ಬಾಳಿಗೊಂದು ಚಿಂತನೆ - 180

ಬಾಳಿಗೊಂದು ಚಿಂತನೆ - 180

‘ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?’ ವಚನ ಸಾಹಿತ್ಯದಲ್ಲಿ ಓದಿದ್ದೇವೆ. 

‘ಮೃದುವಚನವೇ ಸಕಲ ಜಪಂಗಳಯ್ಯಾ’

‘ನುಡಿದರೆ ಮುತ್ತಿನ ಹಾರದಂತಿರಬೇಕು’

‘ಕಾಗೆ ಒಂದಗುಳ ಕಂಡೊಡೆ, ಕರೆಯದೆ ತನ್ನ ಬಳಗವನು?’

‘ದಯೆಯಿಲ್ಲದ ಧರ್ಮವದಾವುದಯ್ಯಾ?’

ಹೀಗೆ ಸಮಾಜದ ಓರೆಕೋರೆಗಳನ್ನು ತಿದ್ದುವ, ಕಣ್ಣಿಗೆ, ಮನಸ್ಸಿಗೆ ಕಂಡ, ಕೇಳಿದ ವಕ್ರತೆಗಳನ್ನು ವಚನವನ್ನಾಗಿಸಿದರು ಶಿವಶರಣರು. ಭಾರತೀಯ ಸಾಹಿತ್ಯಕ್ಕೆ ವಚನದ ಕೊಡುಗೆ ಅಪಾರ. ಅತ್ಯಂತ ಕಡಿಮೆ ಪದಗಳಲ್ಲಿ ಜನರನ್ನು ಹಿಡಿದಿಡುವ, ಅರ್ಥಪೂರ್ಣವಾದ, ವಿಶಾಲವಾದ ಸಾರಬೆರೆತ ನೀತಿಯ ಮಾತ್ರೆಯಿದ್ದಂತೆ ವಚನಾಮೃತಗಳೆಂಬ ಅಮೂಲ್ಯ ಆಭರಣಗಳನ್ನು ಸಮಾಜಕ್ಕೆ ನೀಡಿದರು. ವಚನಗಳ ಚೌಕಟ್ಟೇ ಸೊಗಸು. ಅದರ ಪದಪುಂಜಗಳೇ ಅರ್ಥಗರ್ಭಿತ. ಸಮಾಜದಲ್ಲಿ ಹೇಗೆ ನಾಲ್ಕು ಜನರೊಂದಿಗೆ ಬೆರೆತು ಬದುಕಬೇಕೆಂಬ ಪ್ರಜ್ಞೆಯನ್ನು ವಚನಗಳಲ್ಲಿ ಕಾಣಬಹುದು. ಹಾಗೆಯೇ ತಿವಿತವೂ ಇದೆ. ಮಾರ್ಮಿಕವಾದವುಗಳೂ ಇದೆ. ನಾವು ಓದಿ ಅದರೊಳಗಿನ ಸಾರವನ್ನು ತಿಳಿಯಬೇಕಷ್ಟೆ. ವಚನಗಳಲ್ಲಿ ಶ್ರಮದ ದುಡಿಮೆ, ಸರ್ವ ಸಮಾನತೆ, ಮಾನವೀಯ ಮೌಲ್ಯಗಳ ಸಾರ, ದಾಸೋಹ, ಗುರುಹಿರಿಯರ ಸೇವೆ, ಕಿರಿಯರಿಗೆ ಪ್ರೀತಿ, ಕಾಯಕತತ್ವ, ಜಾತಿಭೇದ ನಿರ್ಮೂಲನೆ, ಆಚಾರ-ವಿಚಾರಗಳ ಬದ್ಧತೆ, ಸಮಾಜ ಸುಧಾರಣೆಯ ಅಂಶಗಳನ್ನು ಎತ್ತಿ ಹಿಡಿದರು, ಸಾರಿದರು. ಪರಿವರ್ತನೆಯ ನಾಂದಿ ಹಾಡಿದರು. ಸಾಧನೆಯ ಹಾದಿಯಲ್ಲಿ ಆಡಂಬರ ಬೇಡ, ಭಕ್ತಿ, ಸರಳತೆಯಿದ್ದರೆ ಸಾಕೆಂದರು.

‘ಉಳ್ಳವರು ಶಿವಾಲಯವ ಮಾಡುವರು’

‘ನಾನೇನು ಮಾಡಲಿ ಬಡವನಯ್ಯ’

ಸಾರಿದವರು ವಿಶ್ವಗುರು ಬಸವಣ್ಣನವರು.

‘ದೇಹವೇ ದೇಗುಲ, ಶಿರವೇ ಹೊನ್ನ ಕಲಶ’ ಎಂಥ ಅದ್ಭುತ ಕಲ್ಪನೆ, ಹೋಲಿಕೆಯಲ್ಲವೇ?

‘ಬೆಟ್ಟದ ಮೇಲೊಂದು ಮನೆಯ ಮಾಡಿ  ಮೃಗಗಳಿಗಂಜಿದೊಡೆಂತಯ್ಯ’ ಶರಣೆ ಅಕ್ಕಮಹಾದೇವಿ ವಚನದ ಅರ್ಥ ಅಮೋಘ. ಕಷ್ಟಕ್ಕೆ ಅಂಜಲೇ ಬಾರದೆಂಬ ತತ್ವ. ಎಲ್ಲವನ್ನು ಎದುರಿಸಬೇಕು ಎಂಬ ಕಿವಿಮಾತು ಕಾಣಬಹುದು. ತಾವು ಮಾತ್ರವಲ್ಲದೆ ಇತರರ ಬೆಳೆಸುವ ಗುಣ ಕಾಣಬಹುದು. ಮುಖ್ಯವಾಗಿ ಆತ್ಮ ಪರಿವರ್ತನೆ, ಆತ್ಮಸಾಕ್ಷಿ ಆತ್ಮೋನ್ನತಿ ಮಾಡಿಕೊಳ್ಳಿ, ಅವರವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡಾಗ ಎಸಗುವ ತಪ್ಪುಗಳ ಅರಿವಾಗಬಹುದು, ತಿದ್ದಿಕೊಳ್ಳಿ ಎಂಬುದನ್ನು ನೋಡಬಹುದು. ವೇದ,ಶಾಸ್ತ್ರ,ಉಪನಿಷತ್ತುಗಳ ಸಾರಗಳನ್ನೇ ಸರಳ ಕನ್ನಡದಲ್ಲಿ ಉಣಬಡಿಸಿದರು. ವಚನಗಳ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವಂತೆ.

*ವೇದಕ್ಕೆ ಒರೆಯ ಕಟ್ಟುವೆ*

*ಶಾಸ್ತ್ರಕ್ಕೆ ನಿಗಳನಿಕ್ಕುವೆ*

*ತರ್ಕದ ಬೆನ್ನು ಬಾರನೆತ್ತುವೆನು*

*ಆಗಮದ ಮೂಗು ಕೊಯ್ವೆ* ಅದ್ಭುತ ಅಲ್ಲವೇ? ಬಸವಣ್ಣನವರ ಒಂದೊಂದು ಅಕ್ಷರಕ್ಕೂ ಎಷ್ಟು ಅರ್ಥಗಳಿವೆ.

*ದೇವನೊಬ್ಬ ನಾಮ ಹಲವು* ಅವರವರ ಮನಸ್ಸು, ಇಚ್ಛೆಗೆ ಸರಿಯಾಗಿ, ಬೇಕಾದ ಭಗವಂತನ ಸ್ಮರಣೆ. ಆದರೆ ಕಾಯಕದಲ್ಲಿಯೇ ಭಗವಂತನ ಕಾಣಿರಿ ಎಂದರವರು. ಪೂರ್ತಿಯಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದರೂ ಸ್ವಲ್ಪವಾದರೂ ಮಹಾತ್ಮರ, ಶಿವಶರಣರ, ಜ್ಞಾನಿಗಳ ಮಾತನ್ನು ಬದುಕಿನ ಹಾದಿಯಲ್ಲಿ ಅಳವಡಿಸೋಣ. ನಮ್ಮ ಮಕ್ಕಳಿಗೂ ಕಲಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ: ಶಿವಶರಣರ ವಚನಸಾರ)