ಬಾಳಿಗೊಂದು ಚಿಂತನೆ (16) - ಸುಭಾಷಿತದ ತಿರುಳು

ಬಾಳಿಗೊಂದು ಚಿಂತನೆ (16) - ಸುಭಾಷಿತದ ತಿರುಳು

*ಸುಭಾಷಿತಗಳು* ಜ್ಞಾನದ ಗುಳಿಗೆಗಳು ಇದ್ದಂತೆ. ಸಂಸ್ಕೃತಕ್ಕೆ ಕಾವ್ಯಮಯವಾದ ಜ್ಞಾನದ ತಿರುಳನ್ನು ನೀಡಿದ ಶ್ರೇಷ್ಠ ವಾದ ಹೇಳಿಕೆಗಳು. ಇವುಗಳ ಒಳಹೊಕ್ಕು ನೋಡಿದರೆ ಕಾಣಸಿಗುವುದು *ವೇದಗಳು, ಉಪನಿಷತ್ತುಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ, ಪುರಾಣಗಳು, ಆಗಮ ಶಾಸ್ತ್ರಗಳು,ದರ್ಶನಗಳು, ಮಹಾಕಾವ್ಯಗಳು, ಲಘುಕಾವ್ಯಗಳು * ಮುಂತಾದವುಗಳ ಸಾರಗಳೇ ಇರುವುದು.

ಸುಭಾಷಿತ ರತ್ನಾವಳಿ, ಸುಭಾಷಿತ ಭಾಂಡಾಗಾರ, ಸಮಯೋಚಿತ ಪದ್ಯಮಾಲಿಕಾ, ಸೂಕ್ತಿ ಮುಕ್ತಾವಳಿ, ಸುಭಾಷಿತವಾಳಿ ಮುಂತಾದ ಸಂಗ್ರಹಗಳೂ ಇವೆ. ಸುಭಾಷಿತದಲ್ಲಿ ಆಯ್ಕೆ ಮಾಡಿದ ವಸ್ತು ನಿಷ್ಠ ಅಭಿಪ್ರಾಯಗಳು ನಮ್ಮ ಜೀವನಕ್ಕೆ  ಮಾರ್ಗದರ್ಶನ ನೀಡುವಂತಿದೆ. ಧರ್ಮ ಮಾರ್ಗ, ಆಚಾರ-ವಿಚಾರ, ನೈತಿಕ ಮೌಲ್ಯಗಳು, ನ್ಯಾಯನೀತಿಗಳು, ಮಾನವನ ಗುಣದೋಷಗಳು, ವಿವೇಕಯುತವಾದ ಆಲೋಚನೆಗಳು, ನಿಸರ್ಗ ಪ್ರೇಮ, ಪಾಂಡಿತ್ಯ, ಗೆಳೆತನ, ಸ್ನೇಹ, ಜ್ಞಾನ, ದಾನ, ಸಹನೆ, ದಯೆ, ಸೋದರ ಪ್ರೀತಿ, ಆರೋಗ್ಯ ಮತ್ತು ವಿಶ್ವ ಪ್ರೇಮಿ ಮುಂತಾದ ಒಳ್ಳೆಯ ಮೌಲ್ಯಗಳ ಬಗ್ಗೆ ವಿವರವಾದ ಹೇಳಿಕೆಗಳಿವೆ.

ಇಂತಹ ಮೌಲ್ಯ ತುಂಬಿದ ನುಡಿಗಳು ನಮ್ಮ ಜೀವನದ ಲ್ಲಿ ಅತಿ ಅವಶ್ಯವಾಗಿ ಬೇಕು.ಬರಿಯ ಪುಸ್ತಕ ಓದುವುದಲ್ಲ, ಅದರಲ್ಲಿರುವ ಮೌಲ್ಯ ಏನೆಂದು ತಿಳಿದು ವ್ಯವಹಾರದಲ್ಲಿ ಅಳವಡಿಸಿದಾಗ ಓದಿದ್ದಕ್ಕೂ ಸಾರ್ಥಕ ವಾದೀತು.

-ರತ್ನಾ ಭಟ್, ತಲಂಜೇರಿ