ಬಾಳಿಗೊಂದು ಚಿಂತನೆ - 161
‘ಹಣ’ ನಮಗೆ ಬೇಕೇ ಬೇಕು. ಆದರೆ ಎಷ್ಟು, ಹೇಗೆ ಎಂಬುದನ್ನು ನಿರ್ಧರಿಸುವರು ನಾವುಗಳೆ ಅಲ್ಲವೇ? ‘ಹಣವನ್ನು ನೋಡಿದರೆ ಹೆಣ ಸಹ ಬಾಯಿ ಬಿಡಬಹುದು’ ಗಾದೆ ಮಾತು. ನಿರ್ಜೀವ ಜಡ ಬಾಯಿ ಬಿಡಲು ಸಾಧ್ಯವೇ? ಇಲ್ಲ. ಅಂದರೆ ಹಣದ ವಿಷಯದಲ್ಲಿ ನಾವು ಆ ರೀತಿ ಇರಬಹುದು. ಅಷ್ಟೂ ಆಸೆ ಪಡುತ್ತೇವೆ ಎಂಬ ಧ್ವನಿಯದು.
ಜೀವನಕ್ಕೆ, ಬದುಕನ್ನು ಕಟ್ಟಿಕೊಳ್ಳಲು ಹಣ ಬೇಕು. ಅದಕೊಂದು ಇತಿಮಿತಿ ಬೇಡವೇ? ಅದೂ ನಾವೇ ಹಾಕಿಕೊಳ್ಳಬೇಕು. ‘ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು’ ಇಲ್ಲದಿದ್ದರೆ ಕಾಲು ನೆಲಕ್ಕೆ ತಾಗಬಹುದು. ನಮ್ಮ ಯೋಗ ಮತ್ತು ಯೋಗ್ಯತೆಯಲ್ಲಿ ಇದ್ದದ್ದು ನಮಗೆ ದೊರೆಯುತ್ತದೆ. ಓರ್ವ ನ್ಯಾಯವಾಗಿ ಸಂಪಾದನೆ ಮಾಡಿದ ಗಳಿಕೆಯನ್ನು ತೂಕಬದ್ಧವಾಗಿ ಸರಿದೂಗಿಸಿಕೊಂಡು ಹೋಗುತ್ತಾನೆ. ಅದರಲ್ಲೇ ಒಂದಷ್ಟು ದಾನಧರ್ಮ ಸಹ ಮಾಡುವನು. ಧಾರಾಳ ಇದ್ದವರಿಗೆ ಕೈ ಸ್ವಲ್ಪ ಸಣ್ಣ. ಇದೆಲ್ಲ ಸಮಾಜದಲ್ಲಿ ಕಾಣುವ ಸತ್ಯಗಳು.
ಈ ಹಣಕ್ಕೆ ಮೂರು ದಾರಿಗಳಿವೆ. ಸತ್ಪಾತ್ರರಿಗೆ ಹಂಚುವುದು. ಗಳಿಕೆಯನ್ನು ತಾವೇ ಬೇಕಾದ ಹಾಗೆ ಉಪಯೋಗಿಸುವುದು. ಇತರರಿಗೂ ಕೊಡದೆ,ತಾನೂ ಅನುಭವಿಸದೆ, ಗಂಟು ಕಟ್ಟಿ ಇಟ್ಟು ಒಂದು ದಿನ ಭೂಮಿ ಮೇಲಿನ ಋಣ ತೀರುವುದು.
*ದಾನಂ ಭೋಗೋ ನಾಶಸ್ತಿ ಸ್ರೋ ಗತಯೋ ಭವಂತಿ ವಿತ್ತಸ್ಯ/*
*ಯೋ ನ ದದಾತಿ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ//*
ದಾನ, ಬಳಕೆ, ನಾಶ ಈ ಮೂರು ದಾರಿಗಳು ಐಶ್ವರ್ಯದಲ್ಲಿ, ಹಣದಲ್ಲಿ ಕಾಣಬಹುದು. ಯಾರಿಗೂ ನೀಡದೆ ಕಟ್ಟಿಟ್ಟವನ ಹಣ, ನಂತರ ಯಾರ್ಯಾರೋ ಖರ್ಚು ಮಾಡುವುದೂ ಇದೆ. ಹಣದ ಬಗ್ಗೆ ಸುಳ್ಳು ಪ್ರೀತಿಯಿಟ್ಟು ಬದುಕುವುದು ಖಂಡಿತಾ ಬೇಡ.
ವಾಮ ಮಾರ್ಗದ ಗಳಿಕೆ ಅತ್ಯಂತ ಹೇಯಕೃತ್ಯ. ‘ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಮಾತಿದೆ. ಬೇರೆಯವರ ಸಂಪಾದನೆಯಲ್ಲಿ ಮೆರವಣಿಗೆ ಯಾಕೆ? ಈ ಪರ್ಸಂಟೇಜ್ ವ್ಯವಹಾರ ಹಾಗೆಯೇ ಆಗಿರಬಹುದು ಅನ್ನಿಸ್ತದೆ. ನ್ಯಾಯವಾಗಿ ಎಷ್ಟು ಖರ್ಚಿದೆ ಅದನ್ನು ತೆಗೆದುಕೊಳ್ಳಲಿ, ಅದರ ಮೇಲೆ ಸಾವಿರಗಟ್ಲೆ ಪಡೆಯುವುದು, ಅದು ಅನ್ಯಾಯ. ಜಿಗಣೆಗಳ ಹಾಗೆ ಹಿಂಡುವುದಲ್ಲವೇ? ಇದ್ದವ ಕೊಟ್ಟಾನು. ಇಲ್ಲದವ ತನ್ನಲ್ಲಿರುವ ಆಸ್ತಿ, ಒಡವೆ ಎಲ್ಲಾ ಮಾರಿ ಏನೂ ಇಲ್ಲದಂತಾಗಿ ಸಾಲದ ಶೂಲಕ್ಕೆ ನೇತಾಡಬೇಕಷ್ಟೆ. ಸಂಪಾದನೆ ಹಿತಮಿತವಾಗಿರಲಿ. ಇದ್ದುದರಲ್ಲೇ ಹಂಚಿ ಬದುಕೋಣ. ನಮ್ಮ ಮಕ್ಕಳನ್ನೂ ಹಾಗೆಯೇ ತಯಾರು ಮಾಡೋಣ. ಅವರ ತೋಳುಗಳಿಗೆ ಶಕ್ತಿ ನೀಡಿ ಗಟ್ಟಿಗೊಳಿಸೋಣ. ಪಾಪದ ಗಳಿಕೆಯ ಬಗ್ಗೆ ತಿಳಿ ಹೇಳೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಭತೃಹರಿ ನೀತಿಶತಕ)
ಚಿತ್ರ ಕೃಪೆ: ಇಂಟರ್ನೆಟ್ ತಾಣ