ಬಾಳಿಗೊಂದು ಚಿಂತನೆ - 142

ಕೆಲವು ಜನರ ಮಾತುಗಳು ಬಾಣಕ್ಕಿಂತಲೂ ಚೂಪು. ‘ಮಾತು ಮನ ಮತ್ತು ಮನೆ ಕೆಡಿಸಿದ’ ಉದಾಹರಣೆಗಳು ಸಾಕಷ್ಟಿವೆ. ಯೋಚಿಸಿ ಮಾತನಾಡಿದರೆ ಎಲ್ಲರಿಗೂ ಶ್ರೇಯಸ್ಸು. ಆದರೆ ಒಬ್ಬನನ್ನು ಸರ್ವನಾಶ ಮಾಡಲೆಂದೇ ಪಣತೊಟ್ಟವನ ಮಾತನ್ನು ಆ ಬ್ರಹ್ಮನಿಗೂ ಸರಿಪಡಿಸಲು ಕಷ್ಟಸಾಧ್ಯ. ನಾಲಿಗೆ ಹರಿತ ಮತ್ತು ಎಲುಬಿಲ್ಲ, ಹೇಗೆ ಬೇಕಾದರೂ ತಿರುಗುತ್ತದೆ. ನಮ್ಮ ಹಿಡಿತ, ಆಲೋಚನೆ, ಬುದ್ಧಿ,ಜಾಣ್ಮೆ ಇವೆಲ್ಲ ಇದ್ದಾಗ ಮಾತಿಗೆ ತೂಕವಿರುತ್ತದೆ. ಇದೆಲ್ಲವನ್ನೂ ಗಾಳಿಗೆ ತೂರಿದಾಗ, ನನ್ನ ಮಾತೇ ನಡೆಯಬೇಕೆಂದಾಗ ಅನಾಹುತ ಕಟ್ಟಿಟ್ಟ ಬುತ್ತಿ. ನೋಡಲು ಚೆನ್ನಾಗಿದ್ದ ಮಾತ್ರಕ್ಕೆ ಅವರನ್ನು ಒಳ್ಳೆಯವರೆಂದು ಹೇಳಲಾಗದು. ಮಾತು, ಗುಣ ರೂಪ ಒಂದಕ್ಕೊಂದು ಸಂಬಂಧವಿಲ್ಲದವರು ನಮ್ಮ ಸುತ್ತಮುತ್ತ ಬಹಳಷ್ಟು ಜನರಿದ್ದಾರೆ.
*ಸರಲೋಪಿ ಶರಃ ಕ್ರೂರೋ ವರಾ ವಕ್ರಾಪಿ ವಲ್ಲಕೀ/*
*ಋಜುತಾ ವಕ್ರತಾ ಚೈವಂ ಈಗಗುಣತೋ ನ ತು ರೂಪತಃ//*
ಬಾಣವು ನೇರವಾಗಿದ್ದರೂ ಸಹ ತುಂಬಾ ಕ್ರೂರಿ. ಸರಿಯಾದ ಜಾಗಕ್ಕೆ ತಾಗಿದರೆ ಜೀವ ಹೋಗಬಹುದು. ವೀಣೆ ಡೊಂಕಾಗಿದ್ದರೂ ಸಹ, ಮೀಟಿದಾಗ ಇಂಪಾದ ಸ್ವರ ಹೊರಡುತ್ತದೆ. ಅದು ಕರ್ಣಾನಂದ ಸಹ. ಯಾವುದೇ ವ್ಯಕ್ತಿಯ ನೇರ ನಡೆ -ನುಡಿ, ವಕ್ರತನಗಳು ಅಥವಾ ಇನ್ನಾವುದೋ ಅಭ್ಯಾಸಗಳು ಕೆಟ್ಟತನ ಎಲ್ಲವೂ ಗುಣದಿಂದ ಬರುವುದು ಹೊರತು ರೂಪದಿಂದಲ್ಲ. ರೂಪ ದೇವನ ಸೃಷ್ಟಿ. ಮಾತು ಭಗವಂತನ ಕೊಡುಗೆ. ಸರಿಯಾದ ರೀತಿಯಲ್ಲಿ ಬಳಸುವುದು ನಮಗೆ ಬಿಟ್ಟ ವಿಚಾರ. ಆದಷ್ಟೂ ಸಂಬಂಧಗಳನ್ನು ಗಟ್ಟಿಯಾಗಿಸೋಣ. ಮಾತಿಗೆ ಸತ್ಯವೆಂಬ ಅಲಂಕಾರವನು ತೊಡಿಸೋಣ. ಮನಸ್ಸು, ಮಾತು, ಕೃತಿಗಳಿಂದ ದ್ರೋಹವೆಸಗದಂತೆ ವ್ಯವಹಾರವಿರಲಿ. ಇರುವಷ್ಟು ದಿನ ಇದ್ದುದರಲ್ಲಿ ಸಂತೋಷವಾಗಿರೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ರಾಮಚರಿತಮಾನಸ)
ಚಿತ್ರ ಕೃಪೆ: ಇಂಟರ್ನೆಟ್ ತಾಣ