ಬಾಳಿಗೊಂದು ಚಿಂತನೆ - 148
ಒಗ್ಗಟ್ಟಿನಲ್ಲಿ ಬಲವಿದೆ ನಮಗೆ ತಿಳಿದೇ ಇದೆ. ದುರ್ಬಲರಾಗಲಿ, ಪ್ರಬಲರಾಗಲಿ ಒಟ್ಟಾಗಿ ಸೇರಿ ಕೈಗೊಂಡ ಕಾರ್ಯ ನೆರವೇರಬಹುದು. ಪ್ರಬಲರಲ್ಲಿ ಆರ್ಥಿಕತೆ ಸಾಕಷ್ಟಿರಬಹುದು. ಆದರೆ ದುರ್ಬಲರಲ್ಲಿ ದೈಹಿಕ ಸಾಮರ್ಥ್ಯ ಮಾತ್ರ. ಹಾಗೆಂದು ನೀಡಿದ ಕೆಲಸವನ್ನು ತಲೆಯ ಮೇಲೆ ಹೊತ್ತು ನೆರವೇರಿಸುವ ಸೌಜನ್ಯತೆ ಅವರಲ್ಲಿರುತ್ತದೆ. ನಮ್ಮ ಆಸುಪಾಸಿನಲ್ಲಿ ಅಂತಹವರು ಬಹಳಷ್ಟು ಜನ ಇರುತ್ತಾರೆ. ಶಾಲೆಗಳಲ್ಲಿ ವಾರ್ಷಿಕೋತ್ಸವ ಸಮಾರಂಭವಿರುವಾಗ ಹೆಚ್ಚಿನ ಶ್ರಮವಹಿಸಿ ದುಡಿಯುವ ವರ್ಗವಿರುತ್ತದೆ. ಅವರೇನೂ ಹಣವಂತರಲ್ಲ. ಆದರೆ ಸಹಕಾರ ಮನೋಭಾವದವರು. ಯಾವ ಕೆಲಸವನ್ನಾದರೂ ಅಷ್ಟು ಜವಾಬ್ದಾರಿಯಲ್ಲಿ ನಿಭಾಯಿಸುವರು. (ನನ್ನ ಕರ್ತವ್ಯದ ಸಮಯದಲ್ಲಿ ನಾನು ಇದನ್ನು ಕಂಡುಕೊಂಡಿದ್ದೇನೆ. ಆರ್ಥಿಕವಾಗಿ ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶದ ಶಾಲೆಯ ಪರಿಸರ ನನ್ನದಾಗಿತ್ತು.) ಎಲ್ಲರೂ ಬಂದು ಬಹಳಷ್ಟು ಸಹಕಾರ ನೀಡುವುದರೊಂದಿಗೆ, ಇನ್ನು ಏನಾಗಬೇಕು, ನಾವಿದ್ದೇವೆ ಹೇಳುವ ಮನೋಭಾವದವರೇ ಆಗಿದ್ದರು.
ದುರ್ಬಲರೆಂದು ನಾವು ಯಾವತ್ತೂ ಯಾರನ್ನೂ ಅಪಹಾಸ್ಯ, ಗೇಲಿ, ವ್ಯಂಗ್ಯ ಮಾಡಬಾರದು. ಅವರಲ್ಲಿಯೂ ಒಂದು ಪ್ರಬಲವಾದ ಶಕ್ತಿ ಇರುತ್ತದೆಂಬುದನ್ನು ಮರೆಯಬಾರದು.
*ಬಹೂನಾಮಪ್ಯಸಾರಾಣಾಂ ಸಮವಾಯೋ ದುರಾಸದ:/*
*ತೃಣೈರಾರಭತೇ ರಜ್ಜು:ತೇನ ನಾಗೋ$ಪಿ ಬಧ್ಯತೇ//*
ಬಹು ಸಂಖ್ಯೆಯಲ್ಲಿದ್ದರೆ ದುರ್ಬಲರೂ ಬಲಯುತರಾಗುತ್ತಾರೆ. ಗರಿಕೆಹುಲ್ಲಿನಿಂದ ಹೊಸೆದ ಹಗ್ಗದಲ್ಲಿ ಶಕ್ತಿಶಾಲಿಯಾದ ಆನೆಯನ್ನು ಕಟ್ಟಿಹಾಕಬಹುದು.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ನಿತ್ಯನೀತಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ