ಬಾಳಿಗೊಂದು ಚಿಂತನೆ - 175

ಬಾಳಿಗೊಂದು ಚಿಂತನೆ - 175

ದೇವರನ್ನೇ ನಂಬಿ ಕುಳಿತರೆ, ದೈವ ದೇವರುಗಳು ಕೊಡುತ್ತಾರೆ, ಅವರೇ ನೋಡಿಕೊಳ್ಳಲಿ ಎಂದು ಕುಳಿತರೆ ಹೇಗೆ? ದೇವರು ಕೊಡುವುದು ಯಾವಾಗ? ‘ನಮ್ಮಪ್ರಯತ್ನ ಇದ್ದಾಗ ಮಾತ್ರ’. ಸುಮ್ಮನೆ ಯಾವುದು, ಯಾರೂ, ಏನನ್ನೂ ಕೊಡಲಾರರು. ‘ಪುರುಷ ಪ್ರಯತ್ನ’ ಎಂಬುದು ಅತಿ ಅಗತ್ಯ. ಬಾಯಿ ಮಾತಿಗೆ ಹೇಳುವುದಿದೆ ಅವನ ಅದೃಷ್ಟ ಎಂದು. ಅದೃಷ್ಟದ ಮೊದಲು ಪ್ರಯತ್ನ ಬೇಡವೇ? ಅದೃಷ್ಟವಿದೆ ಎಂದು ಕುಳಿತರೆ ಆಯುಷ್ಯ ಕಡಿಮೆಯಾಗಬಹುದು ಹೊರತು ಏನೂ ಪ್ರಯೋಜನವಾಗದು. ಅಧಿಕಾರಿ ವರ್ಗದಲ್ಲಿ ಕಾಲಕಾಲಕ್ಕೆ ಇಲಾಖೆಯ ಪರೀಕ್ಷೆಗಳಿಗೆ ಕುಳಿತು ಪಾಸಾದವರು ಉನ್ನತ ಸ್ಥಾನಕ್ಕೆ ಹೋಗುವರು. ಕೆಲವು ಜನ ಇದ್ದಲ್ಲಿಯೇ ಇದ್ದು, ಅದೃಷ್ಟವಿಲ್ಲವೆನ್ನುವರು, ಪ್ರಯತ್ನವೆಂಬುದು ಅವರ ಹತ್ತಿರ ಇಲ್ಲವೇ ಇಲ್ಲ.

*ಸಾಧಾರಣಂ ದ್ವಯಂ ಹ್ಯೇತದ್ ದೈವಮುತ್ಥಾನಮೇವ ಚ/*

*ಪೌರುಷಂ ಹಿ ಪರಂ ಮನ್ಯೇ ದೈವಂ ನಿಶ್ಚಿತಮುಚ್ಯತೇ*//

ಯಾವುದೇ ಕಾರ್ಯಕೈಗೂಡಲು ಅದೃಷ್ಟ ಮತ್ತು ಪುರುಷ ಪ್ರಯತ್ನ ಎರಡೂ ಸಾಧಾರಣ ಕಾರಣಗಳಾದರೂ ಪುರುಷ ಪ್ರಯತ್ನವೇ ಮುಖ್ಯ. ಪ್ರಯತ್ನಕ್ಕೆ ಅದೃಷ್ಟ ನಂತರ ಬರಬಹುದು. ದೈವಬಲ ಮತ್ತು ಅದೃಷ್ಟ ಮೊದಲೇ ನಿಶ್ಚಯವಾಗಿರುತ್ತದೆ. ಓರ್ವ ದಕ್ಷ ಪ್ರಾಮಾಣಿಕ ಅಧಿಕಾರಿ ಜನಮಾನಸದಲ್ಲಿ ಉಳಿಯಬೇಕಾದರೆ, ಅಧಿಕಾರದ ಜೊತೆ ಆಡಳಿತ ಸುಸೂತ್ರವಾಗಿ ನಡೆಸಬೇಕು. ಸಮಯ ಸಂದರ್ಭ ನೋಡಿಕೊಂಡು ಅತ್ಯಂತ ಮೃದುತ್ವ, ಕಾಠಿಣ್ಯ ಧೋರಣೆಗಳು ಅವನಲ್ಲಿರಬೇಕು. ಹಾಗೆಂದು ಯಾರನ್ನೂ ತನ್ನ ತಲೆ ಮೇಲೆ ಹತ್ತಿ ಕೂರಲು ಬಿಡಬಾರದು, ಸಲಿಗೆಯೂ ಕೊಡಬಾರದು. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಉತ್ತಮ ರೀತಿಯಲ್ಲಿ ವ್ಯವಹರಿಸುವುದು ಅಧಿಕಾರ ಮತ್ತು ಅಧಿಕಾರಿಯ ಗುಟ್ಟು.’ಸತ್ಯಮೇವ ಜಯತೇ’ ಈ ಧ್ಯೇಯವಾಕ್ಯ ವೇದೋಪನಿಷತ್ತು ಕಾಲದಿಂದಲೂ ಇದೆ. ಇದರ ಅರ್ಥವನ್ನು ಅರ್ಥೈಸಿಕೊಂಡರೆ ಅವಗುಣ ಹತ್ತಿರ ಸಹ ಬಾರದು. ಕೃಷಿಕ, ರೈತ ಕಾಲಕಾಲಕ್ಕೆ ದುಡಿದರೆ ಮಾತ್ರವಲ್ಲವೇ ಊಟ ಮಾಡಬಹುದು. ಅದೃಷ್ಟ ಕೊಡಲೆಂದು ಕೈಕಟ್ಟಿ ಕುಳಿತರೆ ಏನೂ ಸಿಗದು. ಅವರವರ ವೃತ್ತಿ ಮಾಡಲೇಬೇಕು. ಅಕ್ಕಿಯನ್ನು ನೀರು ಹಾಕಿ ಬೇಯಿಸಿ ಗಂಜಿ ಮಾಡಬೇಕು.ಹಾಗೆ ಇಟ್ಟರೆ ಅನ್ನ ಆಗುವುದೇ?

‘ಸುಮುಖ ಸ್ಯಾತ್ ಸ್ಮಿತಪೂರ್ವಭಾಷಿತಾ’ ಎಂಬಂತೆ ಪ್ರಸನ್ನ ಮುಖವೆಂಬುದು ಮಾತುಕತೆ ವ್ಯವಹಾರಗಳಲ್ಲಿ ಓರ್ವನ ಆಭರಣ, ಉತ್ತಮ ಲಕ್ಷಣ. ಕೆಲಸಕಾರ್ಯಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಬೆವರಿಳಿಸಿ ದುಡಿಮೆ ಮಾಡಿದವರಿಗೆಂದೂ ಸೋಲಿಲ್ಲ. ಚಿಂತಿಸುವುದನ್ನು ಬಿಟ್ಟು ಸತ್ಕಾರ್ಯಗಳನ್ನು ಮಾಡುತ್ತಾ ಅದೃಷ್ಟ ಪರೀಕ್ಷೆ ಮಾಡೋಣ.

-ರತ್ನಾ ಕೆ.ಭಟ್ ತಲಂಜೇರಿ

 (ಶ್ಲೋಕ: ಮಹಾಭಾರತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ