ಬಾಳಿಗೊಂದು ಚಿಂತನೆ - 185

ಬಾಳಿಗೊಂದು ಚಿಂತನೆ - 185

ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು ಪೂರೈಸುವಲ್ಲಿ, ಸಾಧಿಸುವಲ್ಲಿ ಪ್ರಯತ್ನಿಸಿ, ಸಫಲನಾಗಬೇಕು. ನಾವು ಈ ಜಗತ್ತನ್ನೇ ಬಿಟ್ಟು ಹೋದ ಮೇಲೆ, ಸಾಧಿಸುವುದಾದರೂ ಏನಿದೆ?

ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಎಂದಾದರೆ ನಾಲ್ಕು ದಿನ ನಮ್ಮ ಬಗ್ಗೆ ನೆನಪಿಸಿಯಾರು. ಇಲ್ಲದಿದ್ದರೆ ಅದೂ ಇಲ್ಲ. ಭಗವಂತ ಒಳ್ಳೆಯ ಮನಸ್ಸು, ಶರೀರ, ಕೈಕಾಲುಗಳನ್ನು ಆರೋಗ್ಯಕರವಾಗಿ ನೀಡಿದ್ದಾನೆ ಎಂದ ಮೇಲೆ, ಚೆನ್ನಾಗಿ ದುಡಿಯಲು, ಉತ್ತಮ ರೀತಿಯ ವ್ಯವಹಾರಕ್ಕೆ ಬಳಸಬೇಕು. ‘ನಾನು ಹೀಗೆ’ ಎಂಬ ಧೋರಣೆ ಬೇಡ. ಎಲ್ಲರೊಳು ಒಂದಾಗಿ ಬೆರೆತು ಬಾಳಿದಾಗಲೇ ಜೀವನದ ಸಾರ ಉಣ್ಣಬಹುದಲ್ಲವೇ? ನಮಗೆ ಯಾರದ್ದಾದರೂ ಗುಣನಡತೆ ಹಿಡಿಸಿಲ್ಲವೆಂದಾದರೆ ಅವರಿಂದ ದೂರವಿದ್ದರಾಯಿತು. ಕೂಡಿದಷ್ಟು ಪರಿವರ್ತನೆ ಮಾಡಲು ಪ್ರಯತ್ನಿಸಿ ಮತ್ತೂ ಆಗದಿದ್ದರೆ ದೂರ ಉಳಿಯೋಣ. ಸಮಾಜದ ಜನರನ್ನು ಎಚ್ಚರಿಸುವ, ಬದಲಾವಣೆಯ ಗಾಳಿ ಬೀಸುವ ಕೆಲಸವಾಗಬೇಕು. ಕೆಟ್ಟ ಗುಣಗಳನ್ನು ಕಂಡಾಗ ‘ಹೀಗೆ ಮಾಡುವುದು ಒಳ್ಳೆಯದಲ್ಲ’ ಎಂಬ ಎಚ್ಚರಿಕೆ ಕೇಳುವ ಹಾಗಿದ್ದರೆ ಕೊಡಬಹುದು.

ಆದರೆ ಬಹುತೇಕ ಜನರೂ ಬೇರೆಯವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಂದಿನ ಕಾಲಘಟ್ಟದಲ್ಲಿ ಇಲ್ಲ. ‘ಕೊಚ್ಚೆಗೆ ಕಲ್ಲೆಸೆದರೆ ಎಸೆದವನ ಮುಖಕ್ಕೆ ಬೀಳಬಹುದೆಂಬ ಧೋರಣೆ’ ಯಿಂದಾಗಿ 'ಏನು ಬೇಕಾದರೂ ಮಾಡಲಿ 'ಎಂದು ದೂರವೇ ನಿಲ್ಲುತ್ತಾರೆ. ಹೇಳಿದ್ದನ್ನು ಕೇಳದೆ ಒರಟುತನ ತೋರಿದರೆ ಮತ್ತೇನು ಮಾಡಲು ಸಾಧ್ಯ? ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳಬೇಕಾದರೆ ಅರ್ಧಂಬರ್ಧವಾದ ಜ್ಞಾನ ಪ್ರಯೋಜನವಾಗದು.

*ಎಲ್ಲ ಅರೆಬೆಳಕು ಅರೆಸುಳಿವು ಅರತಿಳಿವುಗಳಿಲ್ಲಿ/*

*ಎಲ್ಲಿ ಪರಿಪೂರಣವೊ ಅದನರಿಯುವನಕ//*

*ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ?/*

*ಎಲ್ಲ ಬಾಳು ರಹಸ್ಯ--ಮಂಕುತಿಮ್ಮ*//

ಜೀವಜಗತ್ತಿನ ಆಗುಹೋಗುಗಳನ್ನು ಅರಿಯಲು ಪ್ರಯತ್ನಮಾಡಬೇಕು. ಸರಿಯಾಗಿ ತಿಳಿಯದೆ ಬದುಕಿನ ರಹಸ್ಯ ಅರಿಯುವುದಾದರೂ ಹೇಗೆ? ಅರ್ಧ ಬೆಳಕು, ಅರ್ಧ ಕುರುಹು, ಅರ್ಧಜ್ಞಾನದಿಂದಾಗಿ ಯಾವುದೂ ಅರ್ಥವಾಗುವುದಿಲ್ಲ. ಸೃಷ್ಟಿಯ ಪೆಟ್ಟಿಗೆಯೊಳಗಿನ ಗುಟ್ಟನ್ನು ತಿಳಿಸುವ, ತಿಳಿಯುವ ಕೆಲಸವಾಗಬೇಕು. ಹೇಳುವವರು ಯಾರೂ ಇಲ್ಲ, ಒಂದು ವೇಳೆ ಅದನ್ನು ಆಚರಣೆಯಲ್ಲಿ ತಂದರೆ ಸ್ವಲ್ಪವಾದರೂ ಪ್ರಯೋಜನವಾಗಬಹುದೆಂಬ ಆಶಯ. ನಾವುಗಳು ಸಾಧ್ಯವಿದ್ದಷ್ಟು ಪ್ರಯತ್ನಿಸೋಣ. ದಾರಿಯಲ್ಲಿ ಎದುರಾಗುವ ಅಡೆತಡೆಗಳನ್ನು,ಸಿಕ್ಕುಗಳನ್ನು ಬಿಡಿಸಿ, ಬದಿಗೆ ಸರಿಸಿ ಮುಂದೆ ಹೋಗೋಣ. ಒಳ್ಳೆಯ ರೀತಿಯಲ್ಲಿ ಗುಣನಡತೆಗಳನ್ನು ಹೊಂದಿ ಹಾಸಿಗೆ ಇದ್ದಷ್ಟೇ ಕಾಲು ಚಾಚಿ ನಮಗೆ ಬೇಕಾದ್ದನ್ನು ಇತಿಮಿತಿಅರಿತು ಪಡೆದುಕೊಳ್ಳಲು,ನಡೆದುಕೊಳ್ಳಲು ಪ್ರಯತ್ನಿಸೋಣ.

-ರತ್ನಾ ಕೆ ಭಟ್ ತಲಂಜೇರಿ

(ಕಗ್ಗ: ಮಾನ್ಯಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ ಸಂಗ್ರಹ)