ಬಾಳಿಗೊಂದು ಚಿಂತನೆ - 157

ಬಾಳಿಗೊಂದು ಚಿಂತನೆ - 157

ಮಹಾಭಾರತದಲ್ಲಿ ಒಂದು ಅತಿ ಸೂಕ್ಷ್ಮ ವಿಷಯ ನಾವೆಲ್ಲ ತಿಳಿದವರೇ. ‘ಸಂಧಾನ’ ಕ್ಕಾಗಿ  ಪಾಂಡವ ರಾಯಭಾರಿಯಾಗಿ ಕೌರವನ ಆಸ್ಥಾನಕ್ಕೆ  ಭಗವಂತ ಬಂದಾಗ  ಭೀಷ್ಮ, ದ್ರೋಣಾದಿಗಳು, ಋಷಿಮುನಿಗಳು, ಪ್ರಾಜ್ಞರು, ಬ್ರಾಹ್ಮಣರು, ವೇದೋಪನಿಷತ್ತನ್ನು ಓದಿ ಅರಗಿಸಿಕೊಡ ಜ್ಞಾನಿಗಳು, ಇಡೀ ರಾಜಸಭೆಯೇ ಎದ್ದು ನಿಂತು ಗೌರವ ಸೂಚಿಸಿದರಂತೆ. ಆದರೆ ಗರ್ವಿಷ್ಠನಾದ ಸುಯೋಧನ ಏಳಲೇ ಇಲ್ಲ. 'ಬೇಕಾದರೆ ಆ ಗೋವಳನೇ ನನಗೆ ನಮಸ್ಕರಿಸಲಿ. ನಾನು ಹ‌ಸ್ತಿನಾವತಿಯ ಮಹಾಸಾಮ್ರಾಟ' ಎಂಬ ಅಹಂನಿಂದ ಬೀಗಿ, ಕುಳಿತಲ್ಲಿಂದ ಎದ್ದಿಲ್ಲ. ದೇವನಿಗೆ ಮೊದಲೇ ‘ಮನಸಿಜ ಪಿತ’ ನೆಂಬ ಬಿರುದಿದೆ. ಕೌರವನ ಮನಸ್ಸು ಗೊತ್ತಾಯಿತು. ಕುಳಿತಲ್ಲಿಂದಲೇ ತನ್ನ ಪಾದಮೂಲಕ್ಕೆ ಸಿಂಹಾಸನ ಸಹಿತ ಬೀಳುವ ಹಾಗೆ ಭೂಮಿಯನ್ನು ಒತ್ತಿ ಮಾಡಿದನಂತೆ. ಹಾಗೆಯೇ ಗರ್ವತನವೆಂಬುದು ಸಲ್ಲದು. ಮಣ್ಣು ಕಚ್ಚುವಾಗ ಯಾರೂ ಬರಲಾರರು. ದೇವನು ಎಲ್ಲವನ್ನೂ ನೋಡುವನೆಂಬ ಪ್ರಜ್ಞೆಯಿದ್ದರೆ ಸಾಕು. ಭಗವಂತನ ಚಕ್ಷುಗಳಿಂದ ಮರೆಮಾಚಲು ಸಾಧ್ಯವೇ? ಮುಂದೆ ಸೂಜಿಮೊನೆ ಊರುವ ಜಾಗ ಕೊಡಲಾರೆ ಎಂದು ಹೇಳಿದನೆಂದರೆ ಯಾವ ಮಟ್ಟದ ದ್ವೇಷ ಎಂದು ಅರ್ಥಮಾಡಿಕೊಳ್ಳಬೇಕು. ಸದಾಚಾರ ಸಂಪನ್ನರು, ದುರಾಸೆಯಿಲ್ಲದವರು, ಅಲ್ಪತೃಪ್ತರು, ಸಾಗರದಂತೆ ಗಂಭೀರತೆ ಇರುವವರು ಇಹದಲ್ಲಿ ಪರದಲ್ಲಿ ಶ್ರೇಯಸ್ಸನ್ನು ಹೊಂದುವರು.

*ಅಭಯಂ ಯಸ್ಯ ಭೂತೇಭ್ಯ: ಸರ್ವೇಷಾಮಭಯಂ ಯತ:/ಸ ವೈ ಪರಿಣತಪ್ರಜ್ಞ:* *ಪ್ರಖ್ಯಾತೋ ಮನುಜೋತ್ತಮ://*

ಯಾರಿಂದಲೂ, ಯಾವ ಪ್ರಾಣಿಗಳಿಂದಲೂ ಯಾವ ಭಯವೂ ಇರುವುದಿಲ್ಲವೋ, ಬೇರೆ ಪ್ರಾಣಿಗಳಿಗೂ ಭಯವಿಲ್ಲವೋ ಅಂತಹ ಪರಿಪಕ್ವ ಪ್ರಜ್ಞಾವಂತ ಮಾನವನೇ ಶ್ರೇಷ್ಠನೆನಿಸುವನು.

ಎಲ್ಲರಿಗೂ ಹಿತವೆನಿಸುವ ಮನೋಭಾವದವರು. ಸ್ನೇಹಪರರು. ಪ್ರಶಾಂತ ಮನದವರು. ಈ ಎಲ್ಲಾ ಗುಣಗಳು ಸಂಸ್ಕಾರವಂತರಿಗೆ ಮಾತ್ರ ಬರಬಹುದಷ್ಟೆ. ಸಂಸ್ಕಾರ ಹೀನರಿಗೆ ಬಾರದು. ಈ ಗುಣ ಹೊಂದಿದವನೇ ಯುಧಿಷ್ಠಿರನು. ಯಾವಾಗಲೂ ಆತ್ಮಸಾಕ್ಷಿಗೆ ಸರಿಯಾಗಿ ನಡೆಯುವುದು ಶ್ರೇಯಸ್ಕರ. ತಾನೇ ಸಾರ್ವಭೌಮನಾಗಿ ಸಿಂಹಾಸನದಲ್ಲಿ ಕೂರಬೇಕೆಂಬಾಸೆ ಧರ್ಮರಾಜನಿಗೆ ಯಾವತ್ತೂ ಇರಲಿಲ್ಲ. ನಿರಾಳ ಮನಸ್ಸು, ಭಗವಂತನ ಎಣಿಕೆಯಂತೆ ಆಗುತ್ತದೆ ಎಂದು ನಂಬಿದವನು, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಬಲವಾಗಿ ನಂಬಿದ್ದನು. ‘ಧರ್ಮೋ ರಕ್ಷತಿ ರಕ್ಷಿತ:’ ಅಲ್ಲವೇ?

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ