ಬಾಳಿಗೊಂದು ಚಿಂತನೆ - 160

ಬಾಳಿಗೊಂದು ಚಿಂತನೆ - 160

ನಾವು ಎಲ್ಲರೊಂದಿಗೆ ಬೆರೆತು ಕಲೆತು ಬಾಳುವುದೇ ಜೀವನ. ಕೆಲವೊಂದು ಸಲ ಈ ಬದುಕೆಂಬುದು ಹೋರಾಟವೇನೋ ಅನ್ನಿಸುವುದುಂಟು. ಕಷ್ಟವೋ ಸುಖವೋ ಬದುಕು ನಡೆಸಲೇ ಬೇಕಲ್ಲವೇ? ನಾವು ದುಡಿಯುವುದು ನೆಮ್ಮದಿಯಲ್ಲಿ ಇರುವಷ್ಟು ದಿನ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಬದುಕನ್ನು ನಡೆಸಲು. ಹಿರಿಯರು ಮಾಡಿಟ್ಟ, ಕೂಡಿಟ್ಟ ಆಸ್ತಿ, ಸಂಪತ್ತು ಇದ್ದವರು ಸಂಪಾದನೆಗೆ ಬೇಕಾಗಿ ಮೈಬಗ್ಗಿಸಿ ದುಡಿಯದಿದ್ದರೂ ಹೇಗೋ ಆಗುತ್ತದೆ ಎಂದು ಕಾಣುವವರ ಕಣ್ಣಿಗೆ ಗೋಚರಿಸಬಹುದು. ಆದರೆ ‘ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು’ ಆಸ್ತಿ ಬದುಕು ಎರಡೂ ಖಾಲಿ ಆಗಬಹುದಲ್ಲವೇ? ಮಣ್ಣು ಅನ್ನ ಕೊಡಬೇಕಾದರೆ ಆ ಮಣ್ಣಿನಲ್ಲಿ ದುಡಿಯಬೇಕು. ‘ಕೈ ಕೆಸರಾದರೆ ಬಾಯಿಗೆ ಮೊಸರು’ ಸುಮ್ಮನೆ ಜಮೀನಿದೆ, ಹೊಲ ಇದೆ ಎಂದು ಕೂತರೆ ಏನೂ ಸಿಗದು, ಇದ್ದದ್ದು ಕ್ರಮೇಣ ಮುಗಿಯಬಹುದು.

ಕಷ್ಟಪಡಬೇಕು ಸುಖ ಕಾಣಬೇಕು. ಮನೆಯಲೊಂದು ಮಗುವಿನ ಜನನವಾಯಿತೆಂದರೆ ಎಷ್ಟೊಂದು ಜವಾಬ್ದಾರಿಗಳಿವೆ. ಆ ಮಗುವಿನ ಲಾಲನೆ -ಪಾಲನೆ ಮಕ್ಕಳಾಟಿಕೆಯಲ್ಲ. ಜೋಪಾನ, ಜಾಗ್ರತೆ, ಜಾಗೃತಿ ಎಲ್ಲವೂ ಬೇಕು. ಮುಖ್ಯವಾಗಿ ತಾಳ್ಮೆ ಬೇಕು. ದೊಡ್ಡವರ ಯಾವುದೇ ತಲೆಬಿಸಿಗಳನ್ನು ಮಗುವಿನ ಮೇಲೆ ಹಾಕಲಾಗದು, ಅದೆಲ್ಲ ಅರ್ಥವಾಗುವ ವಯಸ್ಸೂ ಅಲ್ಲ.

ಅದೇ ರೀತಿ ಮಣ್ಣನ್ನು ಪ್ರೀತಿಸಬೇಕು, ದುಡಿಯಬೇಕು, ಸುಖಾಸುಮ್ಮನೆ ಕುಳಿತರೆ ಏನೂ ಸಿಗದು. ನಮ್ಮ ಬದುಕಿನ ದಾರಿಯನ್ನು ಸುಂದರವಾಗಿಸುವುದು ನಮ್ಮದೇ ತೋಳುಭುಜಗಳಲ್ಲವೇ? ಬೇರೆಯವರು ಕೇಳಿದರೆ ಸಹಕಾರ ನೀಡಿಯಾರು ಅದೂ ‘ನಾವು ಒಳ್ಳೆಯವರಾದರೆ ಮಾತ್ರ’ ಕಗ್ಗದ ಸಾಲುಗಳು ಒಂದಷ್ಟು ಓದಿದ್ದು ನೆನಪಾಯಿತು. .

*ಸುಂದರವನೆಸಗು ಜೀವನದ ಸಾಹಸದಿಂದೆ,*

*ಕುಂದಿಲ್ಲವದಕೆ ಸಾಹಸಭಂಗದಿಂದೆ/*

*ಮುಂದಕದು ಸಾಗುವುದು ಮರಳಿ ಸಾಹಸದಿಂದೆ*

*ಚೆಂದ ಧೀರೋದ್ಯಮವೆ--ಮಂಕುತಿಮ್ಮ//*

ಸಾಹಸಪಡು, ಕಷ್ಟಪಡು ಬದುಕನ್ನು ಸುಂದರವಾಗಿಸು. ನಿನ್ನ ಕೆಲಸ ನಿನ್ನದು ,ಯಾರ ಅಡ್ಡಿಯೂ ಇಲ್ಲ, ಅವರವರ ಕೆಲಸ, ಕರ್ತವ್ಯ ಅವರವರು ಮಾಡುವುದರಲ್ಲಿ ತಪ್ಪೇನಿದೆ? ಅದು ಕಡಿಮೆಯೂ ಅಲ್ಲ. ಬಾಪೂಜಿಯವರು ಹೇಳಿದ ಮಾತು ‘ನಮ್ಮ ಕೆಲಸ ನಾವೇ ಮಾಡಬೇಕು. ಇತರರನ್ನು ಆಶ್ರಯಿಸಬಾರದು, ಮನೆಯ ಮಕ್ಕಳಿಗೂ ಕಲಿಸಿ ಇದನ್ನು’. ನಾವು ಉಪಯೋಗಿಸುವ ಶೌಚಾಲಯವನ್ನು ನಾವೇ ಸ್ವಚ್ಛ ಮಾಡಬೇಕು, ಬೇರೆಯವರು ಬಂದು ಸ್ವಚ್ಛ ಮಾಡಲಿ ಎಂದು ಕುಳಿತರೆ ಏನಾಗಬಹುದು? ಹಾಗೆಯೇ ಅವರವರ ಕರ್ತವ್ಯ ಅವರವರ ಹೊಣೆಗಾರಿಕೆ. ‘ಕಳೆದ ಸಮಯ ಮತ್ತೆ ಬಾರದು ಜಾರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳೋಣ’

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ