ಬಾಳಿಗೊಂದು ಚಿಂತನೆ - 159
ನಾವು ಪ್ರಪಂಚ ಎಂಬುದಾಗಿ ಹೇಳ್ತಾನೇ ಇರುತ್ತೇವೆ. ನಾವು ಓದಿ ತಿಳಿದ ಹಾಗೆ ಈ ಪ್ರಪಂಚವೆಲ್ಲವೂ ಮೊದಲು ನೀರಿನಿಂದ ಆವರಿಸಲ್ಪಟ್ಟಿತಂತೆ. ಮುಂದೆ ಘನೀಕರಣಗೊಂಡು ಭೂಮಿಯ ಸೃಷ್ಟಿಯೆಂದರು. ಹೀಗೆ ಈ ಪ್ರಪಂಚ ಪಂಚದಿಂದ ಕೂಡಿ, ಆಕಾಶ(ಅವಕಾಶ), ನೀರು, ಅಗ್ನಿ, ಭೂಮಿ, ವಾಯು ಎಂಬ ಪಂಚಮಹಾ ಭೂತಗಳಿಂದಲೇ ಆಯಿತೆಂಬ ಪ್ರತೀತಿ.
ಇದನ್ನೆಲ್ಲ ನಮ್ಮ ಶರೀರಕ್ಕೆ ಹೋಲಿಸಿ ಹೊಟ್ಟೆ, ಕಿವಿ, ಮೂಗು, ರಕ್ತ ಮಾಂಸ, ಜೊಲ್ಲು, ಕಣ್ಣೀರು, ಚರ್ಮ, ಮೂಳೆ ಎಲ್ಲವೂ ಸೇರಿಯೇ ಪಂಚಭೌತಿಕವೆನಿಸಿ ಬಿಟ್ಟಿದೆ. ನಮಗೆಲ್ಲ ತಿಳಿದ ಹಾಗೆ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವುಗಳೇ ಪಂಚೇಂದ್ರಿಯಗಳು. ನಾವು ಹೇಳುವುದುಂಟು ಸಸ್ಯಗಳು ಎಲ್ಲಿಗೂ ಚಲಿಸುವುದಿಲ್ಲ ಎಂಬುದಾಗಿ. ಆದರೆ ಬಿಸಿಲಿದ್ದೆಡೆಗೆ ಬಾಗುತ್ತವೆ ಅಲ್ಲವೇ?
*ಸುಖದು:ಖಯೋಶ್ಚ ಗ್ರಹಣಾಚ್ಛನ್ನಸ್ಯ ಚ ವಿರೋಹಣಾತ್/*
*ಜೀವಂ ಪಶ್ಯಾಮಿ ವೃಕ್ಷಾಣಾಮಚೈತನ್ಯಂ ನ ವಿದ್ಯತೇ//*
ಗಿಡಮರಗಳಿಗೂ ಜೀವವಿದೆ, ಅವುಗಳಿಗೂ ಕಷ್ಟ ಸುಖಗಳಿವೆ, ಅದನ್ನು ಅನುಭವಿಸುತ್ತವೆ, ಸಂತಸ ಪಡುತ್ತವೆ. ಬೇರುಗಳು ನೀರನ್ನು ಹೀರಿ ಸಸ್ಯದ ಎಲ್ಲಾ ಭಾಗಗಳಿಗೂ ಕಳುಹಿಸುತ್ತವೆ. ಸಸ್ಯಗಳು ಸಹ ಪಂಚಮಹಾ ಭೂತಗಳಿಂದಾಗಿದೆ. ವಿಜ್ಞಾನಿಯಾದ ನೋಬೆಲ್ ಪಾರಿತೋಷಕ ಪಡೆದ ಸರ್ ಜಗದೀಶ್ ಚಂದ್ರಬೋಸರೂ ಹೇಳಿದ್ದ ಮಾತು ಇದೇ ಅಲ್ಲವೇ? ಸಸ್ಯಗಳಿಗೂ ಜೀವವಿದೆ ಎಂಬುದಾಗಿ. ಸಸ್ಯಗಳು ಸಾಯುವಲ್ಲಿವರೆಗೆ ಬೆಳೆಯುತ್ತವೆ. ಅದು ಮಾತ್ರ ನಮಗಿಂತ ಭಿನ್ನ, ಎಷ್ಟೇ ತೊಂದರೆ ಕೊಟ್ಟರೂ ಉಪದ್ರವನ್ನಂತೂ ಮಾಡದೆ ಉಪಕಾರವೇ ಮಾಡುತ್ತವೆ. ಸಸ್ಯಗಳಿಲ್ಲದ ಬದುಕನ್ನು ಊಹಿಸಲೂ ಸಾಧ್ಯವಿಲ್ಲ. ನಾವು ಸಹ ಸಸ್ಯಗಳ ಹಾಗೆ ಪರೋಪಕಾರಿಗಳಾಗಿದ್ದರೆ ಎಷ್ಟು ಚೆನ್ನ. ಆದರೆ ಸ್ವಾರ್ಥ ಬಿಡಬೇಕಲ್ಲ? ಸ್ವಾರ್ಥದೆದುರು ನಿಸ್ವಾರ್ಥ ಗೌಣವಾಗಿ ವಿಜೃಂಭಿಸುತ್ತದೆ. ಅವಕಾಶ ಎಂಬ ನಮ್ಮ ಶರೀರದಲ್ಲಿ ಅರಿಷಡ್ವರ್ಗಗಳು ಪ್ರವೇಶವಾಗಿ ತನ್ನ ಪ್ರಭಾವ ಬೀರುತ್ತದೆ. ತನಗೆ, ತನ್ನವರಿಗಾಗಿ ಮಿಕ್ಕಿದ್ದನ್ನಾದರೂ ದಾನಗೈಯುವ ಬುದ್ಧಿ ಕೆಲವರಿಗೆ ಇರುವುದಿಲ್ಲ. ಹಣವನ್ನು ಪೇರಿಸಿಡುವುದೊಂದೇ ಅವರಿಗೆ ಅಭ್ಯಾಸ. ಮುಂದೆ ಯಾತಕ್ಕಾಗಿ ಎಂದೇ ಗೊತ್ತಿಲ್ಲ. ನಾಳೆ ಉಸಿರು ನಿಂತಾಗ ಈ ಹಣ ಏನೂ ಬದುಕಿಸಲಾರದು. ಕೋಟಿ ಕೋಟಿ ಹಣವಿದ್ದವರಿಗೂ ಜೀವ ಉಳಿಸಲಾಗದು. ಭಗವಂತನಿತ್ತ ಆಯುಷ್ಯ ಮುಗಿದಾಗ ನಿಲ್ಲು ಅಂದರೂ ನಿಲ್ಲಲಾಗದು. ಸರ್ವಜ್ಞ ಕವಿ ಹೇಳಿದ ಹಾಗೆ ‘ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ, ಕೆಟ್ಟಿತೆನಬೇಡ, ಮುಂದಕ್ಕೆ ಕಟ್ಟಿಹುದು ಬುತ್ತಿ ಸರ್ವಜ್ಞ//’
ಏನಾದರೂ ಜೀವಿತದಲ್ಲಿ ದಾನಧರ್ಮ ಮಾಡಿದರೆ ಆ ಪುಣ್ಯ ಆತನಿಗೆ ಸಿಗಬಹುದು. ದಾನ ಮಾಡಿದರೆ ಹಾಳಾಗದೆ ಒಳ್ಳೆಯದೇ ಆಗುವುದು. ನಾವು ಮಾಡಿದ ಉತ್ತಮ ಕಾರ್ಯಗಳೇ ನಮ್ಮ ಬೆಂಬತ್ತಿ ಬರುವುದು. ಈ ಪ್ರಜ್ಞೆ ನಮಗಿದ್ದರೆ ಉಳ್ಳವನು ಏನಾದರೂ ಸಮಾಜ ಮುಖಿ ಕೆಲಸಗಳನ್ನು ಮಾಡಿಯಾನು. ‘ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು* ಸರ್ವಜ್ಞರ ನುಡಿಗಳಲ್ಲಿ ಎಷ್ಟೊಂದು ಅರ್ಥವಿದೆ. ಹಸಿರು ಸಸ್ಯಗಳಂತೆ ಉಪಕಾರಿಗಳಾಗೋಣ. ದೇವನಿತ್ತ ಈ ಪಂಚಭೌತಿಕ ಜೀವವನ್ನು ಸದುಪಯೋಗಪಡಿಸಿಕೊಳ್ಳೋಣ. ಪೂರ್ತಿ ಋಣ ತೀರಿಸಲು ಸಾಧ್ಯವಿಲ್ಲ, ಕೈಲಾದಷ್ಟು ಋಣಮುಕ್ತರಾಗೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸಂಸ್ಕೃತಿ ಸಂಚಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ