ಬಾಳಿಗೊಂದು ಚಿಂತನೆ (139) - ನಗು
‘ನಗು’ ಎನ್ನುವ ಎರಡಕ್ಷರದಲಿ ಎಲ್ಲವೂ ಅಡಗಿದೆ ಎಂದರೆ ತಪ್ಪಾಗಲಾರದು. ನಗು ನಮಗೆ ಆ ದೇವನಿತ್ತ ವರ. ನಗಲು ಹಣ ಕೊಡಬೇಕಿಲ್ಲ. ಪುಟ್ಟ ಮಕ್ಕಳ ನಗುವಲ್ಲಿ ಜಗವಡಗಿದೆ. ಅದ್ಭುತ ಸೆಳೆತ ಇದೆ. ಆಕರ್ಷಣೆಯಿದೆ. ಶಕ್ತಿಯಿದೆ. ನಗುವಲ್ಲಿ ದೇಹದ ಆರೋಗ್ಯ ಅಡಗಿದೆ. ನಾವು ಜೋರಾಗಿ ನಗುವಾಗ ಮುಖದ ಸ್ನಾಯುಗಳು ಹಿಗ್ಗುತ್ತವೆ. ಮುಖಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಇನ್ನೂ ಕೆಲವು ಜನ ಇದ್ದಾರೆ, ನಗುವಾಗ ಮೈಯನ್ನೆಲ್ಲ ಕುಲುಕುಸಿ ನಗುತ್ತಾರೆ. ಕಣ್ಣುಗಳಲ್ಲಿ ನೀರು ಬರುವಷ್ಟು ನಗುವವರೂ ಇದ್ದಾರೆ. ‘ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಯಿತು’ ಹೇಳ್ತೇವೆ. ಕೆಲವೊಂದು ವ್ಯಂಗ್ಯಚಿತ್ರಗಳನ್ನು, ಸಣ್ಣಪುಟ್ಟ ಘಟನೆಗಳನ್ನು, ಹಾಸ್ಯಪ್ರಸಂಗ, ಚಿನಕುರುಳಿ, ಹಾಸ್ಯದೃಶ್ಯಗಳನ್ನು ಓದಿದಾಗ, ನೋಡಿದಾಗ ಬರಬೇಡ ಅಂದರೂ ನಗು ಬಂದೇ ಬರುತ್ತದೆ.
‘ಕುಹಕ ನಗೆ ಮಾರಕ, ಮನತುಂಬಿ ನಗುವುದು ಪೂರಕ’. ಇತರರನ್ನು ವ್ಯಂಗ್ಯಮಾಡುವುದು ಒಳ್ಳೆಯ ವ್ಯಕ್ತಿತ್ವವಲ್ಲ. ಯಕ್ಷಗಾನದ ಪ್ರಸಂಗದಲ್ಲಿ ಪಾತ್ರಧಾರಿ ‘ಅಟ್ಟಹಾಸ’ ದ ನಗುವನ್ನು ಸಂದರ್ಭಕ್ಕೆ ಸರಿಯಾಗಿ ನಗುತ್ತಾನೆ. ಸ್ನೇಹಿತರೇ, ಕುಹಕ, ವ್ಯಂಗ್ಯ, ಲೇವಡಿಯ ನಗು ಅವಮಾನ, ಅಪಮಾನಗಳಿಗೆ ದಾರಿ ಮಾಡಿಕೊಡಬಹುದು. ಅದು ಅನಾರೋಗ್ಯಕರವಾದದ್ದು. ನಮಗೆ ಬೇಡ. ಒಬ್ಬರು ಜೀವನದಲ್ಲಿ ಸೋತಾಗ ಸಾಧ್ಯವಾದರೆ ಕೈಹಿಡಿದು ಮೇಲೆತ್ತೋಣ. ನಗುವುದು, ತಮಾಷೆ ಮಾಡುವುದು ಸರಿಯಲ್ಲ. ಬೀಳಲು ಕಾರಣಗಳು ಹಲವಾರು ಇರಬಹುದಲ್ಲವೇ?
ನಾಚಿಕೆಯ ನಗು, ಮುಗುಳ್ನಗು, ಕಣ್ಣಿನಲ್ಲಿಯೇ ನಗುವುದು, ಕಪೋಲಗಳಲ್ಲಿ ಕಾಣುವ ಸುಳಿಮಿಂಚಿನ ನಗು ಇವೆಲ್ಲವೂ ಆರೋಗ್ಯದ ನಗುವಾಗಿರುತ್ತದೆ. ನಗು ಎನ್ನುವುದು ಧನಾತ್ಮಕ ಚಿಂತನೆಗಳಿಗೆ ಪೂರಕವಾಗಿರಬೇಕು. ಶರೀರದ ನೋವು ನಿವಾರಣೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ನಿವಾರಿಸುತ್ತದೆ. ಸೌಂದರ್ಯವರ್ಧಕ. ಆತ್ಮಸ್ಥ್ಯೆರ್ಯ ಹೆಚ್ಚಿಸಲು ನಗು ಸಹಾಯಕ. ಬದುಕಿನ ಅವಿಭಾಜ್ಯ ಅಂಗ ನಗು. ಮುಗ್ಧ ಮಗುವಿನ ನಗು ಸಂಬಂಧಗಳನ್ನು ಬೆಸೆಯುತ್ತದೆ. ಕೆಲಸದ ಒತ್ತಡ, ಸಮಯದ ಅಭಾವ, ಪರಸ್ಪರ ಸಂಬಂಧಗಳ ಕೊರತೆ, ವೃತ್ತಿಯ ಪರಿಣಾಮ ಇವೆಲ್ಲವನ್ನೂ ಕೇವಲ ನಗುವಿನ ಮೂಲಕ ಸರಿಪಡಿಸಬಹುದು.
ಮಾನ್ಯ ಡಿ.ವಿ.ಜಿಯವರು ನಗುವಿನ ಬಗ್ಗೆ ಬರೆದ ಸಾಲುಗಳು ನೆನಪಾಯಿತು
*ನಗುವು ಸಹಜದ ಧರ್ಮ ನಗಿಸುವುದ ಪರಧರ್ಮ*
*ನಗುವ ಕೇಳುತ ನಗಿಸುವುದತಿಶಯದ ಧರ್ಮ*
*ನಗುವ ನಗಿಸುವ ನಗಿಸಿ ಬಾಳುವ ವರವ*
*ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ*
ನಾವೆಲ್ಲರೂ ನಗು ನಗುತ್ತಾ ಬಾಳೋಣ, ನಮ್ಮ ಸುತ್ತಮುತ್ತಲಿನವರನ್ನೆಲ್ಲ ನಗಿಸೋಣ.’ನಗುವೊಂದು ಅಮೂಲ್ಯ ಆಭರಣ’ ಅರಿಯೋಣ, ತಿಳಿಯೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ