ಬಾಳಿಗೊಂದು ಚಿಂತನೆ - 150

ಬಾಳಿಗೊಂದು ಚಿಂತನೆ - 150

ನಿಜವಾದ ಶಾಂತಿ, ಸಮಾಧಾನಗಳು ಜೀವನದಲ್ಲಿ ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಿದರೆ ಮಾತ್ರ ಸಿಗಬಹುದಷ್ಟೆ. ಇಲ್ಲದ ರಗಳೆಗಳನ್ನು ತಲೆಯೊಳಗೆ ತುಂಬಿಕೊಂಡರೆ ಶಾಂತಿ ಕನಸಿನ ಮಾತು. ‘ಮನಸ್ಸು, ಮಾತು, ಕೃತಿಗಳು’ ಎಲ್ಲಿ ಒಂದಾಗಿ ವ್ಯವಹರಿಸುವುದೋ ಅಲ್ಲಿ ಎಲ್ಲವೂ ತನ್ನಷ್ಟಕ್ಕೆ ಸಿಗಬಹುದು. ಅದು ಒಂದಾಗಲು ಅರಿಷಡ್ವರ್ಗಗಳು ಬಿಡುವುದಿಲ್ಲ. ಅದರಿಂದ ದೂರವಿದ್ದಷ್ಟೂ ಕ್ಷೇಮ. ಆದರೆ ವ್ಯಾಮೋಹ ಅತ್ತ ಕಡೆಗೆ ಸೆಳೆದೊಯ್ಯುತ್ತದೆ.

ಕ್ಷಮಾಗುಣವನ್ನು ಬೆಳೆಸಿಕೊಂಡಾಗ ಶಾಂತಿ ಲಭಿಸಬಹುದು. ಇಲ್ಲದಿದ್ದರೆ ಜೀವಮಾನವಿಡೀ ಇವನನ್ನು ಒಂದು ಕೈ ನೋಡಬೇಕೆಂಬುದೇ  ಹೃದಯದಲ್ಲಿ ಗೂಡು ಕಟ್ಟಿಕೊಂಡಿರಬಹುದು. ಎಲ್ಲಾ ಆಗುವಾಗ ಇವನ ಬದುಕೇ ನಿಂತುಹೋಗಬಹುದು. ಮತ್ತೆಲ್ಲಿಯ ಶಾಂತಿ? ಎಷ್ಟು ಜಾಣನಾದರೂ ತಾಳ್ಮೆ, ಕ್ಷಮೆ ಎರಡೂ ಇಲ್ಲದವನಿಗೆ ಸೋಲು ಬರಬಹುದು. ಹಾಗಾಗಿ ಸಹನೆಯನ್ನು ಮಂತ್ರವಾಗಿಸೋಣ. ಸಹನೆ ಅತ್ಯಮೂಲ್ಯವಾದ ರತುನದಾಭರಣ. ಜೋಪಾನ ಮಾಡೋಣ. ನಮ್ಮ ಬಾಳಹಾದಿಯ ರಕ್ಷಾಕವಚ ತಾಳ್ಮೆ, ಸಹನೆ, ಯೋಚಿಸಿದ ಮಾತುಗಳು, ಕ್ಷಮಾಗುಣ, ಕನಿಕರ ಇತ್ಯಾದಿಗಳು. ತಾಳ್ಮೆ ಎಂಬುದಿಲ್ಲದವ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂದ್ರಿಯಗಳ ಗುಲಾಮರು ನಾವಾಗಬಾರದು. ಅದುವೇ ನಮ್ಮ ವಶವಿರುವಂತೆ ನೋಡಿಕೊಳ್ಳಬೇಕು. ಎಲ್ಲಿ ಉದ್ವೇಗ ಪ್ರವೇಶವಾಯಿತೋ ಅಲ್ಲಿ ಸರಿದಾರಿಗೆ ಕತ್ತಲು ಆವರಿಸಬಹುದು. ಶಾಂತಿ ಎನ್ನುವುದು ಒಂದು ಮಹಾನ್ ಶರಧಿ. ಶಾಂತಿ ಹಣಕ್ಕೆ ಸಿಗುವ ವಸ್ತುವಲ್ಲ. ತನುವಿಂದ ಮೂಡಬೇಕು. ಇಂದ್ರಿಯಗಳ ಪೂರ್ಣ ಹತೋಟಿ ಇದ್ದವನಿಗೆ ಸಹನೆಯೂ ಜೊತೆಗಿರುತ್ತದೆ.

ನಮ್ಮ ಸಂಪತ್ತು, ಸ್ಥಾನ-ಮಾನಗಳು, ಕೀರ್ತಿ-ಪ್ರಶಸ್ತಿಗಳು, ಆರೋಗ್ಯ ಇವೆಲ್ಲವೂ ತೇಲುವ ಮೋಡಗಳಂತೆ. ನೀರಿನ ಗುಳ್ಳೆಗಳಂತೆ. ಬರಬಹುದು ಹೋಗಬಹುದು. ಆದರೆ ಉತ್ತಮ ಗುಣ ನಡತೆ ನಾವಿದ್ದರೂ ಇಲ್ಲದಿದ್ದರೂ ನಮ್ಮ ಜೊತೆಗಿರಬಹುದು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿರಾಳವಾಗಿರಲು ಪ್ರಯತ್ನಿಸಿ, ಬದುಕಿನ ಸತ್ಯ ಸತ್ವ ಎರಡನ್ನೂ ಸರಿದೂಗಿಸಿಕೊಂಡು ಹೋಗೋಣ.

*ಗತೇ ಶೋಕೇ ನ ಕರ್ತವ್ಯೋ ಭವಿಷ್ಯಂ ನೈವ ಚಿಂತಯೇತ್/*

*ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಾ://*

ಆಗಿಹೋದ ಯಾವುದೇ ಘಟನೆಗಳ ಬಗ್ಗೆ ದು:ಖ ಬೇಡ. ಸಮಯವೂ ವ್ಯರ್ಥ. ತಲೆಯೂ ಅಶಾಂತಿಯ ಗೂಡಾಗಬಹುದು. ನಾಳಿನದು ಬೇಡ. ಯೋಚನೆ ಮಾಡಿ ಇಂದಿನ ದಿನ ಸುಖವಿಲ್ಲದಿರಬಹುದು. ವರ್ತಮಾನವನ್ನು ಮಾತ್ರ ಆಲೋಚಿಸುವುದು ಬುದ್ಧಿವಂತರ ಲಕ್ಷಣ. ಬಂದದ್ದನ್ನು ಸ್ವೀಕರಿಸಿ ಇರುವುದರಲ್ಲಿ ನೆಮ್ಮದಿ ಕಂಡುಕೊಂಡು ಜೀವಿಸಲು ಕಲಿಯೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಚಾಣಕ್ಯ ನೀತಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ