ಬಾಳಿಗೊಂದು ಚಿಂತನೆ - 178
‘ಅರ್ಥ’ ಎಂದರೆ ಐಶ್ವರ್ಯ, ಧನ, ಸಂಪತ್ತು. ಎಲ್ಲಿ ಅರ್ಥ ಮುಂದೆಯೋ ಅಲ್ಲಿ ‘ಅನರ್ಥ’ ತಲೆ ಹಾಕುವುದು ಸತ್ಯ ವಿಚಾರ. ನೈಜವಾಗಿ ಕಷ್ಟಪಟ್ಟು, ಬೆವರಿಳಿಸಿ, ದೇಹದಂಡಿಸಿ ಸಂಪಾದಿಸಿದ ಅರ್ಥಕ್ಕೆ ಮಾನ್ಯತೆ ಇದೆ. ಹಿರಿಯರು ಮಾಡಿಟ್ಟ ಆಸ್ತಿಯಾದರೂ ಇರಬೇಕು. ಎರಡೂ ಇಲ್ಲದವರು ವಾಮಮಾರ್ಗ ಹಿಡಿದರೆ ಸ್ವಲ್ಪ ದಿನಗಳುರುಳಿದಂತೆ ಅಕ್ಕಪಕ್ಕದವರಿಗೆ ಅನುಮಾನ ಬರುವುದು ಸಹಜ. ಗುಸುಗುಸು ಬಾಯಿಂದ ಬಾಯಿಗೆ ಹಬ್ಬುತ್ತದೆ. ಒಂದು ದಿನ ಆತ ನೆಲಕಚ್ಚಿದಾಗ ಎಲ್ಲರ ಬಾಯಿಗೆ ಆಹಾರ ಆಗುವನು. ಇಂತಹ ಐಸಿರಿ ನಮಗೆ ಬೇಕೇ? ಶಾಶ್ವತ ಸುಖ ಇದೆಯೇ? ನಿದ್ದೆಯಿಲ್ಲದ ರಾತ್ರಿಗಳು, ಕಳ್ಳಕಾಕರ ಭಯ, ಎಲ್ಲಿ ಇತರರಿಗೆ ತಿಳಿಯುತ್ತದೋ ಚಿಂತೆ, ಅವನ ಪೂರ್ತಿ ಆಯುಷ್ಯ ಕಳೆದೇ ಹೋಗುವುದು.
*ಅರ್ಥಮನರ್ಥಂ ಭಾವಯ ನಿತ್ಯಂ*
*ನಾಸ್ತಿತತ: ಸುಖಲೇಶ: ಸತ್ಯಮ್*/
*ಪುತ್ರಾದಪಿ ಧನಭಾಜಾಂ ಭೀತಿ:*
*ಸರ್ವತ್ರ್ಯೆಷಾ ವಿಹಿತಾ ರೀತಿ:*//
ಹಣ ಕೂಡಿಟ್ಟವಗೆ ತನ್ನವರಿಂದಲೇ, ತನ್ನ ಮಕ್ಕಳಿಂದಲೇ ಚಿಂತೆ ಆರಂಭವಾಗುತ್ತದೆ. ಯಾರು ಪರಸ್ತ್ರೀಯರ ಮೊಗದಲ್ಲಿ ತನ್ನ ಹೆತ್ತಮ್ಮನನ್ನು, ಪರಗಂಟನ್ನು ಕೊಚ್ಚೆಯ ಹೊಲಸಿನಂತೆಯೇ ಮತ್ತು ತನ್ನನ್ನು ತಾನು ಹೊಗಳದವನು, ಎಲ್ಲರೂ ತನ್ನಂತೆ ಹೇಳುವವನೇ ಮಾನವ ಅನಿಸುವನು. ಅರ್ಥಶೌಚ ಶ್ರೇಷ್ಠ. ನೀತಿವಂತನಾಗಿ ವ್ಯವಹರಿಸುವವನೇ ಶುಚಿವಂತ. ಮಾಡುವ ಕೆಲಸದಲ್ಲಿ ಶುಚಿವಂತನಾಗಿರಬೇಕು. ಹಣವಂತನಿಗೆ ನೆಮ್ಮದಿ ಕನಸಿನ ಮಾತು. ಒಂದು ಮಾತಿದೆ ‘ಕಾಡಸೊಪ್ಪು ತೋಡ ನೀರು ಕುಡಿದರೂ ಬಡವ ನೆಮ್ಮದಿಯಿಂದ ನಿದ್ದೆ ಮಾಡುವನಂತೆ’. ಮೂಢರಂತೆ ಹಣದ ದಾಹವೇ ಹಿರಿದು ಎನ್ನುವವರಿಗೆ ಬದುಕಿಡೀ ಅದೇ ಆಯಿತು. ಹೇಗೆ ಗಳಿಸುವುದೆಂಬ ಚಿಂತೆಯಲ್ಲಿ ಯೋಚನೆ ಮಾಡಿ ಮಾಡಿ ಒಂದು ದಿನ ಚಿತೆಯನ್ನೇರಿಯಾನು. ನಮ್ಮ ಯೋಗ್ಯತೆ, ಭಾಗ್ಯವಿದ್ದಷ್ಟೇ ದೊರಕುವುದು. ಮನಸ್ಸು ಮುಖ್ಯ. ಶ್ರದ್ಧೆ ಇಲ್ಲದೆ ಇದ್ದವನಿಗೆ ಏನೂ ಸಿಗದು. ‘ಕಾಯಕನಿಷ್ಠೆ, ಭಗವಂತನಲ್ಲಿ ಪ್ರೀತಿ, ಪ್ರಾಮಾಣಿಕ ಪ್ರಯತ್ನ, ಆತ್ಮತೃಪ್ತಿ ಇದ್ದವನಿಗೆ ಜೀವನದ ಹಾದಿ ಸುಗಮ ಸಾರ್ಥಕ.
ಮೂರು ದಳವುಳ್ಳ, ಮೂರುಗುಣಗಳ ಆಕಾರ ಹೊಂದಿರುವ, ಮೂರು ಕಣ್ಣುಳ್ಳ, ಮೂರು ಆಯುಧವುಳ್ಳ ಲಯಾಧಿಕಾರಿ ಪರಶಿವನಿಗೆ ಒಂದೇ ಒಂದು ಬಿಲ್ವಪತ್ರೆ ಏಕಾಗ್ರತೆ, ಶುದ್ಧಮನಸ್ಸಿನಿಂದ ಅರ್ಪಿಸಿದರೆ ಅದರಲ್ಲೇ ತೃಪ್ತಿಯಂತೆ. ನಾವು ಸಹ ಇರುವುದರಲ್ಲಿಯೇ ಸಮಾಧಾನ, ತೃಪ್ತಿ ಯಾಕೆ ಹೊಂದಬಾರದು? ‘ಇರುವುದೆಲ್ಲವ ಬಿಟ್ಟು ಇಲ್ಲದ್ದಕ್ಕೆ ಇಲ್ಲದ್ದಕ್ಕೆ ಆಸೆ ಯಾಕೆ?’ ಕಣ್ಣಿಗೆ ಕಾಣಿಸದ ಎಲ್ಲಿಯೋ ಇದ್ದು ನಿರಾಕಾರ ಸ್ವರೂಪದಿ ನಮ್ಮನ್ನು ನಿಯಂತ್ರಿಸುವ, ವೀಕ್ಷಿಸುವ ಆ ದೇವನಿಗಿಂತ ನಾವು ದೊಡ್ಡವರಲ್ಲ. ಕೈಗೊಳ್ಳುವ ಪ್ರತಿ ಕೆಲಸಕಾರ್ಯಗಳಲ್ಲಿ, ಊರುವ ಹೆಜ್ಜೆಯಲ್ಲಿ ದೇವನನ್ನು ಕಾಣಬೇಕು, ಅದೇ ಆತನಿಗೆ ಗೈಯುವ ಪೂಜೆ. ಲೋಕಾರೂಢಿಗೆ, ಲೋಕನೀತಿಗೆ ಸರಿಯಾಗಿ ನಮ್ಮ ನಡೆನುಡಿಗಳಿರಲಿ. ಸರಿಯಾದ ದಾರಿಯಲ್ಲಿ ಗಳಿಸೋಣ, ಜೀವಿಸೋಣ, ನೆಮ್ಮದಿಯ ಆಹ್ವಾನಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ನಿತ್ಯಪ್ರಾರ್ಥನಾ ಸಂಗ್ರಹ)
ಚಿತ್ರ ಕೃಪೆ : ಇಂಟರ್ನೆಟ್ ತಾಣ