ಬಾಳಿಗೊಂದು ಚಿಂತನೆ - 149
ಮೂರ್ಖರಿಗೆ ಉಪದೇಶ ಮಾಡುವುದು, ತನ್ನ ತಲೆ ಮೇಲೆ ತಾನೇ ಕಲ್ಲು ಚಪ್ಪಡಿ ಎಳೆದು ಹಾಕಿ ಕೊಳ್ಳುವುದು ಎರಡೂ ಒಂದೇ. ಅವರಿಗೆ ಬುದ್ಧಿವಾದ ಹೇಳಿದಷ್ಟೂ ಕೋಪ, ಸಿಟ್ಟು ಹೆಚ್ಚಾಗುವುದು. ಶಾಂತತೆ ಎನ್ನುವುದು ಕನಸಿನ ಮಾತು. ಮೂರ್ಖನಾದವ ಎಷ್ಟೇ ಐಷಾರಾಮಿಯಾಗಿರಲಿ, ಬೆಲೆಬಾಳುವ ಆಭರಣ ತೊಟ್ಟಿರಲಿ, ಅದೆಲ್ಲ ದೂರದಿಂದ ಮಾತ್ರ ಚಂದ. ಹತ್ತಿರ ಬಂದು ಬಾಯಿಬಿಟ್ಟ ಎಂದರೆ ಮೂರ್ಖತನ ಹೊರಬರುವುದು. ಎಲ್ಲಿಯಾದರೂ ಸಜ್ಜನರು ಅವರ ಕೈಗೆ ಸಿಕ್ಕಿ ಬಿದ್ದರೆ ಹೇಳಿದ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡು, ನೋವನ್ನು ತಮ್ಮಲ್ಲೇ ನುಂಗಿಕೊಳ್ಳುತ್ತಾರೆ. ಹೇಗೆ ಮೋಡಗಳು ಉಪ್ಪು ನೀರನ್ನು ಕುಡಿದು ಸವಿಯಾದ ನೀರನ್ನು ಭೂಮಿಗೆ ಚೆಲ್ಲುತ್ತದೆಯೋ ಹಾಗೆ. ದುಷ್ಟರಿಂದ ಆದಷ್ಟೂ ದೂರವಿರುವುದು ಕ್ಷೇಮ. ಇಲ್ಲದಿದ್ದರೆ ಕೆಸರಿಗೆ ಕಲ್ಲು ಬಿಸಾಡಿದರೆ ಆ ಕೆಸರು ಎಸೆದವನ ಮೊಗಕ್ಕೆ ರಟ್ಟಬಹುದು, ಹಾಗೆ ಆಗಬಹುದು. ಸ್ವಾಮಿ ವಿವೇಕಾನಂದರು ಹೇಳಿದ ಒಂದು ಹೊನ್ನುಡಿ ಜಗತ್ತಿನಲ್ಲಿರುವ ಮೂರ್ಖರೆಲ್ಲರೂ ತಾವು ಬುದ್ಧಿವಂತರೆಂದುಕೊಂಡಿರುವುದು ದುರದೃಷ್ಟಕರವೇ ಸರಿ.
*ದುರ್ಜನ: ಪರಿಹರ್ತವ್ಯೋ ವಿದ್ಯಯಾಲಂಕೃತೋ$ಪಿ ಸನ್*/
*ಮಣಿನಾ ಭೂಷಿತ:ಸರ್ಪ: ಕಿಮಸೌ ನ ಭಯಂಕರ://*
ದುಷ್ಟನಾದವನು ಎಷ್ಟೇ ವಿದ್ಯಾವಂತನಾದರೂ ಅವನ ಸಹವಾಸ ಮಾಡಬಾರದು. ಆತ ಒಂದು ಸರ್ಪಕ್ಕೆ ಸಮಾನ. ಸರ್ಪದ ಹೆಡೆ ಮಣಿಯಿಂದ ಶೋಭಿಸುವುದು ಸಹಜ. ಹಾಗೆಂದು ಅದರ ಬುದ್ಧಿ ಬಿಡದಲ್ಲವೇ? ಅದರ ಭಯಾನಕ ಸ್ವರೂಪ ಕಡಿಮೆಯಾಗದು. ಸ್ವಂತ ಬುದ್ಧಿ ಇಲ್ಲ, ಬೇರೆಯವರು ಹೇಳಿದ್ದು ಕೇಳಲಾರರು. ನಾವೇ ಯೋಚಿಸಿ ಜಾಗ್ರತೆ ಮಾಡಬೇಕಷ್ಟೆ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಹಿತೋಪದೇಶ)
ಚಿತ್ರ ಕೃಪೆ: ಇಂಟರ್ನೆಟ್ ತಾಣ