ಬಾಳಿಗೊಂದು ಚಿಂತನೆ - 155

ಬಾಳಿಗೊಂದು ಚಿಂತನೆ - 155

ಹೇಡಿತನ, ಅಂಜಿಕೆ, ದ್ವೇಷ ಇರುವಲ್ಲಿ ಭಗವಂತ ಸಹ ಇರಲು ಬಯಸುವುದಿಲ್ಲವಂತೆ. ಸತ್ಯವಿರಬಹುದು. ಯಾವಾಗಲೂ ಹೇಡಿಯಾಗಿಯೇ ವ್ಯವಹರಿಸುವ ವ್ಯಕ್ತಿಯನ್ನು ಯಾರು ನಂಬುವರು? ಎಲ್ಲದರಲ್ಲಿಯೂ ಹಿಂಜರಿಕೆ ಯಾಕೆ? ಪ್ರತಿಯೊಂದು ಕೆಲಸವನ್ನು ಯಾವುದೇ ಅಂಜಿಕೆಯಿಲ್ಲದೆ ಕೈಗೆತ್ತಿಕೊಂಡರೆ ಸಫಲತೆ, ಯಶಸ್ಸು ಸಿಗಬಹುದು. ಒಳ್ಳೆಯ ಆಲೋಚನೆಗಳ ಹಿಂದೆ ಕಾಣದ ಶಕ್ತಿಯ ಸಹಕಾರ ಇದ್ದೇ ಇರುತ್ತದೆ ಎಂಬ ನಂಬಿಕೆ ನಮ್ಮದಲ್ಲವೇ? ಆರೋಗ್ಯಕರವಾದ ಯಾವುದೇ ವೃತ್ತಿ ಮತ್ತು ಪ್ರವೃತ್ತಿಗಳನ್ನು ನಾವು  ಮಾಡಬಹುದು. ಇತರರಿಗೆ ತೊಂದರೆಯಾಗಬಾರದು ಅಷ್ಟೆ.

ದ್ವೇಷದಿಂದ ಕಟ್ಟಿದ್ದು ಎಷ್ಟು ದಿನದ ಆಟ? ಒಂದು ದಿನ ನೆಲಕಚ್ಚಬಹುದು. ಒಬ್ಬನನ್ನು ಅಡಿ ತಗ್ಗಿಸಬೇಕು, ಹಾಳುಗೆಡಹಬೇಕು ಎಂಬ ಮನೋಭಾವದಿಂದ ಹೊರಟವನು ಒಮ್ಮೆ ಜಯಿಸಿಯಾನು. ಆದರೆ ಅವನ ನರಿಬುದ್ಧಿ ಗೊತ್ತಾದಾಗ ಉಳಿದವರೆಲ್ಲ ಜಾರಿಯಾರು. ಆಗ ಇವನು ಮೇಲೆ ನೋಡಬೇಕಷ್ಟೆ. ಯಾವತ್ತೂ ದ್ವೇಷ, ಅಸೂಯೆ, ಮತ್ಸರ, ಹೊಟ್ಟೆಕಿಚ್ಚು ಎಂಬ ಕೆಟ್ಟಗುಣಗಳನ್ನು ಹತ್ತಿರ ಸಹ ಬರಲು ಬಿಡಬಾರದು. ಯಾರು ಅದಕ್ಕೆ ನೀರು ಗೊಬ್ಬರ ಹಾಕಿ ಪೋಷಣೆ ಮಾಡ್ತಾನೋ ಒಂದು ದಿನ ನಾಶ ಹೊಂದುವನು. ತಾನು ಹಾಳಾಗುವುದರೊಂದಿಗೆ ತನ್ನ ಸುತ್ತಲಿನವರನ್ನು ಸೆಳೆಯುವ ತಂತ್ರಗಾರಿಕೆ ಅವನಲ್ಲಿದೆ. ಹೇಗೆ ಬೇಕಾದರೂ ಮಾತನಾಡುವ ಕಲೆಯಿದೆ. ಇವನ ಬುದ್ಧಿ ಗೊತ್ತಿಲ್ಲದೆ ಬಲೆಗೆ ಬೀಳುವರು. ನಿಧಾನದಲ್ಲಿ ತಿಳುವಳಿಕೆ ಮೂಡುವಾಗ ಹೊಂಡಕ್ಕೆ ಬಿದ್ದು ಮೇಲೇಳಲಾಗದು. ಆದ ಕಾರಣ ಸ್ನೇಹಿತರೇ, ‘ಆಲೋಚನೆ ಅವರದಾದರೂ ವಿವೇಚನೆ’ ನಿಮ್ಮದಿರಲಿ. ಇಬ್ಬರೊಳಗೆ ತಂದಿಟ್ಟು ಚಂದ ನೋಡುವವರ ಸ್ನೇಹ ಬೇಡ. ಕಳೆದ ಸಮಯ ಬದುಕಿನಲಿ ಮತ್ತೆಂದೂ ಬಾರದು. ಇಂಥವರಿಗೋಸ್ಕರ, ಬೇರೆಯವರ ಮನೆ ಮನಸ್ಸಿನಲ್ಲಿ ಕಿಡಿ ಹಚ್ಚಿ ಚಳಿ ಕಾಯಿಸುವವರಿಂದ ದೂರವಿರೋಣ. ಎಲ್ಲಿ ಭಗವಂತ ಮೆಚ್ಚುವ ಕೆಲಸವಿದೆಯೋ ಅವರಿಗೆ ಸಹಕರಿಸೋಣ. ದ್ವೇಷವೆಂಬ ಕಿಡಿ ಬೇಡವೇ ಬೇಡ.

*ಯೇನ ಕೇನ ಪ್ರಕಾರೇಣ ಯಸ್ಯ ಕಸ್ಯಾಪಿ ದೇಹಿನ:/*

*ಸಂತೋಷಂ ಜನಯೇತ್ ಪ್ರಾಜ್ಞ: ತದೇವೇಶ್ವರಪೂಜನಮ್//*

ಉತ್ತಮನು, ತಿಳಿದವನು, ಪಂಡಿತನು, ವಿವೇಚನೆಯಿಂದ ವರ್ತಿಸುವವನು, ಪ್ರಾಜ್ಞನು ಹೇಗಾದರೂ ಸರಿಯೆ, ಯಾವುದೇ ಜೀವಿಗಾದರೂ ಸರಿಯೆ ಸದಾ ಸಂತೋಷವನ್ನೇ ನೀಡಬೇಕು, ನೀಡುವನು. ಅದುವೇ ಈಶ್ವರ ಪೂಜೆ. ನಮ್ಮ ಬಾಳ ಹಾದಿಯ ಶಿಲ್ಪಿಗಳು ನಾವೇ ಆಗೋಣ, ವಿವೇಚನೆಯಿಂದ. ಭಯ, ಅಂಜಿಕೆ ಬಿಟ್ಟು ಮುಂದುವರಿಯೋಣ.

-ರತ್ನಾ ಕೆ.ಭಟ್ ತಲಂಜೇರಿ

 (ಶ್ಲೋಕ: ಸುಭಾಷಿತ ಸಂಗ್ರಹ)