ಬಾಳಿಗೊಂದು ಚಿಂತನೆ - 181
‘ಶೋಕ ಇಲ್ಲದವರು ಯಾರೂ ಇಲ್ಲ. ದು:ಖದ ಸಂಗತಿಗಳು, ನಮ್ಮವರು, ನಮ್ಮ ಬಂಧುಗಳು, ಹಿತೈಷಿಗಳನ್ನು ಕಳಕೊಂಡಾಗ ಅತೀವ ಶೋಕವಾಗುತ್ತದೆ. ಕೆಲವೊಮ್ಮೆ ನಮಗೆ ಏನೂ ಸಂಬಂಧವಿಲ್ಲದಿದ್ದರೂ ಕೆಲವು ವ್ಯಕ್ತಿಗಳ ಅಗಲಿಕೆ ನೋವುಂಟುಮಾಡಿ ಕರುಳು ಹಿಂಡುತ್ತದೆ. (ಇದಕ್ಕೆ ಉದಾಹರಣೆ ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್) ಯಾಕೋ ಮನೆಯ ಹುಡುಗನೇ ಅಂಥ ಅನ್ನಿಸ್ತಾ ಇದೆ. ಮುಖತಾ ನೋಡಿಲ್ಲ, ಮಾತನಾಡಿಲ್ಲ ಆದರೂ ಸಹ. ಕಣ್ಣಲ್ಲಿ ನೀರು ತನ್ನಷ್ಟಕ್ಕೇ ಜಿನುಗುತ್ತದೆ. ಮಾನವೀಯತೆಯ ಯಾವುದೇ ಮುಖಗಳಿಗೆ ನಮ್ಮವರು ತಮ್ಮವರೇ ಆಗಬೇಕಿಲ್ಲ. ಇನ್ನೊಂದಷ್ಟು ಜನರು ತಮ್ಮ ಮನೆಯಲ್ಲೇ ಅವಘಡಗಳು, ಆಘಾತಗಳು ಆದರೂ ಏನೇ ಆಗಿಲ್ಲವೆಂದು ಮಾಮೂಲಿನಂತೆ ಇದ್ದು ಬಿಡುತ್ತಾರೆ. ನಮಗೆ ಅವರನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಮೊನ್ನೆ ಮೊನ್ನೆ ಕಳೆದ ವಾರ ವಾಟ್ಸಪ್ ಬಳಗದಲ್ಲಿ ಓದಿದೆ, ಅವರ ಮನೆಯಲ್ಲಿ ಹಿರಿಯರನ್ನು ಕಳಕೊಂಡ ದಿನವೇ, ಕೆಲವೊಂದು ಸಾಹಿತ್ಯರಚನೆಗಳನ್ನು ಬಳಗದಲ್ಲಿ ಹಾಕಿದ್ದರು. ಬಹಳ ಗಟ್ಟಿಗರು ನೋಡಿ ಅವರು. ಅದೂ ದು:ಖ ಸೂಚಕವೂ ಅಲ್ಲ, ಸಂತಸದ ಕವನ ಇತ್ಯಾದಿ. ಆಗಲಿ ಅಂಥವರು ನಮ್ಮ ನಿಮ್ಮ ನಡುವೆ ಇದ್ದಾರೆ ಎಂದಾಯಿತು. ಅಗಲಿದವರ ಮನೆಯ ಬಂಧುಗಳಲ್ಲಿಗೆ ಹೋಗಿ ಎರಡು ಸಾಂತ್ವನದ ಮಾತುಗಳನ್ನು ಹೇಳಿ ದು:ಖಶಮನ ಮಾಡುವುದು, ಜೀವನೋತ್ಸಾಹ ತುಂಬುವುದು ಮನುಷ್ಯಧರ್ಮ.
ಶೋಕವನ್ನು ಮಾಡುತ್ತಾ ಕುಳಿತರೆ ಹೇಗೆ? ಮುಂದಿನ ಬದುಕಿನ ದಾರಿ ನೋಡಬೇಡವೇ? ಕಷ್ಟಗಳು ಮಾನವರಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯ ಹೇಳಿ? ಕಷ್ಟದಲ್ಲೂ ಸುಖ, ತೃಪ್ತಿ, ನೆಮ್ಮದಿ ಕಂಡುಕೊಳ್ಳುವುದು ಜಾಣತನ.
*ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಮ್/*
*ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಸಮೋ ರಿಪು:*//
ನಮ್ಮಲ್ಲಿರುವ ಆತ್ಮವಿಶ್ವಾಸ,ಧೈರ್ಯವನ್ನು ಶೋಕವು ಕುಗ್ಗಿಸಬಹುದು. ಬುದ್ಧಿವಂತಿಕೆ, ಜ್ಞಾನಕ್ಕೆ ಅಂಧಕಾರ ಆವರಿಸಬಹುದು. ಶೋಕ ಎಂಬುದು ನಮ್ಮ ಶತ್ರುವಿದ್ದಂತೆ. ಏನೇ ಸಂಕಟ ಬರಲಿ ಅತ್ತು ಮನಸ್ಸನ್ನು ನಿರಾಳಮಾಡಿ ಬಿಡಬೇಕು. ಹೃದಯದಲ್ಲಿ ಗೂಡುಕಟ್ಟಿದರೆ ನಿರುತ್ಸಾಹ, ಖಿನ್ನತೆ ಆವರಿಸಬಹುದು. ಇನ್ನೊಂದು ಅನರ್ಥಕ್ಕೆ ದಾರಿ ಮಾಡಿಕೊಡಬಹುದು. ’ಉರಿಯುವ ಬೆಂಕಿಗೆ ಯಾರು ತುಪ್ಪ ಸುರಿಯುವ ಕೆಲಸ ಮಾಡದೆ’ ಸಹಕರಿಸುವ ಗುಣವನ್ನು ಹೊಂದಿ ಎಲ್ಲರಿಗೂ ಬದುಕುವ ಭರವಸೆ ಮೂಡುವಂತೆ ಸಹಕರಿಸೋಣ. ‘ಹಾವು ತನ್ನ ಪೊರೆಯನ್ನು ಕಳಚುವಂತೆ ನಾವು ನಮ್ಮ ಹಳೆಯ ನೋವುಗಳ ಮರೆತು’ ಮುಂದೆ ಮುಂದೆ ಸಾಗಬೇಕು. ಸಮಯ ಆಯುಷ್ಯ ಯಾವುದೂ ಸಹ ಹಿಂದಕ್ಕೆ ಬಾರದೆಂಬ ಪ್ರಜ್ಞೆ ನಮ್ಮಲ್ಲಿದ್ದರೆ, ಅದುವೇ ಆತ್ಮವಿಶ್ವಾಸ, ದೃಢನಿರ್ಧಾರ, ಬದುಕುವ ಲಕ್ಷಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
(ಶ್ಲೋಕ: ಸಂಸ್ಕೃತಿ ಸಂಚಾರ)