ಬಾಳಿಗೊಂದು ಚಿಂತನೆ - 173
ಪ್ರತಿಯೊಂದು ಜೀವಿಗೂ ಆಹಾರ ಅವಶ್ಯಕ. ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳು ನಾವು ಸೇವಿಸುವ ಆಹಾರ, ಸಮಯ ಪರಿಪಾಲನೆ, ಶಿಸ್ತು, ಬೇಕಾಬಿಟ್ಟಿ ತಿನ್ನುವುದು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗ ಬಲ್ಲುದು. ಸಾಕಷ್ಟು ನೀರು ಸಹ ಕುಡಿಯಬೇಕು. ಯೋಗ, ಧ್ಯಾನ, ನಡಿಗೆ ,ಎಣ್ಣೆ ಸ್ನಾನ, ಉತ್ತಮ ಯೋಚನೆಗಳು, ಸುಮಧುರ ಸಂಬಂಧಗಳು ಇವೆಲ್ಲವುಗಳು ಆರೋಗ್ಯಕ್ಕೆ ಪೂರಕ ಅಂಶಗಳು. ಗಬಗಬ ತಿನ್ನುವುದು, ಒಂದೊಂದೇ ಅಗುಳನ್ನು ತಿನ್ನುವುದು ಇದೆರಡೂ ಸಲ್ಲದು. ಮಾತನಾಡಿಕೊಂಡು ತಿನ್ನುವ, ಉಣ್ಣುವ ಅಭ್ಯಾಸ ಅಷ್ಟು ಹಿತಕರವಲ್ಲ. ಆದರೆ ಹೀಗೆ ಭೇಟಿಯಾದಾಗ ಕೆಲವು ಜನ ಬಂಧುಗಳು ಹೇಳಿದ್ದುಂಟು ಊಟದ ಸಮಯದಲ್ಲಿ ಮಾತ್ರ ಮನೆಯವರೆಲ್ಲ ಒಟ್ಟು ಸೇರುವುದು, ಆಗ ಮಾತುಕತೆ ಸಹಜ ಎಂದು. ವಿಷಯ ಹೌದು. ಮಾತು ವಿಕೋಪಗಳಿಗೆ ಹೋಗುವುದು ಒಮ್ಮೊಮ್ಮೆ ಅನಾರೋಗ್ಯಕರ ಇದೇ ಸಮಯದಲ್ಲಿ. ಏನೇ ಇರಲಿ ಊಟದಲ್ಲಿ ಸಿಟ್ಟು ತೋರಿಸಬಾರದಂತೆ. ಹೊಟ್ಟೆ ಹಸಿವು ಎನ್ನುವುದು ಅಗ್ನಿ ದೇವನಂತೆ. ಎಷ್ಟೇ ಸೇವಿಸಿದರೂ ಜೀರ್ಣವಾಗುವುದು. ಆಹಾರ ಸೇವಿಸುವ ಮೊದಲು ‘ಅನ್ನಪೂರ್ಣೆ’ ಗೆ ಕರ ಜೋಡಿಸ್ತೇವೆ.
*ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ*/
*ಜ್ಞಾನ ವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ//*
*ಅಹಂ ವೈಶ್ವಾನರೋ ಭೂತ್ವಾಂ ಪ್ರಾಣಿನಾಂ ದೇಹಮಾಶ್ರಿತ:/*
*ಪ್ರಾಣಾಪಾನಸಮಾಯುಕ್ತ:ಪಚಾಮ್ಯನ್ನಂ ಚತುರ್ವಿಧಂ*//
ಆಕೆ ಮಹಾತಾಯಿ ಅಲ್ವೇ?ಅವಳ ಕೃಪೆ ನಮ್ಮೆಲ್ಲರ ಮೇಲೆ ಸದಾ ಇರಬೇಕು.
*ಓಂ ಅನ್ನಪತೇನ್ನಸ್ಯ ನೋ*
*ದೇಹ್ಯನಮೀವಸ್ಯ ಶುಷ್ಮಿಣ:*/
*ಪ್ರಪ್ರದಾತಾರಾಂ ತಾರಿಷ ಊರ್ಜಂ*
*ನೋ ದೇಹಿ ದ್ವಿಪದೇ ಚತುಷ್ಟದೇ*//
ಆಹಾರದ ಒಡೆಯನಾದ ಪರಮಾತ್ಮನೇ, ನಮಗೆಲ್ಲರಿಗೂ ರೋಗರುಜಿನಗಳನ್ನು ತಾರದ, ಫಲಪ್ರದವಾದ, ಆಹಾರದ ಅಂಶವನ್ನು ದಯಪಾಲಿಸು. ಉತ್ತಮ ರೀತಿಯಲ್ಲಿ ಅನ್ನದಾನ ಮಾಡುವನನ್ನು, ಉನ್ನತ ಮಟ್ಟಕ್ಕೇರಿಸು ಸ್ವಾಮಿ. ದ್ವಿಪಾದ, ಚತುಷ್ಪಾದ ಸೇರಿದಂತೆ ಸಕಲ ಜೀವರಿಗೆ ಶಕ್ತಿಯನ್ನು ನೀಡಿ ಕಾಪಾಡು.
ತನ್ನ ದೇಹದ ಪ್ರಕೃತಿಗನುಸಾರವಾದ ಒಳ್ಳೆಯ ಗುಣಮಟ್ಟದ ಆಹಾರವನ್ನು ಸೇವಿಸಬೇಕು. ತಿನ್ನುವ ಆಹಾರದಲ್ಲಿ ಸಕಲ ಪೋಷಕಾಂಶಗಳಿರಲಿ. ಅವರವರವರಿಗೆ ಬೇಕಾದ ಆಹಾರ ಸೇವಿಸಲಿ. ನಾರು ಪದಾರ್ಥಗಳು, ನೀರಿನಂಶದ ತರಕಾರಿಗಳು, ಹಸಿರು ಸೊಪ್ಪು ಇರಲಿ. ಕೆಲವನ್ನು ಹಸಿಯಾಗಿಯೇ ತಿನ್ನುವುದು ಆರೋಗ್ಯ. ತರಕಾರಿ ಸಿಪ್ಪೆ ತಿಪ್ಪೆಗೆಸೆಯುವವರೇ ಹೆಚ್ಚು. ಅದರಿಂದ ಪಲ್ಯ, ಚಟ್ನಿ ತಯಾರಿಸಬಹುದು. ಪಚನಕ್ಕೆ ಸಹಕಾರಿಯಾದ ತರಕಾರಿ ಹೆಚ್ಚು ಆಹಾರ ವಸ್ತುಗಳಿರಲಿ. ಬಾಯಾರಿಕೆ ಆದಾಗ ಮಾತ್ರ ನೀರು ಕುಡಿಯುವುದಲ್ಲ. ‘ಉತ್ತಮ ಆರೋಗ್ಯ ಭಾಗ್ಯಕ್ಕೆ’ ಉತ್ತಮ ಆಹಾರವಿರಲಿ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ