ಬಾಳಿಗೊಂದು ಚಿಂತನೆ - 147

ಬಾಳಿಗೊಂದು ಚಿಂತನೆ - 147

*ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/*

*ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//*

ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮೆಚ್ಚರು. ಗುಣ ಕೋಟಿ ಹೊನ್ನಿಗಿಂತಲೂ ಮಿಗಿಲು. ಗುಣ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ನಮ್ಮ ಮನಸ್ಸಿನಿಂದ ಬರುವಂತಹುದು. ಹಿರಿಯರು ಹೇಳುವುದಿದೆ. ಗುಣದಲ್ಲಿ ಆತ ಅವನಪ್ಪನೋ, ಅಜ್ಜನೋ, ಅಮ್ಮನೋ ಇದ್ದ ಹಾಗೆಂದು. ಹಿರಿಯರ ರಕ್ತದ ಅಂಶವೂ ಇರಬಹುದು. ‘ಗುಣದಲ್ಲಿ ಅಪ್ಪಟ ಬಂಗಾರವಾಗೋಣ ,ಕಾಗೆ ಬಂಗಾರವಾಗುವುದು ಬೇಡ’. ಹೊರಗಿಂದ ಥಳಕು ಬಳುಕು, ಒಳಗೆ ಏನೂ ಇಲ್ಲ. ಶೀಲವೇ ಕುಲಕ್ಕೆ ಭೂಷಣ. ಶೀಲ ಇಲ್ಲದವರು ಬದುಕಿದ್ದೂ ಸತ್ತಂತೆ. ನಾವು ಎಷ್ಟೇ ಸಿರಿವಂತರಾಗಿರಲಿ, ಬಡವರಾಗಲಿ ನಮ್ಮ ಶೀಲವನ್ನು ಹೃದಯದಷ್ಟು ಜೋಪಾನವಾಗಿ ಕಾಪಿಟ್ಟುಕೊಳ್ಳಬೇಕು. ಹೃದಯವೇ ಸರಿಯಾಗಿಲ್ಲದಿದ್ದರೆ ಬದುಕು ದುರ್ಬರ. ಸಿದ್ಧಿಯೇ ವಿದ್ಯೆಗೆ ಭೂಷಣ. ಯಾವುದೇ ವಿದ್ಯೆಯನ್ನು ಸಾಧಿಸುವ ಛಲವಿರಬೇಕು. ಹಠವಿರಬೇಕು. ತನ್ನದಾಗಿಸಿಕೊಳ್ಳಬೇಕೆಂಬ ಹಂಬಲವಿರಬೇಕು. ಸಾಧನೆಯಿಲ್ಲದವನಿಗೆ ಯಾವುದೂ ಒಲಿಯದು. ಕಳ್ಳಾಟಿಕೆಯ ಫಲ ಒಮ್ಮೆಗೆ ಹೆಸರು ತರಬಹುದು. ಗೊತ್ತಾದಾಗ ಊರೆಲ್ಲ ನಾರಬಹುದು. ಮತ್ತೆ ಅವನು ಒಳ್ಳೆಯವನಾದರೂ ಯಾರೂ ನಂಬಲಾರರು. ಸುಖವೇ ಸಂಪತ್ತಿಗೆ ಭೂಷಣ. ಆಸ್ತಿ, ಐಶ್ವರ್ಯ ಎಷ್ಟೇ ಇರಲಿ, ಇಲ್ಲದಿರಲಿ ತೃಪ್ತಿ ಮುಖ್ಯ. ಅದಿಲ್ಲದವನಿಗೆ ಜೀವನವಿಡೀ ಶಾಂತಿಯೇ ಇಲ್ಲ. ನೆಮ್ಮದಿ ಕನಸಿನ ಮಾತು. ಇದ್ದುದರಲ್ಲಿ ಸುಖವಾಗಿರಲು ಅಭ್ಯಾಸ ಮಾಡಬೇಕು. ಬದುಕೆಂದರೆ ಹಾಗೆ ಎಲ್ಲದರ ಸಮ್ಮಿಶ್ರಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ