ಬಾಳಿಗೊಂದು ಚಿಂತನೆ - 183
ನಮಗೆ ಬದುಕಿನಲಿ ‘ಪರಿಪೂರ್ಣರು’ ಎಂದು ಯಾರೂ ಸಿಗರು. ಒಂದಿಲ್ಲೊಂದು ‘ಕೊರತೆ’ ಇದ್ದೇ ಇರುತ್ತದೆ. ಒಳ್ಳೆಯವರೇ ಸಿಗಲೆಂದು ಹುಡುಕಾಟ ನಡೆಸುತ್ತಾ ಕುಳಿತರೆ ಕಾಲಹರಣ ಆದೀತು. ಆಯುಷ್ಯ ನಷ್ಟವಾಗಬಹುದು. ಸಿಕ್ಕವರನ್ನೇ ಒಳ್ಳೆಯವರನ್ನಾಗಿ ಆರಿಸೋಣ ಮತ್ತು ಪರಿವರ್ತಿಸೋಣ. ಮತ್ತೆ ಎಲ್ಲರೂ ಉತ್ತಮರೇ ಎಂಬುದು ಭ್ರಮೆ, ಕಾಲ್ಪನಿಕ. ಸತ್ಯದ ಹುಡುಕಾಟ ಮಾಡೋಣ. ಎಲ್ಲಿ ಸತ್ಯ ಇದೆಯೋ ಅಲ್ಲಿ ಉಳಿದದ್ದು ನಗಣ್ಯವಲ್ಲವೇ?
ಸತ್ಯ ಎನ್ನುವುದು ವಾಸ್ತವತೆಯ ದರುಶನ. ಅರಸ ಬೇಕಷ್ಟೆ. ಪರಿಶ್ರಮ ಪಡಬೇಕು. ನಾವಿದ್ದಲ್ಲಿಗೆ ಸತ್ಯ ಬರಲಾರದು. ‘ಬೆಳ್ಳಗಿರುವುದೆಲ್ಲ ಹಾಲಲ್ಲ, ಅಲ್ಲಿ ಸುಣ್ಣದ ತಿಳಿನೀರು ಇರಲೂ ಬಹುದು’ ಗಾದೆ ಮಾತು. ಇದು ವಾಸ್ತವ ಸಹ. ಎಷ್ಟೋ ಸಲ ನಂಬಿ ಕೆಡುವುದಿದೆ. ಪೂರ್ತಿ ನಂಬಿದವ ಹಿಂದಿನಿಂದ ಆಡಿಕೊಂಡು ನಗುವುದು, ಮೋಸ ವಂಚನೆ ಮಾಡುವುದು, ಬೆನ್ನಿಗೆ ಇರಿಯುವುದು ಇದೆಲ್ಲ ಮಾಮೂಲು ಎನ್ನಬಹುದು. ಒಬ್ಬರನ್ನೊಬ್ಬರು ಅರಿಯಲು ಬಹಳ ಸಮಯ ಬೇಕು. ಒಂದೆರಡು ದಿನಗಳಲ್ಲಿ ಆಗದು. ಎಷ್ಟು ನಂಬಿಕೆ ಇದ್ದವನಿಂದಲೂ ಮೋಸ ಹೋಗುವುದಿದೆ. ಮೋಸಮಾಡುವವರು ಇರುವಷ್ಟು ದಿನ ಮೋಸ ಹೋಗ್ತಾನೆ ಇರ್ತೇವೆ ಇದೇ ಪ್ರಪಂಚ. ಸಣ್ಣ ಮೀನುಗಳನ್ನು ತಿಂದೇ ದೊಡ್ಡ ಮೀನು ಬದುಕಿದಂತೆ. ಹರಿಯುವ ಪ್ರವಾಹಕ್ಕೆ ಬಿದ್ದಾಗ ಬಲಯುತನಾದವನು ಈಜಾಡಿ ದಡ ಸೇರಬಹುದು. ಉಳಿದವ ಕೊಚ್ಚಿಕೊಂಡು ಹೋಗಬಹುದು. ಒಬ್ಬರನ್ನು ತುಳಿದೇ ಮೇಲೆ ಬರುವುದು ಅವರ ಜಾಯಮಾನ. ಏನೂ ಮಾಡಲಾಗದು. ನಾವೇ ಜಾಗೃತೆ ಮಾಡಬೇಕು. ಆಯ್ಕೆ ಮಾಡುವಾಗಲೇ ಜಾಗೃತೆ ವಹಿಸಬೇಕು. ಬೆಳ್ಳಗೆ ಹಲ್ಲುಬಿಟ್ಟು ಮಾತನಾಡಿದವರೆಲ್ಲ ನಂಬುಗೆಗೆ ಯೋಗ್ಯರೆಂದು ತಿಳಿದರೆ ನಮ್ಮಷ್ಟು ದಡ್ಡರು ಯಾರೂ ಇರಲಾರರು. ಸದಾಚಾರವನ್ನು ಅಷ್ಟು ಬೇಗ ಅಳೆಯಲಾಗದು. ಗುಣಸ್ವಭಾವವೇ ಮುಖ್ಯ. ಅದನ್ನು ಅರಿಯಲು ಅವರೊಂದಿಗೆ ಒಡನಾಟ ಬೇಕು. ಉತ್ತಮ ಶೀಲವಂತರನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿದೆ.
*ಅದ್ರೋಹ: ಸರ್ವಭೂತೇಷು ಕರ್ಮಣಾ ಮನಸಾ ಗಿರಾ*/
*ಅನುಗ್ರಹಶ್ಚ ದಾನಂ ಚ ಶೀಲಮೇತದ್ವಿದುರ್ಬುಧಾ:*//
ಮನಸ್ಸು, ಮಾತು, ಕೃತಿಗಳಿಂದ ಯಾರಿಗೂ ದ್ರೋಹ, ವಂಚನೆ ಮಾಡಬಾರದು. ಅನುಗ್ರಹದ ಗುಣ, ದಾನ ಧರ್ಮಾದಿಗಳನ್ನು ಮಾಡುವುದೇ ಶೀಲವೆಂದು ಪಂಡಿತೋತ್ತಮರು ಅಭಿಪ್ರಾಯ ಪಡುತ್ತಾರೆ. ಶೀಲವೇ ಆಭರಣ ಮುತ್ತು ರತ್ನಗಳಿಗಿಂತಲೂ ದೊಡ್ಡದು. ಸತ್ಯದ ಮಾತುಗಳೇ ಮಾನವನಿಗೆ ಅಲಂಕಾರ. ನಮ್ಮಗಳ ನಡುವೆ ವ್ಯವಹರಿಸುವ ಆಸುಪಾಸಿನವರ ಗುಣಾವಗುಣಗಳ ಅವಲೋಕಿಸಿ ಆಗಬಹುದೆಂದು ಕಂಡರೆ ಕೈನೀಡೋಣ, ಆಗದವರನ್ನು ಆಗುವಂತೆ ಮಾಡಲು ಪ್ರಯತ್ನಿಸೋಣ, ಸಾರ್ಥಕತೆ ಕಂಡುಕೊಳ್ಳೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ