ಬಾಳಿಗೊಂದು ಚಿಂತನೆ - 184
ತಾನು ಮಾತ್ರ ಉತ್ತಮ, ಉಳಿದವರೆಲ್ಲ ಅಧಮರು, ಮಧ್ಯಮರು, ಏನೂ ಪ್ರಯೋಜನವಿಲ್ಲದವರೆಂದು ಯಾವತ್ತೂ ಭಾವಿಸಬಾರದು. ಒಂದಿಲ್ಲೊಂದು ವಿಶೇಷ ಗುಣಗಳನ್ನು ಪ್ರತಿಯೊಂದು ಜೀವಿಯಲ್ಲೂ ದೇವರು ನೀಡಿರುತ್ತಾನೆ. ನಾವೆಲ್ಲ ಅದನ್ನು ಕಂಡವರು. ಆದರೂ ಹೇಳುವುದೊಂದು ಚಪಲ. ಇತರರ ದೋಷಗಳೇ ದೊಡ್ಡದು, ತನ್ನದು ನಗಣ್ಯ, ಆ ಭಾವನೆ ಸಲ್ಲದು. ಯಾರೂ ಪರಿಪೂರ್ಣರಲ್ಲ. ತಮಗೆ ಆಗದವರು ಒಂದು ಸಣ್ಣ ತಪ್ಪು ಮಾಡಿದರೂ ಡಂಗುರ ಸಾರುವುದು ಮನುಷ್ಯಸಹಜ ಗುಣ. ‘ತನ್ನ ಕಣ್ಣ ದೃಷ್ಟಿ ಹಳದಿಯಾದರೆ ಸುತ್ತಲಿರುವವರಿಗೆಲ್ಲ ಹಳದಿ ರೋಗ’ ವೆಂದು ಹೇಳುವುದು ಎಷ್ಟು ಸರಿ? ತಾನು ಹಾಳಾದರೆ ಲೋಕವೇ ಹಾಳಾಗುವುದು ಹೇಗೆ?
*ಆತ್ಮನೀವ ಪರತ್ರಾಪಿ ಪ್ರಾಯಃ ಸಂಭಾವನಾ ಜನೇ*/
*ಯದಸ್ತೇನಾಪಿ ಸ್ತೇನಃ *ಸ್ವದೋಷಾತ್ ಪರಿಶಂಕತೇ//*
‘ತಾನು ಕಳ್ಳ ಪರರ ನಂಬ’ ಹೇಳುವ ಹಾಗೆ. ಕಳ್ಳ ಯಾವಾಗಲೂ ಕಳ್ಳ ಅಲ್ಲದ್ದವರನ್ನೂ ಸಂಶಯ ದೃಷ್ಟಿಯಿಂದಲೇ ನೋಡುವನು. ಕೆಟ್ಟದಕ್ಕೆ ಮಾತ್ರ ಈ ಮಾತಲ್ಲ. ಒಳ್ಳೆಯದಕ್ಕೂ ಅನ್ವಯ ಆಗುವುದು. ಒಳ್ಳೆಯವರು ಬೇರೆಯವರ ಹತ್ತಿರ ಒಳ್ಳೆಯತನವನ್ನೇ ಕಾಣಬಹುದು. ಇದಕ್ಕೆ ಮಹಾಭಾರತಲ್ಲಿ ನಮಗೊಂದು ಉದಾಹರಣೆ ಸಿಕ್ಕುತ್ತದೆ. ಒಂದು ಸಲ ದುರ್ಯೋಧನ ಮತ್ತು ಧರ್ಮರಾಜ ಪ್ರಪಂಚವೆಲ್ಲ ಸುತ್ತಿದರಂತೆ. ದುರ್ಯೋಧನನಿಗೆ ಇಡೀ ಜಗತ್ತಿನಲ್ಲಿ ಒಬ್ಬನೇ ಒಬ್ಬ ಒಳ್ಳೆಯವರು ಪುಣ್ಯಾತ್ಮರು ಕಣ್ಣಿಗೆ ಬಿದ್ದಿರಲಿಲ್ಲವಂತೆ. ಆದರೆ ಧರ್ಮರಾಜನಿಗೆ ಎಲ್ಲಿ ಹೋದರೂ ಪುಣ್ಯಾತ್ಮರು, ಒಳ್ಳೆಯವರೇ ಕಣ್ಣಿಗೆ ಕಂಡರಂತೆ. ಹಾಗಾದರೆ ಇದರ ಅರ್ಥ- ಕೌರವ ಸ್ವಯಂ ಕೆಟ್ಟದ್ದನ್ನೇ, ಕೆಟ್ಟ ಆಲೋಚನೆಗಳನ್ನೇ ಮೈಗೂಡಿಸಿಕೊಂಡ ಕಾರಣ ಎಲ್ಲರೂ ಕೆಟ್ಟವರ ಹಾಗೆ ಕಂಡಿರಬಹುದು. ಸ್ವಯಂ ಪುಣ್ಯಾತ್ಮ ಆದ ಧರ್ಮರಾಜನಿಗೆ ಎಲ್ಲರೂ ಒಳ್ಳೆಯವರೇ ಕಂಡಿರಬಹುದು.
ಪ್ರಪಂಚದಲ್ಲಿ ಈ ರೀತಿಯ ಎರಡು ನಮೂನೆಯ ಅಭಿಪ್ರಾಯ, ಮನೋಭಾವದ ಮನುಷ್ಯರು ಇರ್ತಾರಂತೆ. ನಾವು ಯಾರ ಬಗ್ಗೆಯೂ ಏಕಮುಖ ತೀರ್ಮಾನ ಮಾಡಬಾರದು. ಅವರೊಂದಿಗೆ ಒಡನಾಟ ಮಾಡಿದಾಗಲೇ ಅವರ ಗುಣನಡತೆ ತಿಳಿಯಬಹುದಷ್ಟೆ. ಜಾಗರೂಕತೆ ಬೇಕು. ಒಮ್ಮೆಯೇ ಹೇಳಲಾಗದು. ಸಂಬಂಧಗಳನ್ನು ಬೆಸೆಯುವಾಗ ಎಷ್ಟು ಜಾಗ್ರತೆ ಮಾಡಿದರೂ ಸೋಲುಗಳಾಗುವುದು ಸಹಜ. ವಿಚಾರಿಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದಷ್ಟೂ ಯೋಚಿಸಿ ಮುಂದೆ ಹೆಜ್ಜೆ ಊರೋಣ.
-ರತ್ನಾ ಕೆ.ಭಟ್ ತಲಂಜೇರಿ
(ಸೋಮದೇವ ಸೂರಿಯ ಶ್ಲೋಕ--ಆಧಾರ)
ಚಿತ್ರ ಕೃಪೆ: ಇಂಟರ್ನೆಟ್ ತಾಣ