ಬಾಳಿಗೊಂದು ಚಿಂತನೆ - 145

ಬಾಳಿಗೊಂದು ಚಿಂತನೆ - 145

ನಾವು ಕೆಲವನ್ನು ಹಿರಿಯರಿಂದ ನೋಡಿ ಕಲಿಯುತ್ತೇವೆ. ಇನ್ನು ಕೆಲವು ಅನುಕರಣೆ ಮಾಡಬಹುದು. ಕೆಲವು ನಮ್ಮದೇ ಆದ ಸ್ವಪ್ರಯತ್ನವಿರಬಹುದು. ಕೆಲವನ್ನು ಬಡತನ, ಹಸಿವು ನಮಗೆ ಕಲಿಸುತ್ತದೆ. ಪುಟ್ಟ ಮಗುವಿನಿಂದ ಸಹ ಕಲಿಯುವುದು ಬಹಳಷ್ಟಿದೆ. ಮಗುವಿಗೇನೂ ಗೊತ್ತಿಲ್ಲ ಎಂದು ತಾತ್ಸಾರ ಮಾಡುವ ಹಾಗಿಲ್ಲ. ಆದರೆ ಜ್ಞಾನಾರ್ಜನೆ ಎನ್ನುವುದು ಗುರು ಮುಖೇನ ಆದಾಗಲೇ ಅದಕ್ಕೊಂದು ನೆಲೆ ಬೆಲೆ. ಸುಮ್ಮನೆ ಸಂಗೀತ, ನೃತ್ಯ ಇನ್ಯಾವುದೋ ಹೇಳಿಕೊಡುತ್ತೇನೆಂದರೆ ಹೇಗೆ? ಅದರಲ್ಲಿ ಪರಿಣತಿ ಹೊಂದಿದ ಮೇಲೆಯೇ ಕಲಿಸಲು ಹೊರಡಬೇಕು. ಇಲ್ಲದಿದ್ದರೆ ಶ್ರಮ, ಸಮಯ, ಹಣ, ಆಯುಷ್ಯ ಎಲ್ಲವೂ ವ್ಯರ್ಥ. ಕಲಿಸುವವರು ಹಣ ಮಾಡಿಯಾರು ಅಷ್ಟೆ.

*ಇಮಂ ಮಂತ್ರಂ ಗುರೋಃ* *ಲಬ್ಧ್ವಾ ಶಿಷ್ಯಃ* *ತದ್ಗತಮಾನಸಃ/*

*ತದುಕ್ತೇನ ಚ ಮಾರ್ಗೇಣ* *ಜಪೇತ್ ನಿತ್ಯಂ ಅತಂದ್ರಿತಃ//*

‘ಷಡಕ್ಷರ ಮಂತ್ರ’ ವನ್ನು ಯಾವತ್ತೂ ಒಳ್ಳೆಯ ತಿಳುವಳಿಕೆ ಇರುವ ಗುರುಮುಖೇನವೇ ಕಲಿಯಬೇಕು. ಪುಸ್ತಕ ಓದಿ ಕಲಿಯುವೆ ಎಂದರಾಗದು. ಅದರ ಸಿದ್ಧಿ ಆಗದು. ‘ಹೇಗೆ ಸಮುದ್ರದ ನೀರನ್ನು ನಮಗೆ ನೇರವಾಗಿ ಉಪಯೋಗಿಸಲು ಆಗುವುದಿಲ್ಲವೋ ಹಾಗೆ’. ಅದೇ ನೀರು ಸೂರ್ಯನ ಶಾಖಕ್ಕೆ ಆವಿಯಾಗಿ, ಮೋಡವಾಗಿ, ಮಳೆ ರೂಪದಲ್ಲಿ ಬಂದಾಗ ಬಹುಪಯೋಗ ಇದೆ ಅಲ್ಲವೇ? ಗುರುವಿನ ಮೂಲಕ ಉಪದೇಶಿಸಲ್ಪಟ್ಟ ಜ್ಞಾನ, ಸ್ವಲ್ಪವೂ ಸೋಮಾರಿತನ ಮಾಡದೆ, ಪ್ರತಿನಿತ್ಯ ಜಪಿಸಿದಾಗ, ಓದಿ ಮನನ ಮಾಡಿ ಕೊಂಡಾಗ ಮಾತ್ರ ಪ್ರಯೋಜನವಾಗಬಹುದು. ನಮ್ಮ ಎಲ್ಲಾ ಮೂಲ ಉದ್ಧೇಶಗಳು ಕೈಗೂಡಲು ಆಲಸ್ಯ ದೂರಮಾಡಿ, ಏಕಾಗ್ರತೆಯಿಂದ ಕಲಿಯಬೇಕು.

ಯಾರದೋ ಕಣ್ಣಿಗೆ ಮಣ್ಣೆರಚಲು ಕಲಿಕೆ ಬೇಡ. ಶೃದ್ಧೆ ಇರಲಿ. ತಪ್ಪುಗಳನ್ನು ಹೇಳಿದಾಗ ತಿದ್ದಿ ಮುನ್ನಡೆಯುವ ಅಭ್ಯಾಸವಿರಲಿ. ‘ಕಲಿಕೆ ಎನ್ನುವುದು ನಿಂತ ನೀರಲ್ಲ, ಹರಿಯುತ್ತಲೇ ಇರಬೇಕು.’ ಹಾಗೆ ನೋಡಿಕೊಳ್ಳಬೇಕು. ಬದಲಾವಣೆಯ ಗಾಳಿ ಎಲ್ಲಾ ರಂಗದಲ್ಲೂ ಇದೆ. ಆದರೆ ಹಳೆ ಮೌಲ್ಯಗಳು, ಬೇರುಗಳನ್ನು ಮರೆಯಬಾರದು. ಅದರಡಿಯಲ್ಲಿ ಹೊಸತನಕ್ಕೆ ಒಡ್ಡಿಕೊಳ್ಳೋಣ. ಹೊಸ ಹೊಸ ಪ್ರಯೋಗಗಳು ನಿರಂತರ. ಅದು ಕಲಿಕೆಗೆ ಪೂರಕವಾಗಿರುವುದು. ಯಾವುದೋ ಒಂದಕ್ಕೆ ಜೋತು ಬೀಳುವುದು ಸರಿಯಲ್ಲ. ಜ್ಞಾನಾರ್ಜನೆಯಲ್ಲಿ ದಾಹ ಇರಬೇಕು. ಆದರೆ ಆರೋಗ್ಯಕರವಾಗಿರಲಿ. ಕಲಿತ ವಿದ್ಯೆ ನಾಲ್ಕು ಜನರಿಗೆ ಉಪಕಾರವಾಗುವಂತಿರಲಿ.

-ರತ್ನಾ ಕೆ.ಭಟ್ ತಲಂಜೇರಿ

 (ಶ್ಲೋಕ: ಸೂಕ್ಷ್ಮಾಗಮ)

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ