ಬಾಳಿಗೊಂದು ಚಿಂತನೆ - 174
‘ಸಾಹಿತ್ಯ’ ಎಂದರೆ ‘ಸಹಿತ’ ಎಂಬುದರ ಭಾವನಾಮ ಅಥವಾ ಆಗಿರುವಿಕೆ ಎಂಬ ರೂಪಾಂತರವೇ ಆಗಿದೆ. ಒಂದಕ್ಕೊಂದು ಸೇರಿ ಅಥವಾ ಒಳಗೊಂಡಿರುವುದು. ಬರೆದ ಕಥೆಯೋ, ಕವನವೋ ಅದರಲ್ಲಿ ತಿರುಳು, ನಿರೂಪಣ ಪ್ರಕಾರ ಮತ್ತು ಆಶಯವಿರಬೇಕು. ಸೊಗಸಾದ ಪದಪುಂಜಗಳು, ತಪ್ಪಿಲ್ಲದ ಅಕ್ಷರಗಳು, ಶಬ್ದ, ಅರ್ಥಗಳು, ಸಂಘಟಿತ ವಾಕ್ಯಗಳು ಎಲ್ಲವೂ ಸ್ಪಷ್ಟವಾಗಿರಬೇಕು. ಸಂವಹನಕ್ಕೆ ಸುಲಭವಾಗಿರಬೇಕು. ಓರ್ವನ ಸುಖ -ದು:ಖಗಳ ಬಗ್ಗೆ ಹೇಳುವುದಾದರೆ ಆಳ-ಅಗಲ ತಿಳಿದಿರಬೇಕು. ಸಾಹಿತಿ ಎನಿಸಿದವ ಕಾಗುಣಿತವನ್ನು ಅರೆದು ಕುಡಿದವನಾಗಿರಬೇಕು.
*ನ ತ ಚ್ಛಿಲ್ಪಂ ನ ತ ಚ್ಛಾಸ್ತ್ರಂ ನ* *ಸಾ ವಿದ್ಯಾ ನ ಸಾ ಕಲಾ*/
*ದೃಶ್ಯತೇಮುನ್ನ ಕಾವ್ಯಾರಾಗಂ ಅಹೋ ಭ್ರಾರೋ ಮಹಾನ್ ಕಲೇ:/*
ಶಿಲ್ಪದಂತಹ ರಚನಾ ವಿಧಾನಗಳು, ಕಲೆಗಳು, ತಂತ್ರಗಾರಿಕೆಗಳು, ಗ್ರಂಥರೂಪದ ವಿದ್ಯೆಗಳು, ಸಂಗೀತಾದಿ ಕಲೆಗಳು ಇವೆಲ್ಲವೂ ಸಾಹಿತ್ಯದ ಮಜಲುಗಳಾಗಿವೆ. ಸಾಹಿತಿಯ ಕಾರ್ಯವ್ಯಾಪ್ತಿ ಬಹುದೊಡ್ಡದು.
ಓರ್ವ ಸಾಹಿತಿಯಾಗಬೇಕಾದರೆ ಮುಖ್ಯ ಓದುವ ಹವ್ಯಾಸವಿರಬೇಕು. ‘ಬೇರೆ ಯಾರದೋ ನಾಲ್ಕು ಪದಗಳನ್ನೋ, ಸಾಲುಗಳನ್ನೋ ಎಗರಿಸಿ ಬರೆದವ’ ಸಾಹಿತಿ ಎನಿಸಲಾರ. ತಪ್ಪುಗಳನ್ನು ಹೇಳಿದಾಗ ತಿದ್ದಿ ಮುನ್ನಡೆವ ಮನೋಭಾವವಿರಬೇಕು ಆತನ ಬಳಿ. ‘ಆನೆ ನಡೆದದ್ದೇ ದಾರಿ’ ಅವನ ಮನಸ್ಸಾಗಿರಬಾರದು. ತನ್ನ ಆತ್ಮತೃಪ್ತಿ ಬರವಣಿಗೆಯಲ್ಲಿ ಮೊದಲಿರಬೇಕು.
ಸೃಜನಶೀಲತೆಗೆ ಒತ್ತು ಕೊಡುವ ಗುಣ ಸಾಹಿತಿಯಲ್ಲಿರಬೇಕು. ‘ಹಳೆ ಸೀಸೆಯಲ್ಲಿ ಹೊಸ ಮದ್ಯ’ ಹಾಕಿದರೆ ಹೇಗೆ? ಸರಿಯಾಗಿ ಅರಿತು ತಿಳಿದು ಬರೆಯುವ ಗುಣವಿರಲಿ. ರಸಾನುಭವ, ವಾಸ್ತವ ಸಾಹಿತ್ಯದ ತಿರುಳು. ಶಿಸ್ತು ಖಂಡಿತಾ ಬೇಕು. ಅನುಕರಣೆ ಇರಲಿ, ಮಿತಿ ಮೀರಬಾರದು. ಉತ್ತಮ ಸಾಹಿತ್ಯ ಕೃಷಿ ನಡೆಯಲಿ ಎಂಬ ಆಶಯ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ