ಬಾಳಿಗೊಂದು ಚಿಂತನೆ - 179

ಬಾಳಿಗೊಂದು ಚಿಂತನೆ - 179

ಒಮ್ಮೊಮ್ಮೆ ಸಣ್ಣ ಮಕ್ಕಳ ಮಾತಿನಲ್ಲೂ ಸತ್ಯಾಂಶವಿರುತ್ತದೆ. ನಾವು ಮಕ್ಕಳ ಮಾತನ್ನು ಅಲ್ಲಗಳೆಯುವುದು ಹೆಚ್ಚು. ಪುಟ್ಟ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಷ್ಟು ವ್ಯವಧಾನ ನಮ್ಮಲ್ಲಿಲ್ಲ. 'ಚಿಕ್ಕವರು ಎಷ್ಟೊಂದು ಕೇಳ್ತೀರಿ ಹೇಳುತ್ತೇವೆ. ಅವರ ಕುತೂಹಲ ಸಾಗರದಷ್ಟು ಆಳ-ಅಗಲ. ಅದನ್ನು ಅರ್ಥಮಾಡಿಕೊಂಡರೆ, ಆ ಪ್ರಶ್ನೆಗಳ ಬೆನ್ನು ಹತ್ತಿದರೆ ಮಾತ್ರ ತಿಳಿಯಬಹುದಷ್ಟೆ.

*ಯುಕ್ತಿಯುಕ್ತಂ ಪ್ರಗೃಹ್ಣೀಯಾದ್ಬಾಲಾದಪಿ ವಿಚಕ್ಷಣ:/*

*ರವೇರವಿಷಯಂ ವಸ್ತು ಕಿನ್ನ ದೀಪ: ಪ್ರಕಾಶಯೇತ್//*

ಜ್ಞಾನಿಗಳು, ತಿಳಿದವರು ಎಲ್ಲರಿಂದಲೂ ಇನ್ನೂ ಹೆಚ್ಚಿನ ಜ್ಞಾನವನ್ನು ಸ್ವೀಕರಿಸಲು ಕಲಿಯಬೇಕು. ಅವರು ಹೇಳುವುದರಲ್ಲಿ ಏನಾದರು ಸಿಗಲೂ ಬಹುದು. ತಿರಸ್ಕಾರ ಮಾಡಬಾರದು. ದಿನಕರನ ಬೆಳಕು ಬೀಳದ ಸ್ಥಳದಲ್ಲಿ ಅಥವಾ ಕತ್ತಲೆಯಿರುವಲ್ಲಿ ಪುಟ್ಟದಾದ ಹಣತೆಯು ಬೆಳಕನ್ನು ನೀಡಬಲ್ಲುದಲ್ಲವೇ? ಸಣ್ಣ ದೀಪದ ಬೆಳಕು ಎಂದು ಸಸಾರ ಮಾಡುವುದು ತರವಲ್ಲ.

ಸಮಾಧಾನದಿಂದ ಚಿಣ್ಣರ ಮಾತುಗಳನ್ನು ಆಲಿಸಿ ಉತ್ತರಿಸಬೇಕು. ಅವರ ಮಿದುಳಿಗೆ ಮೇವನ್ನು ಕೊಡುವುದು ದೊಡ್ಡವರ ಕರ್ತವ್ಯ ಸಹ. ಅವರ ಪುಟ್ಟ ಹೃದಯವ ನೋಯಿಸುವುದು ತರವಲ್ಲ. ಮಕ್ಕಳ ಮನಸ್ಸು ಮಲ್ಲಿಗೆಯ ಎಸಳಿನಷ್ಟು ಮೃದು. ಅವರ ಪ್ರತಿ ಹೆಜ್ಜೆಯಲ್ಲಿ ದೊಡ್ಡವರ ಧ್ವನಿ ಸೇರಿದರೆ ಮಾತ್ರ ಮುಂದೆ ಅವರು ಉತ್ತಮ ಗುಣವಂತರಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಒಳ್ಳೆಯ-ಕೆಟ್ಟ ಪರಿಚಯಿಸುವುದು ನಮ್ಮ ಕೈಯಲ್ಲಿದೆ. ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿ ಒಂದೆಡೆ ‘ಕೋನಾಮ ಉಷ್ಣೋದಕೇನ ನವಮಾಲಿಕಾಂ ಸಿಂಚತಿ’/

ಮೃದುವಾದ ಮಲ್ಲಿಗೆಯ ಹೂವುಗಳನ್ನು ನೀಡುವ, ಬಳ್ಳಿಯ ಮೇಲೆ ಬಿಸಿನೀರನ್ನು ಯಾರು ಸಿಂಪಡಿಸುತ್ತಾರೆ? ಹಾಗೆಯೇ ಪುಟ್ಟ ಮಕ್ಕಳ ಮಾತುಗಳಿಗೆ ಬಾಯಿ ಮುಚ್ಚಿ ಎನ್ನದೆ ಉತ್ತರಿಸಲು ಪುರುಸೊತ್ತಿಲ್ಲದ ಕಾಲದಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ಉತ್ತರಿಸೋಣ. ನಮ್ಮ ಮುಂದಿನ ಪೀಳಿಗೆಯ ಆಧಾರಸ್ತಂಭಗಳು ನಮ್ಮ ಮಕ್ಕಳೆಂಬ ಅರಿವಿರಲಿ. ಯಾವತ್ತೂ ಅವರೊಂದಿಗೆ ಅವರ ಕಾಲ ಮೇಲೆ ನಿಲ್ಲುವಲ್ಲಿವರೆಗೆ ನಾವು ನಿಲ್ಲೋಣ. ಪ್ರೀತಿ, ವಿಶ್ವಾಸ, ಮಮಕಾರ ದೇಶಾಭಿಮಾನ, ರಾಷ್ಟ್ರಭಕ್ತಿ ನೈತಿಕ ಮೌಲ್ಯಗಳ ತುಂಬಿ ಬೆಳೆಸೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸಂಸ್ಕೃತಿ ಸಂಚಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ