ಬಾಳಿಗೊಂದು ಚಿಂತನೆ - 177
ಯಾವಾತ ಮದಮತ್ಸರಗಳನ್ನು ಗೆದ್ದು ಜೀವನದಲ್ಲಿ ಯಶಸ್ಸನ್ನು ಸಾಧಿಸುವನೋ ಅವನು ಮರ್ಯಾದೆಯಲ್ಲಿ ಬದುಕಿಯಾನು. ಮದವೇ ಮುಖ್ಯ ಎನ್ನುವವ ಒಮ್ಮೆ ಜಯಿಸಿದರೂ ಹೊಂಡಕ್ಕೆ ಬಿದ್ದರೆ ಮತ್ತೆ ಏಳಲಾಗದು. ನಯ-ವಿನಯ ಮನುಜನ ಕಣ್ಣುಗಳಿದ್ದಂತೆ. ಎಲ್ಲಿ ಹೋದರೂ ಜಯಿಸಬಹುದು.
*ನಯಸ್ಯ ವಿನಯೋ ಮೂಲಂ ವಿನಯ: ಶಾಸ್ತ್ರನಿಶ್ಚಯ:/*
*ವಿನಯೋ ಹೀಂದ್ರಿಯಜಯ: ತದ್ಯುಕ್ತ: ಶಾಸ್ತ್ರಮೃಚ್ಛತಿ//*
ನೈತಿಕತೆಯಲ್ಲಿ ಮೊದಲ ಸ್ಥಾನ ‘ವಿನಯ’ ಎಂಬ ಆಭರಣಕ್ಕೆ. ವಿನಯ ಎನ್ನುವುದು ಎಲ್ಲವನ್ನೂ ಜಯಿಸಲು ಪ್ರಬಲ ಅಸ್ತ್ರ. ಎಷ್ಟೇ ಇದ್ದರೂ ವಿನಯ, ವಿನೀತ ಭಾವ ಇಲ್ಲದೊಡೆ ಯಾರೂ ಮೆಚ್ಚಲಾರರು, ಒಪ್ಪಲಾರರು. ಶಾಲೆಯಲ್ಲಿ ವಿದ್ಯಾರ್ಥಿಗಳ ವಿನಯ ಅವರಿಗೆ ರಕ್ಷಣಾಗೋಡೆಗಳು. ಆದರೆ ಅರ್ಥ ಮಾಡಿಕೊಳ್ಳುವವರು ಕಡಿಮೆ. ಯಾರು ಮದವ ಬಿಟ್ಟು ವಿನೀತನಾಗುವನೋ, ಆತ ಇಂದ್ರಿಯಗಳ ಜಯಿಸಿದಂತೇಯೇ ಸರಿ.
ಒಮ್ಮೆ ಹೀಗೆ ದಾರಿಯಲ್ಲಿ ಕಾಣ ಸಿಕ್ಕಿ ಹೇಳಿದ ಮಾತು "ಅವರ ಮಗನಿಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಮೂರು ದಿನ ಹೋಗಿ ಮಾತುಕತೆ ಮಾಡಿದರೂ ಸೀಟು ಇಲ್ಲ ಎಂದರಂತೆ. ಏನೇ ಆಗಲಿ ಬಿಡಲಾರೆ ಎಂದು ನಾಲ್ಕನೆಯ ದಿನ ಮಗನನ್ನು ಕರೆದುಕೊಂಡು ಹೋಗಿ ಮಾತನಾಡಿದರಂತೆ. ಕಾಲೇಜಿನ ಆಯ್ಕೆ ಸಮಿತಿಯವರು, (ಓರ್ವರು ಈ ಮಹನೀಯರ ಆಪ್ತರು) ಮಗನನ್ನು ನೋಡಿ ಮಾತನಾಡಿಸಿ 'ಅಂಕಗಳು ಸ್ವಲ್ಪ ಕಡಿಮೆ ಇದೆ, ಆದರೆ ನೀನು ಚೆನ್ನಾಗಿ ಓದಿ ನಿನಗೂ, ಹೆತ್ತವರಿಗೂ, ಕಾಲೇಜಿಗೂ ಹೆಸರು ತರಬೇಕೆಂದು ಹೇಳಿ ಒಂದು ಅವಕಾಶ ಕೊಟ್ಟು ನೋಡ್ತೇವೆ' ಎಂದರಂತೆ. ಆ ಹುಡುಗ ಕಾಲೇಜಿಗೆ ಎರಡನೇ ಸ್ಥಾನ ಬಂದ. ಅಲ್ಲದೆ ಈಗ ವೈದ್ಯನಾಗಿ ಅಪಾರ ಜನಮನ್ನಣೆ ಗಳಿಸಿದ್ದಾನೆ. ಬಹಳ ವಿನಯವಂತ ಹುಡುಗ. ಹಾಗಾಗಿ ವಿನಯವಂತರು ಎಲ್ಲಿ ಹೋದರೂ ಮಾನ್ಯರು. ಮದವನ್ನು ಗೆಲ್ಲುವುದೇ ದೊಡ್ಡ ಸಂಪತ್ತು. ಆಸೆಯನ್ನು ತ್ಯಜಿಸೋಣ. ಸ್ನೇಹ, ವಿಶ್ವಾಸ, ಆತ್ಮ ಸಂಯಮ ಬದುಕಿನಲಿರಲಿ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ನೀತಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ