ಬಾಳಿಗೊಂದು ಚಿಂತನೆ - 141

ಬಾಳಿಗೊಂದು ಚಿಂತನೆ - 141

ಹೆಣ್ಣೆಂದರೆ ತಾತ್ಸಾರ ಮಾಡುವವರಿಗೆ ನಮ್ಮ ಹಿರಿಯ ಸಾಹಿತಿ ಸನ್ಮಾನ್ಯ ಡಿ.ವಿ.ಜಿಯವರು, ತಮ್ಮ ಕಗ್ಗದಲ್ಲಿ ವ್ಯಕ್ತ ಪಡಿಸಿದ ಸಾಲುಗಳಿವು.

*ಮೊಗ ನಾಲ್ಕು ನರನಿಂಗತೆಯೇ ನಾರಿಗಂ ಬಗೆಯೆ/*

*ಜಗಕೆ ಕಾಣಿಪುದೊಂದು,ಮನೆಯ ಜನಕೊಂದು//

*ಸೊಗಸಿನೆಳಸಿಕೆಗೊಂದು,ತನ್ನಾತ್ಮಕಿನ್ನೊಂದು/*

*ಬಗೆಯೆಷ್ಟೊ ಮೊಗವೆಷ್ಟೊ--ಮಂಕುತಿಮ್ಮ//*

ಮನುಷ್ಯನಿಗೆ ನೋಡಲು ಒಂದೇ ಮುಖ ಹೌದು. ಆದರೆ ಜೀವನದ ಜಂಜಾಟದಲ್ಲಿ ದಾರಿ ಸವೆಸಿದಂತೆ ವಿವಿಧ ಮುಖಗಳು ಅನಿವಾರ್ಯ. ಅಂತೆಯೇ ಓರ್ವ ಹೆಣ್ಣು ಮಗಳು ಈ ಜಗತ್ತಿಗೆ ಆಕೆಯ ಒಂದು ಮುಖ ಕಾಣಬಹುದು. ಮನೆಯ ತನ್ನವರಿಗಾಗಿ, ತನ್ನ ಕುಟುಂಬದವರ ಏಳ್ಗೆಗಾಗಿ, ನಿತ್ಯ ಜೀವನದ ಹೋರಾಟದ ದಾರಿಗಾಗಿ ಒಂದು ಮುಖವಾಡದ ಬದುಕು ಆಕೆಯದು. ಅದೇ ಹೆಣ್ಣು ಮಗಳ ಅಂತರಂಗ, ಚೆಲುವಿಕೆಯ ಇನ್ನೊಂದು ಮೊಗವೇ ಬೇರೆ. ಅದು ಅಳತೆಗೆ ನಿಲುಕದ್ದಾಗಿದೆ. ‘ಬಲ್ಲವರು ಮಾತ್ರ ಬಲ್ಲರು ಬೆಲ್ಲದ ಸವಿಯ’ ಎಂಬಂತೆ ಊಹೆಗೂ ನಿಲುಕದ ಮೊಗವದು. ತನ್ನ ಅಂತರಾತ್ಮಕ್ಕೆ ತೋರಿಸುವ ಮುಖವೊಂದು. ನಮ್ಮ ಮನದ ತಾಕಲಾಟಗಳೇ ನಮ್ಮ ಮುಖ. ನಮ್ಮ ಮನಸ್ಸಿನ ಕನ್ನಡಿಯೇ ನಮ್ಮ ಮುಖ.

ಹೌದಲ್ವೇ? ಹೆಣ್ಣು ಮಗಳು ಮನೆಯ ಮುದ್ದಿನ ಕೂಸಾಗಿ (ಎಲ್ಲರಿಗೂ ಈ ಭಾಗ್ಯವಿದೆ ಎನ್ನಲಾರೆ), ಪತಿಯ ಮನದನ್ನೆಯಾಗಿ, ಸೇರಿದ ಮನೆಯ ಸೊಸೆಯಾಗಿ, ಮಕ್ಕಳಿಗೆ ತಾಯಾಗಿ, ಮೊಮ್ಮಕ್ಕಳಿಗೆ ಅಜ್ಜಿಯಾಗಿ ಆಕೆಯ ಬಹು ವಿಧದ ಪಾತ್ರ ಸಾಮಾನ್ಯವಾದುದಲ್ಲ. ಆಕೆಯ ಕಿವಿ, ಕಣ್ಣುಗಳಿಗೆ, ಕೈಕಾಲುಗಳಿಗೆ ಭಗವಂತ ವಿಶೇಷ ಶಕ್ತಿಯನ್ನೇ ನೀಡಿರಬಹುದು ಅನ್ನಿಸುವುದುಂಟು ಒಮ್ಮೊಮ್ಮೆ. ತಾಳ್ಮೆ ಆಕೆಗಿತ್ತ ಬಳುವಳಿ. ‘ಕ್ಷಮಯಾಧರಿತ್ರಿ’ ಆಕೆ. ಈಗೀಗ ತನ್ನವರಿಗಾಗಿಯೋ, ತನಗಾಗಿಯೋ ಹೊರಗೆ ಸಹ ಹೋಗಿ ದುಡಿಯುವುದು ಸಾಮಾನ್ಯ. ಒಂದು ಜವಾಬ್ದಾರಿಯೇ ಹೆಚ್ಚಾಯಿತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಸಮರ್ಥೆ ಆಕೆ. ಆದರೆ ಮನೆಯವರೆಲ್ಲರ ಸಹಕಾರ ಬೇಕು. ಆಕೆಯನ್ನು ನಮ್ಮಲ್ಲಿ ಓರ್ವಳು ಎಂದು ನೋಡಿದರೆ ಸಾಕು. ‘ಆಕೆಗಾಗಿ ಹೊನ್ನಿನ ಅರಮನೆ ಖಂಡಿತಾ ಬೇಡ. ಹೊನ್ನಿನಂಥ ವಿಶಾಲ ಮನಸ್ಸಿದ್ದರೆ ಸಾಕು’ ಹೆಣ್ಣು ಮಗಳ ಕಷ್ಟ- ಸುಖದಲ್ಲಿ ಪಾಲ್ಗೊಂಡು, ನಮ್ಮಗಳಿಗಾಗಿ ಜೀವವನ್ನೇ ಮುಡಿಪಾಗಿಡುವ, ಶ್ರೀಗಂಧದಂತೆ ತೇಯುವ, ಅಡುಗೆ ಮನೆಯ ಸೌಭಾಗ್ಯ ದೇವತೆಯನ್ನು ಮನದಾಳದಿಂದ, ಆಕೆಗೂ ಒಂದು ಮನಸ್ಸಿದೆ, ಸ್ವಾಭಿಮಾನವಿದೆ, ಹೃದಯವಿದೆ ಎಂದು ನೋಡಿದರೆ ಪ್ರತಿ ಮನೆಯು ‘ನಂದಗೋಕುಲ’ ವಾಗಬಹುದು. ಹಾಗೆಯೇ ಆಗಲೆಂದು ಆಶಿಸೋಣ.

-ರತ್ನಾ ಕೆ.ಭಟ್ ತಲಂಜೇರಿ 

(ಕಗ್ಗ ಸಂಗ್ರಹ: ಮಂಕುತಿಮ್ಮನ ಕಗ್ಗ ಪುಸ್ತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ