಚಿಂತೆಯೇ ಆಯಿತು. ಇದೆಲ್ಲವೂ ಹತ್ತಿರ ಬಾರದಂತೆ ತಡೆಯುವುದು ನಮ್ಮ ಕೈಯಲ್ಲೇ ಇದೆ. ಇದ್ದುದರಲ್ಲಿ ತೃಪ್ತಿ ಹೊಂದಬಾರದೇ? ಇತಿ-ಮಿತಿಯರಿತು ಜೀವನ ಸಾಗಿಸಿದರೆ ಈ ತಾಪತ್ರಯಗಳು ಹತ್ತಿರ ಬರಲೂ ಹೆದರಬಹುದು. ನಮ್ಮ ಮನಸ್ಸಿನ ಹತೋಟಿ ನಮ್ಮಲ್ಲೇ ಇರಬೇಕು. ಧರ್ಮ ವಿರುದ್ಧವಾದ ಕಾಮನೆಗಳನ್ನು ಓಡಿಸಬೇಕು. ಅನುದಿನವೂ ಮನುಷ್ಯ ತನ್ನ ನಡವಳಿಕೆಗಳನ್ನು ಶೋಧಿಸಿ ಸೋಸಬೇಕು, ತಿದ್ದಿ ಬದಲಾಯಿಸಬೇಕು. ನಾವು ಪಶು ಪಕ್ಷಿ, ಪ್ರಕೃತಿಯನ್ನು ನೋಡುತ್ತ, ಆಡುತ್ತ ಬೆಳೆದವರು. ಅದನ್ನು ನೋಡಿಯಾದರೂ ಕಲಿಯಬೇಕು. ಸದಾ ಪರರಿಗೆ ಉಪಕಾರಿ. ಫಲ ತುಂಬಿದ ರೆಂಬೆ ಕೊಂಬೆಗಳು, ತೆನೆ, ಹೂಹಣ್ಣುಗಳು ಬಾಗುತ್ತವೆ. ನಾವು ಸಹ ‘ಬೀಗದೆ ಬಾಗಲು ಕಲಿಯೋಣ’ ಆಸೆ ಅನರ್ಥಕ್ಕೆ ದಾರಿಮಾಡಿ ಕೊಡದಂತೆ ನಮ್ಮಲ್ಲಿ ಎಷ್ಟಿದೆಯೋ ಅಷ್ಟಕ್ಕೇ ತೃಪ್ತರಾಗೋಣ. ನನ್ನ ಪರಿಚಯದವರೊಬ್ಬರು ಸಿಕ್ಕ ಸಿಕ್ಕವರ ಹತ್ತಿರ ಸಾಲ ಮಾಡಿ, ನಯಾಪೈಸೆ ಹಿಂದಿರುಗಿಸದವರು. ಆದರೆ ಐಷಾರಾಮಿ ಮನೆ ಕಟ್ಟಿ ದೊಡ್ಡಸ್ತಿಕೆಯಲ್ಲಿ ಯಾರಿಗೇನೂ ಕಡಿಮೆಯಿಲ್ಲ ಎಂದು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸಾಲ ಕೊಟ್ಟವರು ಕೇಳಿಕೇಳಿ ಹತಾಶರಾಗಿ ಕೈಚೆಲ್ಲಿ ಕುಳಿತಿದ್ದಾರೆ. ಈ ಮಹರಾಯನಿಗೆ ನಾಚಿಕೆಯೇ ಇಲ್ಲ. ಸಾಲದ್ದಕ್ಕೆ ಸರಕಾರಿ ನೌಕರನು. ಆದರೆ ನೆಮ್ಮದಿ ಇದೆಯೇ? ಹೃದಯವು ಕೂಗಿ ಹೇಳದಿರಲಾರದು 'ಎಲ್ಲರ ಹಣದ ಸಾಲದ ಮೇಲೆ ನಿಂತಿರುವೆ' ಎಂಬುದಾಗಿ.
ಎಲ್ಲರೂ ಬಂದು ಮನೆ ಭಾರೀ ಚಂದ ಕಟ್ಟಿದ್ದಿ ಹೇಳಿದರೆ ಸಾಕೇ? ಇವನ ಒಳಗುಟ್ಟು ಅರಿತವರು ಹಿಡಿಶಾಪ ಹಾಕುವುದನ್ನು ಕೇಳಿದ್ದೇನೆ. ಇದೂ ಒಂದು ಬದುಕೇ ಅನ್ನಿಸಿತು. ಆಸೆ, ಬಯಕೆ, ಸಮಾಜದಲ್ಲಿ ತನ್ನನ್ನು ಎಲ್ಲರೂ ಹೊಗಳಬೇಕೆಂದಿದ್ದರೆ ಅದಕ್ಕೆ ಸರಿಯಾದ ವ್ಯವಹಾರವಿರಲಿ. ಕಾಮನೆಗಳ ದಾಸನಾಗುವುದನ್ನು ಮೊದಲು ತ್ಯಜಿಸಿ ,ಮಾನವಂತನಾಗಿ ಬಾಳಿಬದುಕಲು ಕಲಿಯಲಿ. ಆ ನಿಟ್ಟಿನಲ್ಲಿ ಪ್ರಯತ್ನಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ:ವಿಕ್ರಮ ಚರಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ