ಬಾಳಿಗೊಂದು ಚಿಂತನೆ - 188

ಬಾಳಿಗೊಂದು ಚಿಂತನೆ - 188

ಭಾಷೆ ಎನ್ನುವುದು ಸಂವಹನ ಕ್ರಿಯೆ. ನಮ್ಮ ಮನದಲ್ಲಾಗುವ ಭಾವನೆಗಳನ್ನು ಸಂಜ್ಞೆಗಳ ಮೂಲಕ ಹೇಳುವ ಬದಲು ಮಾತುಗಳಲ್ಲಿ ವ್ಯಕ್ತಪಡಿಸುತ್ತೇವೆ. ಆಗ ನಮಗೊಂದು ಭಾಷೆಯ ಅಗತ್ಯವಿದೆ. ಅದು ನಮ್ಮ ನಮ್ಮ ಮನೆಯ ಮಾತು. ಮಾತೃಭಾಷೆ. ಅನಂತರ ಶಾಲಾವಾತಾವರಣದಲ್ಲಿ ಕನ್ನಡ, ಮಲೆಯಾಳ, ಸಂಸ್ಕೃತ, ತಮಿಳು, ತೆಲುಗು, ಹಿಂದಿ, ಆಂಗ್ಲಭಾಷೆ ಇರಬಹುದು. ಸಂಸ್ಕೃತ ಭಾಷೆ ವೇದಗಳ ಅಧ್ಯಯನಕ್ಕೆ ಅಗತ್ಯವಾಗಿ ಬೇಕು. ವೈದಿಕ ದಾಖಲೆಗಳು, ವೇದಗಳು, ಪುರಾಣ ಇತಿಹಾಸಗಳು ಪ್ರಾಚೀನ ಕಾಲದಲ್ಲಿ ಸಂಸ್ಕೃತ ಭಾಷೆಯಲ್ಲಿಯೇ ರಚಿಸಲ್ಪಟ್ಟು, ಕೆಲವೊಂದು ಪ್ರಾದೇಶಿಕ ಭಾಷೆಗಳಲ್ಲಿಯೂ ಅನುವಾದಿಸಲ್ಪಟ್ಟಿತೆಂದು ತಿಳಿದುಬರುತ್ತದೆ. ಕಾಲ ಸರಿದಂತೆ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮಹತ್ವ ಸಿಕ್ಕಿತು. ಸಂಸ್ಕೃತ ನಮ್ಮ ಶಾಸ್ತ್ರೀಯ ಭಾಷೆ. ಕರ್ನಾಟಕದ ಕೊಡುಗೆ ಸಂಸ್ಕೃತ ಭಾಷೆಗೆ ಬಹುದೊಡ್ಡದು. ಧಾರ್ಮಿಕ ವೈಜ್ಞಾನಿಕ ನೆಲಗಟ್ಟಿನಲ್ಲಿ ಸಂಸ್ಕೃತಕ್ಕೆ ಮೊದಲ ಸ್ಥಾನ.

*ಭಾಷಾಸು ಮುಖ್ಯಾ ಮಧುರಾ* *ದಿವ್ಯಾ* *ಗೀರ್ವಾಣಭಾರತೀ/*

*ತಸ್ಮಾದ್ಧಿ ಕಾವ್ಯಂ ಮಧುರಂ* *ತತ್ರಾಪಿ ಚ ಸುಭಾಷಿತಂ//*

ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಲ್ಲೂ ತುಂಬಾ ಮಧುರ ವಾದ್ದು ಮತ್ತು ದಿವ್ಯವಾದ್ದು, ಶ್ರೇಷ್ಠ ವಾದ್ದು. ಅದರಲ್ಲೂ ಕಾವ್ಯಗಳು ಅತ್ಯಂತ ಮಧುರ. ಈ ಕಾವ್ಯ ಪ್ರಕಾರಲ್ಲಿ ‘ಸುಭಾಷಿತಗಳು’ ತುಂಬಾ ಮಧುರವೂ, ಶ್ರೇಷ್ಠವೂ ಜೀವನಕ್ಕೆ ಹತ್ತಿರವೂ ಆಗಿದೆ.

ಸಂಸ್ಕೃತವನ್ನು ನಾವು ದೇವಭಾಷೆ ಹೇಳ್ತೇವೆ. ಅಷ್ಟೂ ಪವಿತ್ರವಾದ ಭಾಷೆ. ಒಂದೊಂದು ಶ್ಲೋಕಗಳಲ್ಲಿಯೂ ಎಂತಹ ಅರ್ಥ, ಸಾರಗಳು ಅಡಗಿವೆ. ಓದುತ್ತಾ ಹೋದಂತೆ ಮೈ ರೋಮಾಂಚನ ಆಗುವುದು. ಜೀವನದ ಹಾದಿಯನ್ನು ಸಂಪೂರ್ಣ ತಿಳಿಸುವ ನೈತಿಕ ಮೌಲ್ಯಗಳ ಅಡಕವೇ ಇದೆ. ಹೀಗಿರುವ ಸಂಸ್ಕೃತ ಸಾಹಿತ್ಯದ ಮುಕುಟವಾಗಿರುವ ರತ್ನವೇ ಅಥವಾ ಮುತ್ತುಗಳೇ ಸುಭಾಷಿತಗಳು. ಸುಭಾಷಿತಕ್ಕಿರುವ ಇನ್ನೊಂದು ಹೆಸರೇ ‘ಮುಕ್ತಕ’. ಸಂಸ್ಕೃತ ಸಾಹಿತ್ಯ ಹೇಳುವ ಶರಧಿಯಲ್ಲಿ ಈಜಿದಷ್ಟೂ ಹೆಚ್ಚು ಮುತ್ತುಗಳನ್ನು ನಾವು ಪಡೆಯಬಹುದು. ಸಾಗರದಷ್ಟೇ ವಿಶಾಲವಾದ ವಿಚಾರಶಕ್ತಿಯೂ ಸಿಗಬಹುದು.‌ ಸುಭಾಷಿತಗಳು ಹೆಚ್ಚು ಬರೆಯಲ್ಪಟ್ಟದ್ದು ಸಂಸ್ಕೃತ ಭಾಷೆಯಲ್ಲಿ.ರಾಮಾಯಣ, ಮಹಾಭಾರತ, ವೇದ ಆಗಮಗಳು, ಸ್ಮೃತಿಗಳು, ಮಹಾಕಾವ್ಯಗಳು, ಲಘುಕಾವ್ಯಗಳು, ಉಪನಿಷತ್ತುಗಳು, ದರ್ಶನಗಳು ಇವುಗಳಲ್ಲಿ ಸುಭಾಷಿತಗಳ ಹರಿವನ್ನೇ ಕಾಣಬಹುದು. ಸುಭಾಷಿತಗಳಲ್ಲಿ ನ್ಯಾಯಸಮ್ಮತ ವ್ಯವಹಾರಗಳು, ವಿವೇಕ, ಗುಣನಡತೆ, ಧರ್ಮಾಚಾರ, ಜ್ಞಾನ, ಗೆಳೆತನ, ಪಾಂಡಿತ್ಯ, ನಿಸರ್ಗಪ್ರೇಮ, ನೈತಿಕಮೌಲ್ಯಗಳ ಮಹಾಪೂರವನ್ನೇ ಬರೆಯಲ್ಪಟ್ಟು ನಮಗೆ ನೀಡಿದ್ದಾರೆ. ಆರೋಗ್ಯದ ಕಾಳಜಿ, ಎಚ್ಚರಿಕೆ ಎರಡೂ ಇದೆ. ಸರಳ ಸುಭಾಷಿತ, ಸಂಸ್ಕೃತಿ ಸಂಚಾರ, ಸುಭಾಷಿತ ರತ್ನಾವಳಿ, ಸೂಕ್ತಿಗಳು, ಪದ್ಯಮಾಲಿಕಾ, ರತ್ನಕೋಶ ಹೀಗೆ ಹಲವಾರು ಸುಭಾಷಿತ ಪುಸ್ತಕಗಳು ಲಭ್ಯವಿದೆ. ಪ್ರಾದೇಶಿಕ ಭಾಷೆಯಲ್ಲೂ ಬರೆಯಲ್ಪಟ್ಟಿದೆ. ಜ್ಞಾನದ ಗುಳಿಗೆಗಳಾದ ಈ ಸುಭಾಷಿತಗಳನ್ನು ನಮ್ಮ ಮಕ್ಕಳಿಗೂ ನೀಡೋಣ ಆಗದೇ?

 *ಸತ್ಯಂ ಮಾತಾ ಪಿತಾ ಜ್ಞಾನಂ* *ಧರ್ಮೋ ಭ್ರಾತಾ ದಯಾ ಗುರು:*/

*ಶಾಂತಿರ್ಮಿತ್ರಂ ಕ್ಷಮಾ ಭ್ರಾತ್ರೀ ಷಡೇತೇ ಮಹಾಬಾಂಧವಾ:/*

ಸತ್ಯವೇ ನಮ್ಮ ತಾಯಿ, ಜ್ಞಾನವೇ ತಂದೆ, ಧರ್ಮವೇ ಸಹೋದರ, ದಯೆಯೇ ಗುರು, ಶಾಂತಿಯೇ ಸ್ನೇಹಿತ, ಕ್ಷಮೆಯೇ ಸಹೋದರಿ. ಈ ಆರು ಗುಣಗಳೇ ನಮ್ಮ ನಿಜವಾದ ಬಂಧುಗಳು. ಎಷ್ಟೊಂದು ಅರ್ಥವಿದೆಯಲ್ಲವೇ? ನಮ್ಮ ಬದುಕಿಗೆ ಪೂರಕವಾದ ಈ ಸಂಪತ್ತನ್ನು ಸ್ವೀಕರಿಸಿ ಜ್ಞಾನವನ್ನು ವೃದ್ಧಿಸಿಕೊಳ್ಳೋಣ.

ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ: ಸರಳ ಸುಭಾಷಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ