ಬಾಳಿಗೊಂದು ಚಿಂತನೆ - 187
ಸದ್ಗುಣಗಳ ಬಗ್ಗೆ ಹೇಳಿದಷ್ಟೂ ಮುಗಿಯದು. ನೈತಿಕತೆಯಲ್ಲಿ ಮೊದಲಸ್ಥಾನ. ಬಡವನಿರಲಿ, ಧನಿಕನಿರಲಿ ಮೊದಲ ಆದ್ಯತೆ ಒಳ್ಳೆಯತನಕ್ಕೆ. ಜೀವನಾನುಭವದಲ್ಲಿ ಕಂಡಿರುತ್ತೇವೆ, ಕೇಳಿರುತ್ತೇವೆ ‘ಅವರಿಗೆ ಎಷ್ಟು ಸಂಪತ್ತಿದ್ದರೇನು? ಗುಣವೇ ಇಲ್ಲದ ಮೇಲೆ’ ಎಂಬುದಾಗಿ. ಗುಣ ನೋಡಿ ಹೊಸ ಸಂಬಂಧ ಬೆಳೆಸಿ ನಾಣ್ನುಡಿಯೇ ಇದೆಯಲ್ಲ? ಕಸ್ತೂರಿಯ ಸುವಾಸನೆ ಬಚ್ಚಿಡಲು ಸಾಧ್ಯವೇ? ಸದ್ಗುಣಗಳು ನಮ್ಮಲ್ಲಿದ್ದರೆ ನಮ್ಮನ್ನು ಅರಸಿಕೊಂಡು ಬರುತ್ತಾರೆ. ಗುಣಕ್ಕೆ ಮನ್ನಣೆ ಯಾವತ್ತೂ ಇದೆ. ಮಣಿಯಂತೆ ಗುಣಗಳು ನಿತ್ಯವೂ ಶೋಭಿಸುವವು. ದೇಹದ ಮೇಲೆ ಎಲ್ಲಿ ತೊಟ್ಟರೂ ವಿಶೇಷವಾದ ಕಳೆ ಮಣಿಗಳಿಗಿದೆ.
*ಗುಣೋಭೂಷಯತೇ ರೂಪಂ ಶೀಲಂ ಭೂಷಯತೇ ಕುಲಂ/*
*ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಂ//*
ಸೌಂದರ್ಯಕ್ಕೆ ವಿಶೇಷ ಮೆರುಗನ್ನು ಗುಣವು ನೀಡಬಲ್ಲುದು. ಸತ್ ಶೀಲ, ಸದಾಚಾರ, ಸತ್ಯ ಕುಲಕ್ಕೆ ಗೌರವ ತರಬಲ್ಲುದು. ನಾವುಗಳು ವಿದ್ಯೆಯನ್ನು ಸಾಧಿಸುತ ಸಿದ್ಧಿಯ ಪಡೆದರೆ ಅದು ವಿದ್ಯೆಗೆ ಭೂಷಣ. ಸಂಪತ್ತನ್ನು ಕಟ್ಟಿಡುವುದರಿಂದ ಏನು ಪ್ರಯೋಜನ? ಇದ್ದಾಗ ಅನುಭವಿಸಬೇಕು. ನಾಳೆ ಹೋದ ಮೇಲೆ ಹೋದವನಿಗೆ ಏನು ಸಿಕ್ಕಿದ ಹಾಗಾಯ್ತು? ಸುಖ ಪಡದೆ ಹೋದ ಹೇಳಿಯಾರು. ಶರೀರ ನಾಶ ಹೊಂದಿದರೂ ಸದ್ಗುಣಗಳು ನಾಶ ಹೊಂದದಿರಬಹುದು. ಅದರಲ್ಲಿ ಸಾರ್ಥಕತೆಯಿದೆ. ಪರಹಿತಕ್ಕಾಗಿ ಕೈಲಾದ ಸಹಕಾರ ಮಾಡುವ ಗುಣವಿರಲಿ.
-ರತ್ನಾ ಕೆ ಭಟ್ ತಲಂಜೇರಿ
(ಶ್ಲೋಕ: ಚಾಣಕ್ಯನೀತಿ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ