ಬಾಳಿಗೊಂದು ಚಿಂತನೆ - 152
ವಿದ್ವಾಂಸರ, ತಿಳಿದವರ ಮಾತುಗಳಿಗೆ ನಾವು ಯಾವತ್ತೂ ಬೆಲೆ ಕೊಡಬೇಕು. ಅಲ್ಲಿ ಕುತರ್ಕ ಸಲ್ಲದು. ಅವರುಗಳು ಎಲ್ಲಾ ಹಂತಗಳನ್ನೂ ದಾಟಿ, ಜಯಿಸಿ, ಲೋಕಾನುಭವ, ಜೀವನಾನುಭವ ಹೊಂದಿದವರು. ಯಾರು ವಿದ್ವಾಂಸರ ಧ್ವನಿಗಳಿಗೆ ಕಿವಿಯಾಗುವರೋ, ಅದನ್ನು ಸಂಗ್ರಹಿಸಿಡುವರೋ, ಅವರು ಸ್ವತ: ಪಂಡಿತರಲ್ಲದಿದ್ದರೂ ಆ ದೇವಿ ವಾಣಿಯ ಕೃಪೆಗೆ ಪಾತ್ರರಾಗುವರು. ಸರಸ್ವತಿಯ ಆಶೀರ್ವಾದ ಸದಾ ಇರುವುದು ಇದು ಲೋಕೋಕ್ತಿ. ಮಹಾತ್ಮರೊಡನೆ ನಾವಿದ್ದರೆ ನಮಗೂ ಅದರ ಫಲ ಸಿಗಬಹುದು. ಹೇಗೆ ಹೂವಿನೊಂದಿಗೆ ನಾರು(ಹಗ್ಗ) ಸಹ ಭಗವಂತನ ಮುಡಿಗೇರುವುದೋ ಹಾಗೆ.
*ಉದಾತ್ತವಸ್ತುವಿನ್ಯಾಸೇ ದೋಷೋಪಿ ಸುಗುಣಾಯತೇ/*
*ವಿಭೂತಿತ್ವಮವಾಪ್ನೋತಿ ಶಿವಸಂಗೇ ಚಿತಾರಜ://*
ಮಹಾತ್ಮರು, ಗೊತ್ತಿದ್ದವರ ಜೊತೆ ಸೇರಿದರೆ ನಮ್ಮ ಕುಂದು -ಕೊರತೆಗಳು ಇಲ್ಲದಾಗಬಹುದು. ಪರಶಿವನ ಮೈಗಂಟಿದ ಚಿತಾಭಸ್ಮವೂ ವಿಭೂತಿ ಎನಿಸಿದಂತೆ. ಒಳ್ಳೆಯವರ ಸಂಗ ಸಹವಾಸ ಮಾಡಿ ಉತ್ತಮರೆನಿಸೋಣ. ಅಧಮರ, ಅಲ್ಪರ ಸಹವಾಸ ಬೇಡ. ‘ಅಲ್ಪರ ಸಂಗ ಅಭಿಮಾನ ಭಂಗ’ ಮಾತೇ ಇದೆಯಲ್ಲ? ದೂರಕ್ಕೆ ದೂರವೇ ಇದ್ದು ಬಿಡೋಣ. ಮೈಮೇಲೆ ಕೊಚ್ಚೆ ಎರಚಿಸಿಕೊಳ್ಳುವುದು ಬೇಡ. ದೂರದಿಂದಲೇ ನಮಸ್ಕರಿಸೋಣ, ಹತ್ತಿರ ಬರಲೂ ಬಿಡಬಾರದು. ಇಬ್ಬರ ಮಧ್ಯೆ ತಂದಿಕ್ಕುವ ಮಂದಿಯೆಡೆ ಅಪ್ಪಿತಪ್ಪಿಯೂ ನೋಡಬಾರದು.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ