ಬಾಳಿಗೊಂದು ಚಿಂತನೆ - 186

ಬಾಳಿಗೊಂದು ಚಿಂತನೆ - 186

ನಾವು ಸಿಟ್ಟಿನಲ್ಲಿ ಏನೇನೋ ಮಾತಾಡುತ್ತೇವೆ. ಆಗ ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರುವುದಿಲ್ಲ. ‘ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು’ ಮಾತೇ ಇದೆಯಲ್ಲ? ಕೋಪದಲ್ಲಿ ಕೊಯಿದ ಮೂಗು ಮತ್ತೆ ಬರಲು ಸಾಧ್ಯವೇ? ಸಂಬಂಧಗಳು ಹಾಳಾಗಲು ಸಿಟ್ಟು ಪ್ರಮುಖ ಕಾರಣವಾಗಬಹುದು. ಹೀಗಿರುವ ಸಮಯದಲ್ಲಿ ಮೌನವೇ ಮದ್ದು. ಯೋಗ, ಧ್ಯಾನ, ಓದುವಿಕೆ ಮಾಡಬಹುದು. ಕೆಲವು ಜನ ಮಾತನಾಡಿ ಹೋಗಿ ಬಿಡ್ತಾರೆ. ವಯಸ್ಸಿಗೂ ಬೆಲೆ ಇಲ್ಲ. ಮಾತಾಡಿದ ಮೇಲೆ ಏನಾಗ್ತದೆ ಎನ್ನುವ ಪರಿಜ್ಞಾನವಿಲ್ಲದ ಮನದವರವರು. ಅವರನ್ನು ಸರಿ ಮಾಡಲು, ಅವರ ಮನಸ್ಸನ್ನು ಸರಿಪಡಿಸಲು ನಮಗೆ ಬಿಡಿ ಸೃಷ್ಟಿ ಮಾಡಿದ ಬ್ರಹ್ಮನಿಗೂ ಸಾಧ್ಯವಿಲ್ಲ. ದೂರವಿರುವುದೇ ಕ್ಷೇಮ.

*ವಾಚ್ಯಾವಾಚ್ಚೇಹಿ  ಕುಪಿತೋ ನ ಪ್ರಜಾನಾತಿ ಕರ್ಹಿಚಿತ್/*

*ನಾಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಂ ವಿದ್ಯತೇ ತಥಾ//*

ಕೋಪಿಷ್ಠನು ಮಾಡಬಾರದ್ದನ್ನೆಲ್ಲ ಮಾಡಿಯಾನು ಅವನ ಬಾಯಿಯಲಿ ಬರುವುದೇ ಬೇಡದ ಕೇಳಬಾರದ, ಹೇಳಬಾರದ ಪದಗಳು. ಹಾಗಾಗಿ ಆದಷ್ಟೂ ಕೋಪ ಬಾರದ ಹಾಗೆ ನಮ್ಮ ವ್ಯವಹಾರ ಇರಲಿ. ಕೋಪ, ಸಿಟ್ಟು ಸ್ವಯಂ ನುಂಗಿಕೊಳ್ಳಲು ಅಭ್ಯಾಸ ಮಾಡಿದರೆ ಒಳ್ಳೆಯದು.ಆ ಒಂದು ಕ್ಷಣ ಆಗುವ ಅನಾಹುತ ತಪ್ಪಿಸಲು ಸುಲಭೋಪಾಯ. ಅರಿಷಡ್ವರ್ಗಗಳು ನಮ್ಮ ವೈರಿಗಳು. ಬೇಡ ಎಂದರೂ ಓಡೋಡಿ ಬರುತ್ತವೆ ನಮ್ಮ ಸ್ನೇಹಕ್ಕಾಗಿ. ನಾವೇ ಜಾಗ್ರತೆ ಮಾಡಿ ನಮ್ಮತನವ ಕಾಪಾಡಿಕೊಳ್ಳಬೇಕು. ಬದುಕೆಂದರೆ ಹಾಗೆ ಅಲ್ಲವೇ? ಎಲ್ಲವನ್ನೂ ಸುಧಾರಿಸಿಕೊಂಡು, ಕಷ್ಟ-ಸುಖ, ರಾಗ-ದ್ವೇಷ ಸರಿಸಿಕೊಂಡು ಹೋಗುವುದು. ಕ್ರಮಿಸುವ ಹಾದಿ ಸಮರ್ಪಕವಾಗಿರುವುದು ಮುಖ್ಯ.

-ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ: ಸಂಸ್ಕೃತಿ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಣ