ಬಾಳಿಗೊಂದು ಚಿಂತನೆ - 146

*ಕೆರೆಯ ನೀರನು ಕೆರೆಗೆ ಚೆಲ್ಲಿ*
*ವರವ ಪಡೆದವರಂತೆ ಕಾಣಿರೊ* ದಾಸರ ಪದ ನಾವು ಕೇಳಿದ್ದೇವೆ. ನಾವು ಸಮಾಜದಿಂದ ಬೇಕಾದಷ್ಟು ಪಡೆದಿರುತ್ತೇವೆ. ಆದರೆ ಏನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಂಡಾಗ ಬರಿಯ ಶೂನ್ಯ ಬರಬಾರದು.
ಮಳೆ ಹೇಗೆ ಬರುತ್ತದೆ? ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದೇವೆ. ಜಲಚಕ್ರ ಗೊತ್ತೇ ಇದೆ. ಸಾಗರದ ನೀರು ಸೂರ್ಯಶಾಖಕ್ಕೆ ಆವಿಯಾಗುವ ಮೂಲಕ ಆವಿಯಾಗುವುದು ಮತ್ತೆ ಮೋಡ, ಗಾಳಿ, ಮಳೆ ಗೊತ್ತಿರುವ ವಿಷಯಗಳೇ. ಭಗವಂತ ಪ್ರಕೃತಿಯಲ್ಲಿ ಇಂತಹ ವ್ಯವಸ್ಥೆ ಮಾಡಿದ್ದಾನೆ ಎಂದರೆ ಮನುಷ್ಯ ಜನ್ಮವೆತ್ತಿ ಬಂದ ನಮಗೆ ಸಾಧ್ಯವಿಲ್ಲವೇ? ಬುದ್ಧಿ,ಮಾತು, ಜ್ಞಾನ, ತಿಳುವಳಿಕೆ, ವಿಚಾರ, ಜಾಣ್ಮೆ ಎಲ್ಲವೂ ಇರುವ ನಮಗೆ ಗಳಿಸಿದ ಒಂದಂಶವನ್ನು ಪುನ:ನೀಡಲು ಆಗದೇ? ನೀಡುವಾಗ ಸತ್ಪಾತ್ರರಿಗೆ, ಸತ್ಕಾರ್ಯಗಳಿಗೆ ನೀಡಬೇಕು. ಇಲ್ಲದಿದ್ದರೆ ಯಾರ ಹೆಸರಲ್ಲಿ ಇನ್ಯಾರೋ ಸಾಲ ತೆಗೆದು ಕಟ್ಟುವ ಬಗ್ಗೆ ಕಾಗದಪತ್ರಗಳು ಪಾಪದ ಬಡವನಿಗೆ ಬಂದ ಹಾಗಾಗಬಹುದು. ಒಳ್ಳೆಯ ಕೆಲಸಕಾರ್ಯಗಳಿಗೆ ಕೊಟ್ಟ ಪ್ರತಿಫಲ ಖಂಡಿತಾ ಇದೆ. ಜನ ಮೆಚ್ಚಿಸಲು ಕೊಡುವುದು ಬೇಡ ಅಥವಾ ನಾವು ಕೊಟ್ಟೆವೆಂದು ಡಂಗುರದ ಅಗತ್ಯವೂ ಇಲ್ಲ. ಡಂಗುರವಿಲ್ಲದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಾಗಬೇಕು.
ನಾವು ಮನೆಯಲ್ಲಿ ಕಿಟಕಿ ಬಾಗಿಲು ಹಾಕಿ ಕುಳಿತರೆ, ಮನೆಯೊಳಗಿನ ಗಾಳಿ ಹೊರಗೆ ಹೋಗದು, ಹೊರಗಿನ ಗಾಳಿ ಮನೆಯೊಳಗೆ ಬಾರದು. ಇದರಿಂದ ಒಳಗಿನ ಗಾಳಿ ವಿಷಮಯವಾಗಬಹುದು. ನಾವೇ ಕಾರಣರಾಗುತ್ತೇವೆ ಆರೋಗ್ಯ ಕೆಡಲು. ಹಾಗಾದರೆ ಇದಕ್ಕೆ ಪರಿಹಾರ ನಮ್ಮಲ್ಲೇ ಇದೆ. ಭೂಮಿಗೆ ಬಿದ್ದ ಮಳೆ ಸ್ವಲ್ಪ ಇಂಗಬಹುದು. ತಾನು ಹರಿಯುವ ಜಾಗದಲ್ಲಿ ಕೊಚ್ಚಿಕೊಂಡು ತನ್ನೊಡನೆ ಹರಿಯಬಹುದು. ನದಿಯಾಗಿ ಹರಿದು ಸಾಗರವನ್ನು ಸೇರಬಹುದು. ಇದನ್ನು ತಡೆಯಲು ಸಾಧ್ಯವೇ? ಅದು ಪ್ರಕೃತಿಯೇ ಮಾಡಿಕೊಂಡ ಒಪ್ಪಂದ. ಉತ್ತಮರಾಗಲು ಬದುಕನ್ನು ಗಾಳಿಮಳೆಗೆ ಒಡ್ಡಬೇಕು. ಕಲ್ಲುಮುಳ್ಳುಗಳ ದಾಟಬೇಕು. ನಾವು ಮಾಡಿದ ಕೆಲಸಗಳನ್ನು ಜರಡಿ ಹಿಡಿದಾಗ ಮಾತ್ರ ಯೋಗ್ಯರಾಗಲು ಸಾಧ್ಯ.
ವಾತಾಯನದ ವ್ಯವಸ್ಥೆ ಎಲ್ಲಿ ಚೆನ್ನಾಗಿದೆಯೋ ಅಲ್ಲಿ ರೋಗ ಬೇಗ ಪ್ರವೇಶವಾಗದು. ಕೊಂಡುಕೊಳ್ಳುವ ಪ್ರವೃತ್ತಿಯಲಿ ನಾವುಗಳು ಆಗಸದ ತಾರೆಗಳಾಗೋಣ. ಚುಕ್ಕಿ ಸಣ್ಣದಾದರೇನು? ಹೊಳಹು ಇದೆಯಲ್ಲ. ನಾಳೆಯ ಬಗ್ಗೆ ನೋಡದೆ ಇಂದಿನ ಕೆಲಸ ಮಾಡೋಣ. ಮುಂದೆ ಅದರಷ್ಟಕ್ಕೇ ಅದು ಆಗ್ತದೆ.
*ನ ಕಶ್ಚಿದಪಿ ಜಾನಾತಿ ಕಿಂ ತಸ್ಯ ಶ್ವೊ ಭವಿಷ್ಯತಿ/*
*ಅತ: ಶ್ವ: ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್//*
ನಾಳೆ ಆಗುವುದೇ ಆಗುವುದು. ನಮ್ಮ ಕೈಯಲ್ಲಿ ಇಲ್ಲ. ಯಾರಿಗೂ ಗೊತ್ತಿಲ್ಲ. ಏನಾದರೂ ಮಾಡುವುದಿದ್ದರೆ ಇಂದೇ ಮನಸ್ಸು ಮಾಡಬೇಕು. ಇಲ್ಲಿ ಬುದ್ಧಿವಂತಿಕೆಯ ಕೆಲಸ ಮುಖ್ಯ. ಈಗ ಇದ್ದವರು ಇನ್ನೊಂದು ಕ್ಷಣದಲ್ಲಿ ಇಲ್ಲದಾಗುವ ವಿಚಾರ ತಿಳಿದೇ ಇದೆ. ಹಾಗಾಗಿ ನಾಳೆಗೆ, ಮತ್ತೆಗೆ ಎಂದು ಮುಂದೂಡದೆ ಕೊಡುವುದನ್ನು ಕೊಟ್ಟು ಬಿಡಬೇಕು. ನಾವು ಗಳಿಸಿದ್ದರಲ್ಲಿ ಅಷ್ಟೋ ಇಷ್ಟೋ ಸಮಾಜಕ್ಕೆ ಮೀಸಲಿಟ್ಟು ದಾಸವಾಣಿಯನ್ನು, ಜೊತೆಗೆ ನಮ್ಮ ಬದುಕಿನ ಅರ್ಥವನ್ನು ಸಾರ್ಥಕ್ಯ ಪಡಿಸಿಕೊಳ್ಳೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ