ಬಾಳಿಗೊಂದು ಚಿಂತನೆ - 138
‘ಆಸೆ’ ಎಂಬುದು ಒಂದು ವಿಷವರ್ತುಲವಿದ್ದಂತೆ. ಅದೊಂದು ಜೇಡರಬಲೆ. ಒಮ್ಮೆ ಅದರೊಳಗೆ ಸಿಕ್ಕಿ ಬಿದ್ದರೆ ಹೊರಗೆ ಬರಲು ಕಷ್ಟವೇ ಸರಿ. ತಾನು ಹೆಣೆದ ಬಲೆಯೊಳಗೆ ತಾನೇ ಸಿಕ್ಕಿ ಬಿದ್ದಂತೆ. ಆಸೆ ಬೇಕು ನಿಜ. ಆದರೆ ಕೊರಳಿಗೆ ಉರುಳಾಗಬಾರದು. ಆಸೆಯಿಲ್ಲದ ಜೀವಿಯೇ ಇಲ್ಲ. ಬದುಕ ಬೇಕೆಂಬಾಸೆ ಪ್ರತಿಯೊಂದು ಜೀವಿಗೂ ಉಂಟಲ್ಲ? ಆರೋಗ್ಯಕರವಾದ ಆಸೆ ಖಂಡಿತಾ ಇರಬಹುದು. ಆದರೆ ಅನಾರೋಗ್ಯದತ್ತ ದೂಡುವ ಆಸೆ ಬೇಡ. ಹಾಗಾದರೆ ಇದಕ್ಕೆ ದಾರಿ ಏನು? ಇರುವುದರಲ್ಲಿ ತೃಪ್ತಿ ಕಾಣುವುದು. ಹಾಸಿಗೆಯಿದ್ದಷ್ಟೇ ಕಾಲು ಚಾಚುವುದು. ಕಂಡದ್ದನ್ನೆಲ್ಲ ಬಯಸಬಾರದು. ಬಯಸುವಾಗ ನಮ್ಮ ಸಂಪಾದನೆ, ಜೇಬು ಗಟ್ಟಿ ಇದೆಯೇ ನೋಡಿಕೊಳ್ಳಬೇಕು.
*ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯಶೃಂಖಲಾ/*
*ಯಯಾ ಬದ್ಧಾ: ಪ್ರಧಾವಂತಿ ಮುಕ್ತಾಸ್ತಿಷ್ಠಂತಿ ಪಂಗುವತ್//*
ಆಸೆ ಎಂಬುದು ಮನುಷ್ಯನಿಗಂಟಿದ ವಿಸ್ಮಯಕರವಾದ ಸಂಕೋಲೆಯಿದ್ದಂತೆ. ಬಯಸಿದ ವಸ್ತುಗಳ ಹಿಂದೆ ಓಡಿದರೆ ಬಾಳು ಗೋಳು, ಓಡಿಕೊಂಡೇ ಇರಬೇಕು (ಈ ಸಂಕೋಲೆಯಿಂದ ಕಟ್ಟಲ್ಪಟ್ಟವರು). ಕಟ್ಟು ಕಳಚಿದವರು ಇದ್ದುದರಲ್ಲಿಯೇ ನೆಮ್ಮದಿ ತೃಪ್ತಿ ಕಂಡು ಇದ್ದಲ್ಲಿಯೆ (ಕುಂಟರಂತೆ) ಇರುವರು.
ನಮ್ಮ ಪರಿಚಯದ ಓರ್ವ ಮಹಿಳೆಯ ಆಸೆಯೆಂಬ ತೋಟ ಸಂಸಾರವನ್ನೇ ಇಂದು ನಾಶ ಮಾಡಿದೆ. ಗಂಡ ಅಡ್ಡದಾರಿ ಹಿಡಿದವ ಮತ್ತೆ ಮೇಲೇಳಲೇ ಇಲ್ಲ. ಮಕ್ಕಳು ವಯಸ್ಸಿಗೆ ಬಂದಾಗ ವಿಷಯವನ್ನು ಅರಿತು ತಾಯಿಗೆ ಛೀಮಾರಿ ಹಾಕಿದರು. ಯಾವುದೇ ರೀತಿಯಲ್ಲಿ ಕೈಹಿಡಿದವನ, ಮಕ್ಕಳ ಪ್ರೀತಿ ಸಿಕ್ಕದೆ ಹೋಯಿತು. ಇಂದು ಅವಸ್ಥೆ ಬದುಕಲೂ ಇಲ್ಲ ಸಾಯಲೂ ಇಲ್ಲ ಎಂದಾಗಿದೆ. ಸಮಾಜದವರ ದೃಷ್ಟಿಗೂ ಗುರಿಯಾಗಿ ಬದುಕು ಸಾಗುತ್ತಿದೆ. ಮತ್ತಷ್ಟು ಬೇಕೆಂಬ ಆಸೆ ಇಷ್ಟೆಲ್ಲ ಅವಸ್ಥೆಗೆ ಕಾರಣವಾಯಿತು.
ಆಸೆ ಇರಲಿ ಓದುವುದರಲ್ಲಿ,ಜ್ಞಾನಗಳಿಕೆಯಲ್ಲಿ,ಸದ್ಬುದ್ಧಿಯಲ್ಲಿರಲಿ. ದು:ಖಕ್ಕೆ ಕಾರಣವಾಗುವುದು ಬೇಡ. ಬಾಳಿನ ದಾರಿಯಲ್ಲಿ ಅವರ ಹಾಗಿರಬೇಕು, ಬಂಗ್ಲೆ, ವಾಹನ ಬೇಕು, ಆಚೀಚೆ ಮನೆಯವರಿಗಿಂತ ಒಂದು ಕೈ ಮೇಲಿರಬೇಕು ಇದೆಲ್ಲ ಬೇಡವೇ ಬೇಡ. ನಾವು ನಮ್ಮ ಬದುಕು ಮೊದಲು ನೋಡಿ, ಕಿಂಚಿತ್ ಇದ್ದರೆ ಸಹಕಾರ ಮಾಡಿ ಸಾರ್ಥಕತೆಯ ಪಡೆಯೋಣ. ಆಸೆ ಎಂಬ ಮರೀಚಿಕೆಯ ಹಿಂದೆ ಹೋಗದಿರೋಣ. ಹಗಲು ಗನಸು ಕಾಣುವುದೇ ಬೇಡ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ರತ್ನಾವಳಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ