ಬಾಳಿಗೊಂದು ಚಿಂತನೆ - 176

ಬಾಳಿಗೊಂದು ಚಿಂತನೆ - 176

ನಾವೆಲ್ಲರೊಂದೇ ಒಪ್ಪಿಕೊಳ್ಳೋಣ. ಆದರೆ ಗುಣ ಸ್ವಭಾವ ಭಿನ್ನ. ಐದು ಬೆರಳುಗಳು ಒಂದೇ ಹಾಗಿಲ್ಲ. ದೇಹ, ಅಂಗಗಳು ಒಂದೇ ಆದರೂ, ಗಾತ್ರ, ಆಕಾರ, ಬಣ್ಣ ಎಲ್ಲ ಬೇರೆ ಬೇರೆ. ಯೋಚನೆಗಳಲ್ಲಿ ವೈವಿಧ್ಯತೆ. ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಒಬ್ಬರಿಗೆ ಪಥ್ಯವಾದ್ದು ಮತ್ತೊಬ್ಬರಿಗೆ ಅಪಥ್ಯ. ಹುಳಿ, ಒಗರು, ಸಿಹಿ, ಖಾರ, ಉಪ್ಪು ಎಲ್ಲದರಲ್ಲೂ ವ್ಯತ್ಯಾಸ. ರಾಗ, ದ್ವೇಷ, ಕೋಪ, ಸಿಟ್ಟು, ಸೆಡವು, ವಯ್ಯಾರ, ನಗು, ಅಳು, ಮತ್ಸರ, ಮಮಕಾರದಲ್ಲೂ ಭಿನ್ನತೆ. ಕಲಿಕೆಯಲ್ಲಿ ಕೆಲವು ಮಂದಿ ಮುಂದೆ. ಕೆಲವರಿಗೆ ಎಷ್ಟು ಹೇಳಿದರೂ ತಲೆಗೆ ಹತ್ತದು. ಸೋಮಾರಿಗಳು, ಜಾಣರು ಹೀಗೆ ಹತ್ತು ಹಲವು ಭಿನ್ನತೆಗಳನ್ನು ಮನುಷ್ಯ ಹೇಳುವ ಒಂದು ಜಾತಿಯಲ್ಲಿ ನೋಡ್ತಾ ಇದ್ದೇವೆ. ಮನಸ್ಸಿನ ಆಲೋಚನೆಗಳಲ್ಲಿ ಒಟ್ಟಾಗಲು ಬಹಳ ಪ್ರಯಾಸವಿದೆ.

*ಮನುಜ ಕುಲವೊಂದೊಬ್ಬನಿನ್ನೊಬ್ಬನಂತಿಲ್ಲ*/

*ತನುವಂಗಗಳೊಂದು,ರೂಪ ಗುಣ ಬೇರೆ//*

*ನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ/*

*ತನುವೇಕದೊಳ್ ಬಹುಳ-ಮಂಕುತಿಮ್ಮ//*

ಮಾನ್ಯ ಡಿ.ವಿ.ಜಿಯವರು ಎಷ್ಟು ಸತ್ಯವಾಗಿ ತಮ್ಮ ಕಗ್ಗದ ಮೂಲಕ ಹೇಳಿದ್ದಾರಲ್ಲವೇ? ಈ ಪ್ರಪಂಚವೇ ಹಾಗೆ ಏಕತೆಯಲ್ಲಿ ಅನೇಕವನ್ನು ಬಿಂಬಿಸುತ್ತಾ ಹೊಂದಾಣಿಕೆಯಿಂದ ಹೋಗುತ್ತಿದೆ. ಮನದ ಕ್ಲೇಶಗಳ ದೂರ ತಳ್ಳಿ ನೆಮ್ಮದಿಯ ಬದುಕಿಗಾಗಿ ಶ್ರಮವಹಿಸೋಣ. ಎಲ್ಲಿ ಹೊಂದಾಣಿಕೆ ಇರುವುದೋ ಅಲ್ಲಿ ಬಾಳು ಸುಗಂಧಮಯ.

-ರತ್ನಾ ಕೆ.ಭಟ್ ತಲಂಜೇರಿ

 (ಆಕರ: ಕಗ್ಗದ ಮುಕ್ತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ