ಬಾಳಿಗೊಂದು ಚಿಂತನೆ - 140
ಹಿರಿಯರಿಂದ ಬಳುವಳಿಯಾಗಿ ಅಥವಾ ಇನ್ನಾವುದೋ ರೂಪದಲ್ಲಿ ಬಂದ ಅನೇಕ ಸಂಗತಿಗಳು ನಮ್ಮಲ್ಲಿರುತ್ತದೆ. ಕೆಲವು ಅನುಕರಣೆಯಾಗಿರಬಹುದು. ಒಳ್ನುಡಿಗಳು, ಗಾದೆಗಳು, ನುಡಿಗಟ್ಟುಗಳು, ಸುಭಾಷಿತ, ಭಗವದ್ಗೀತೆ ಸಾರ, ಪುರಾಣ, ಇತಿಹಾಸ, ಕಲ್ಪನೆಯ ಲಹರಿ ಎಲ್ಲವನ್ನೂ ಬದುಕಿನ ಹಾದಿಯಲ್ಲಿ ಬೇಕಾದಲ್ಲಿಗೆ ಬೇಕಾದ್ದನ್ನು ಅಳವಡಿಸಿಕೊಳ್ಳುತ್ತೇವೆ. ಒಂದು ಮಾತಿದೆ 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂದು. ಆಧ್ಯಾತ್ಮಿಕ-ಪಾರಮಾರ್ಥಿಕ ಜೀವನ ಬೇಕೆಂಬ ಹಂಬಲ ಇರುವವರಿಗೆ ವೇದಾಭ್ಯಾಸ ಕಡ್ಡಾಯವಾಗಿ ಕಲಿಯಬೇಕಿತ್ತು. ವರ್ಷಾನುಕಾಲ ವೇದಗಳ ಅಧ್ಯಯನ ಮಾಡುವ ತಾಳ್ಮೆ ಈ ಆಧುನಿಕತೆಯಲ್ಲಿ ಕಡಿಮೆ ಹೇಳಬಹುದು. ಅಷ್ಟೂ ಸಮಯವಕಾಶವೂ ಇಲ್ಲ. ನಮ್ಮ ಜನಪದರು, ಗ್ರಾಮೀಣ ಭಾಗದ ಹಿರಿಯರು ವೇದಗಳ ಸಾರವನ್ನೇ ಮುಂದಿಟ್ಟುಕೊಂಡು, ಗಾದೆಗಳನ್ನು ನುಡಿಗಟ್ಟೆಂಬ ಚೌಕಟ್ಟಿನೊಳಗೆ ಹಿಡಿದಿಟ್ಟು ಪ್ರಚುರ ಪಡಿಸಿದರು. ಬಾಳಿನ ಸಮಗ್ರ ಚಿತ್ರಣವನ್ನು ಅನಾವರಣಗೊಳಿಸಿದರು. ಸಾಮಾನ್ಯವಾಗಿ ಹೆಚ್ಚಿನವರು ಪುರಾಣ ಕೇವಲ ಕಲ್ಪನೆ ಎನ್ನುವರು. ವಾಸ್ತವವನ್ನು ಇತಿಹಾಸಕ್ಕೆ ಹೋಲಿಸುವರು. ಪುರಾಣದಲ್ಲಿಯೂ ವಾಸ್ತವದ ಹಲವಾರು ಸಂಗತಿಗಳನ್ನು ನಾವು ಗುರುತಿಸಬಹುದು. ವೇದಗಳು ಜೀವನದ ರೀತಿ ನೀತಿಗಳನ್ನು ಅನಾವರಣಗೊಳಿಸಿ, ನೈತಿಕ ಮೌಲ್ಯಗಳತ್ತ ನಮ್ಮನ್ನು ಕೊಂಡೊಯ್ಯಲು ಸಹಕರಿಸಿದವು.ಆದರೆ ಅದನ್ನು ಬಳಸುವವನ ಕೈಯಲ್ಲಿದೆ. ಯಾವಾತನು ಗಾದೆಗಳನ್ನು ಅರಿಯುವನೋ ಆತ ವೇದಗಳ ತಿರುಳನ್ನು ಅಗೆದು ತೆಗೆದಂತೆ. ವೇದಗಳ ಅರ್ಥ ಗಾದೆಯ ಮರ್ಮ ಎರಡೂ ಒಂದೇ. ಆದ್ದರಿಂದಲೇ ‘ಗಾದೆಯ ಮರ್ಮ ಅರಿತವ ವೇದದ ಮರ್ಮ ತಿಳಿದಾನು’ ಎಂಬ ಗಾದೆ ಹುಟ್ಟಿತು.
ಎಲ್ಲೋ ಓದಿದ ನೆನಪು, ಮಹಾಭಾರತದಲ್ಲಿ ಧರ್ಮರಾಯನ ಹತ್ತಿರ ಕೇಳಿದರಂತೆ 'ನಿನಗೆ ಕೆಟ್ಟವರಿರುವ ಸ್ವರ್ಗ ಇಷ್ಟವೋ, ಒಳ್ಳೆಯರಿರುವ ನರಕ ಇಷ್ಟವೋ ಅಂಥ. ಅದಕ್ಕೆ ಆತ ನೀಡಿದ ಉತ್ತರ ನಿಜವಾಗಿಯೂ ನಮ್ಮ ಈಗಿನ ಪರಿಸ್ಥಿತಿಗೆ ಹೊಂದಿಕೆಯಾಗುತ್ತದೆ. 'ಒಳ್ಳೆಯವರು ತುಂಬಿರುವ ನರಕವೇ ಆದೀತು ಹೇಳಿದನಂತೆ. ಯಾಕೆಂದರೆ ಈ ಕೆಟ್ಟವರು, ದುಷ್ಟರು, ಕಪಟಿಗಳು ಉತ್ತಮ ವಾತಾವರಣವಾದ ಸ್ವರ್ಗವನ್ನೂ , ಅಲ್ಲಿಗೆ ಹೋದ ಉತ್ತಮರನ್ನೂ ಹಾಳುಗೆಡಹಬಹುದು. ಅದೇ ಒಳ್ಳೆಯವರು ತಾವಿದ್ದ ನರಕವನ್ನೇ ಸ್ವರ್ಗ ಮಾಡಿಯಾರು'. ಹೇಗಿದೆ ಉತ್ತರ? ನಮ್ಮ ಮಕ್ಕಳಿಗೆ ಗಾದೆಗಳ ಸಾರವನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಅದರಲ್ಲಿರುವ ಉತ್ತಮ ಅಂಶಗಳನ್ನು ತಿಳಿಸೋಣ. ಕಥೆಗಳನ್ನು ಆ ಮೂಲಕವಾಗಿ ಹೇಳೋಣ. ಒಂದೊಂದು ಗಾದೆಗೂ ಒಂದೊಂದು ಕಥೆಗಳನ್ನು ಹೇಳುವ ಕೆಲಸವಾಗಬೇಕಾಗಿದೆ. ಶಾರೀರಿಕ ತಪಸ್ಸಿನ ಅರಿವು ಮೂಡಿಸುವುದು ಹಿರಿಯರ ಕರ್ತವ್ಯವಾಗಿದೆ. ಇಲ್ಲದಿದ್ದರೆ ಬರಿಯ ಟಿ.ವಿ, ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಇದರಲ್ಲೇ ಮುಳುಗಿ, ಅದೇ ಪ್ರಪಂಚ, ಅದರಲ್ಲಿ ಕಾಣುವುದೇ ಜೀವನ ಅಂದುಕೊಂಡಾರು.
*ದೇವ ದ್ವಿಜಗುರುಪ್ರಾಜ್ಞಪೂಜನಮ್* *ಶೌಚಮಾರ್ಜನಮ್/*
*ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ//*
ದೇವರು, ದ್ವಿಜರನ್ನು, ಗುರುವನ್ನು, ಪ್ರಾಜ್ಞರನ್ನು ಗೌರವಿಸುವುದು, ಶುಚಿತ್ವ, ಒಳ್ಳೆಯ ಗುಣನಡತೆ, ಬ್ರಹ್ಮಚರ್ಯ, ಬೇರೆಯವರಿಗೆ ಹಿಂಸೆ ನೀಡದಿರುವುದು ಇವೆಲ್ಲವೂ ನಮ್ಮ ಶಾರೀರಿಕ ತಪಸ್ಸು ಎನಿಸಿಕೊಳ್ಳುತ್ತದೆ. ಗಾದೆಗಳ ಮೂಲಕ, ಕಥೆಗಳಮೂಲಕ, ಹಲವಾರು ಘಟನೆಗಳನ್ನಾಧರಿಸಿದ ಸಂಗತಿಗಳ ಮೂಲಕ ಇದನ್ನೆಲ್ಲ ಮಕ್ಕಳ ಹೃದಯದಲ್ಲಿ ಬಿತ್ತುವ ಕೆಲಸವಾಗಬೇಕಾಗಿದೆ. ಒಟ್ಟಿನಲ್ಲಿ ಎಲ್ಲರಿಗೂ ನೆಮ್ಮದಿ ಮತ್ತು ತೃಪ್ತಿಯ ಜೀವನ ಸಿಗುವಂತಾಗಬೇಕು.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸಂಸ್ಕೃತಿ ಸಂಚಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ