ಬಾಳಿಗೊಂದು ಚಿಂತನೆ - 172

ಬಾಳಿಗೊಂದು ಚಿಂತನೆ - 172

ಬಹಳ ತಿಳಿದ ಮೇಧಾವಿಗಳು, ಜ್ಞಾನಿಗಳು, ಪಂಡಿತೋತ್ತಮರ ಹತ್ತಿರ ನಾವು ಮಾತನಾಡುವಾಗ ಜಾಗ್ರತೆ ವಹಿಸಬೇಕು. ಒಳ್ಳೆಯ ಅಂಶಗಳನ್ನು ತಿಳಿಯುವ ಸಾಮರ್ಥ್ಯ, ಜ್ಞಾನ ಅವರಿಗಿದೆ. ಗೊತ್ತಿಲ್ಲದವರು, ಸ್ವಲ್ಪ ಜ್ಞಾನಿಗಳು, ವಿಷಯವನ್ನೇ ಅರ್ಥಮಾಡಿಕೊಳ್ಳದವರ ಹತ್ತಿರ ಏನೂ ಹೇಳಬಾರದು. ನಾವೊಂದು ಹೇಳುವುದು ಅವರೊಂದು ತಿಳಿಯುವುದು ಆಗಬಹುದು.

*ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಮ್|*

*ಮೂರ್ಖಾಗ್ರೇಪಿ ಚ ನ ಬ್ರೂಯಾತ್ ಬುಧಪ್ರೋಕ್ತಂ ನ ವೇತ್ತಿ ಸಃ||*

ಎಲ್ಲಾ ಓದಿದ ಪಂಡಿತರು, ಜ್ಞಾನಿಗಳ ಮುಂದೆ ನಮ್ಮ ಗುಣಗಳನ್ನು ಹೇಳದಿರುವುದೇ ಉತ್ತಮ. ಅವರು ತಾವಾಗಿಯೇ  ತಿಳಿಯುತ್ತಾರೆ. ಹಾಗೆಯೇ ಮೂರ್ಖರ ಹತ್ತಿರ ಸಹ ನಮ್ಮ ಯಾವ ಗುಣಗಳನ್ನು ಹೇಳಬಾರದು. ಹೇಳಿದ ವಿಷಯವನ್ನು ಅರ್ಥ ಮಾಡಿಕೊಳ್ಳುವ ಬುದ್ಧಿವಂತಿಕೆ ಅವರ ಹತ್ತಿರ ಇಲ್ಲ. ಒಟ್ಟಿನಲ್ಲಿ ಎದುರಿದ್ದವನು ಎಂಥವ ಎಂಬುದು ಗೊತ್ತಿಲ್ಲದೆ ಬಾಯಿ ಬಿಡಬಾರದು. ಮಾತು ಸಹ ಒಂದು ಕಲೆಯೇ. ಏನು, ಎಷ್ಟು, ಯಾರಲ್ಲಿ, ಯಾವಾಗ, ಸಮಯ, ಸಂದರ್ಭ ನೋಡಿ, ಯೋಚಿಸಿ ಮಾತನಾಡಬೇಕು.

-ರತ್ನಾ ಭಟ್ ತಲಂಜೇರಿ

(ಶ್ಲೋಕ: ಸರಳ ಸುಭಾಷಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ